ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ಸ್ವಚ್ಛತೆ ಜಾಗೃತಿಗೆ ವಿದ್ಯಾರ್ಥಿಗಳ ಚಿತ್ತಾರ

ಸ್ವಚ್ಛತೆಯೇ ಸೇವೆ ಅಭಿಯಾನದಡಿ ಚಟುವಟಿಕೆ: ಯುವಜನರ ಉಚಿತ ಸೇವೆ
Published : 22 ಸೆಪ್ಟೆಂಬರ್ 2024, 4:57 IST
Last Updated : 22 ಸೆಪ್ಟೆಂಬರ್ 2024, 4:57 IST
ಫಾಲೋ ಮಾಡಿ
Comments

ಕಾರವಾರ: ನಗರದ ಉದ್ಯಾನ, ತರಕಾರಿ ಮಾರುಕಟ್ಟೆ, ನಗರಸಭೆ ಕಚೇರಿ ಹೀಗೆ ನಾನಾ ಕಡೆಗಳ ಆವರಣಗೋಡೆಗಳ ಮೇಲೆ ಅಂದದ ಚಿತ್ರಗಳು ಜನರ ಗಮನಸೆಳೆಯುತ್ತಿವೆ. ಅವುಗಳು ಸ್ವಚ್ಛತೆಯ ಕುರಿತು ಪರಿಣಾಮಕಾರಿಯಾಗಿ ಅರಿವು ಮೂಡಿಸುತ್ತಿವೆ. ಈ ಚಿತ್ರಗಳನ್ನು ರಚಿಸಿದವರು ಯಾವ ಫಲಾಪೇಕ್ಷೆಯೂ ಇಲ್ಲದೆ ಸಮಾಜಕ್ಕೆ ಸಂದೇಶ ನೀಡಲು ವಿದ್ಯಾರ್ಥಿಗಳ ತಂಡ.

ಸ್ವಚ್ಛತೆಯೇ ಸೇವೆ ಅಭಿಯಾನದ ಭಾಗವಾಗಿ ನಗರಸಭೆಯು ಕೈಗೊಂಡಿರುವ ವೈವಿಧ್ಯಮಯ ಚಟುವಟಿಕೆಯಲ್ಲಿ ಗೋಡೆ ಬರಹವೂ ಸೇರಿದೆ. ಹೀಗೆ ನಗರದ ವಿವಿಧ ಕಡೆಗಳಲ್ಲಿ ಗೋಡೆ ಬರಹ ಬರೆದುಕೊಡುವ ಜವಾಬ್ದಾರಿಯನ್ನು ಇಲ್ಲಿನ ದಿವೇಕರ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಪಡೆದಿದೆ. ಇವರೆಲ್ಲ ನೆಹರು ಯುವಕೇಂದ್ರದಲ್ಲಿ ಸ್ವಯಂ ಸೇವಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಮಾರು 15ಕ್ಕೂ ಹೆಚ್ಚು ಮಂದಿ ತಂಡದಲ್ಲಿದ್ದಾರೆ. ಕೆಲವರು ಆಗಾಗ ಚಿತ್ರ ರಚನೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ, 12 ಮಂದಿ ವಿದ್ಯಾರ್ಥಿಗಳಾದ ರಾಮನಾಥ ತಾಂಡೇಲ, ರಕ್ಷಿತಾ ನಾಯ್ಕ, ಸಾಕ್ಷತಾ ನಾಯ್ಕ, ಸಂಸ್ಕೃತಿ ಬಾಬ್ರೇಕರ್, ಯಶ್ ಪಟೇಲ್, ಅಕ್ಷಯ ನಾಯಕ, ವಿಶಾಲ ಸಹಾನಿ, ಶ್ರೇಯಾ ಶೆಟ್, ಸುಹಾನಿ ದೇಸಾಯಿ, ಕಶಿಶ್ ನಾಯ್ಕ, ಸ್ಮಿತೇಶ್ ಒಟಾವಣೇಕರ್, ನಾಗೇಂದ್ರ ಮಡಿವಾಳ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ.

‘ಮೂರು ದಿನಗಳಿಂದ ನಿತ್ಯ ಐದು ಗೋಡೆಯ ಮೇಲೆ ಚಿತ್ರ ರಚಿಸುತ್ತಿದ್ದೇವೆ. ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬಲ್ಲ ಪರಿಣಾಮಕಾರಿ ಚಿತ್ರಗಳನ್ನು ರಚಿಸಲಾಗುತ್ತಿದೆ. ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರನ್ನು ಸೆಳೆಯಬಲ್ಲ ಚಿತ್ರ ರಚಿಸಲು ಆದ್ಯತೆ ನೀಡುತ್ತಿದ್ದೇವೆ’ ಎನ್ನುತ್ತಾರೆ ವಿದ್ಯಾರ್ಥಿ ಅಕ್ಷಯ ನಾಯಕ.

‘ಚಿತ್ರ ರಚನೆಗೆ ಅಗತ್ಯ ಬಣ್ಣ, ಪರಿಕರಗಳನ್ನು ನಗರಸಭೆ ಅಧಿಕಾರಿಗಳು ಒದಗಿಸಿದ್ದಾರೆ. ಊಟ, ಉಪಹಾರದ ವ್ಯವಸ್ಥೆಯನ್ನೂ ಒದಗಿಸಿದ್ದಾರೆ. ಕಾಲೇಜಿನ ತರಗತಿ ಮುಗಿದ ಬಳಿಕ ಸಮಾನ ಮನಸ್ಕ ಸ್ನೇಹಿತರೆಲ್ಲ ಒಟ್ಟಾಗಿ ಚಿತ್ರ ರಚನೆಗೆ ಬರುತ್ತಿದ್ದೇವೆ. ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಸದ್ಯ ಪಾಲ್ಗೊಂಡಿದ್ದೇವೆ. ನಗರದ ಇನ್ನಷ್ಟು ಕಾಲೇಜುಗಳ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡು ಕೆಲಸ ಮುಂದುವರೆಸುವ ಗುರಿ ಇದೆ’ ಎಂದರು.

‘ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಈ ಹಿಂದೆಯೂ ಗೋಡೆ ಚಿತ್ರ ಬರೆಯಿಸಲಾಗಿತ್ತು. ಅದು ಪರಿಣಾಮಕಾರಿ ಎನಿಸಿದ್ದರಿಂದ ಈ ಬಾರಿಯೂ ಅದೇ ಚಟುವಟಿಕೆ ಮುಮದುವರೆಸಲಾಗಿದೆ. ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ತಂಡ ಈ ಕೆಲಸದಲ್ಲಿ ಪಾಲ್ಗೊಂಡಿದೆ’ ಎಂದು ನಗರಸಭೆಯ ಆರೋಗ್ಯ ನಿರೀಕ್ಷಕ ಯಾಕೂಬ್ ಶೇಖ್ ಪ್ರತಿಕ್ರಿಯಿಸಿದರು.

ಕಾರವಾರದ ಎಂ.ಜಿ.ರಸ್ತೆಯ ಉದ್ಯಾನದ ಗೋಡೆಯ ಮೇಲೆ ಚಿತ್ರ ಬಿಡಿಸುವಲ್ಲಿ ನಿರತರಾಗಿರುವ ಯುವಕ
ಕಾರವಾರದ ಎಂ.ಜಿ.ರಸ್ತೆಯ ಉದ್ಯಾನದ ಗೋಡೆಯ ಮೇಲೆ ಚಿತ್ರ ಬಿಡಿಸುವಲ್ಲಿ ನಿರತರಾಗಿರುವ ಯುವಕ
ಕಾರವಾರದ ತರಕಾರಿ ಮಾರುಕಟ್ಟೆ ಗೋಡೆಯ ಮೇಲೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಚಿತ್ರ ರಚಿಸಿರುವದು
ಕಾರವಾರದ ತರಕಾರಿ ಮಾರುಕಟ್ಟೆ ಗೋಡೆಯ ಮೇಲೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಚಿತ್ರ ರಚಿಸಿರುವದು

ಕಾರವಾರ ನಗರದ ಹಲವೆಡೆ ಜಾಗೃತಿ ಮೂಡಿಸುವ ಚಿತ್ರ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿರಂತರ ಭಾಗಿ ಅ.2ರ ವರೆಗೂ ಗೋಡೆ ಚಿತ್ರ ರಚನೆ

ಸಮಾಜ ಸೇವೆ ಮಾಡಬೇಕು ಎಂಬ ಯುವ ಮನಸ್ಸುಗಳ ತುಡಿತಕ್ಕೆ ಸ್ವಚ್ಛತೆ ಜಾಗೃತಿಗೆ ಗೋಡೆಚಿತ್ರ ಬಿಡಿಸುವ ಅವಕಾಶ ಸಿಕ್ಕಿದೆ. ಅದನ್ನು ಯಶಸ್ಸವಿಯಾಗಿ ನಿಭಾಯಿಸುತ್ತೇವೆ
ಅಕ್ಷಯ ನಾಯಕ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT