ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬತ್ತುತ್ತಿವೆ ನದಿ, ಜಲಮೂಲಗಳು: ಸಂಘರ್ಷದ ಬದುಕಿನತ್ತ ‘ನೀರುನಾಯಿಗಳು’

Published 16 ಮೇ 2024, 6:27 IST
Last Updated 16 ಮೇ 2024, 6:27 IST
ಅಕ್ಷರ ಗಾತ್ರ

ಶಿರಸಿ: ಭೀಕರ ಜಲಕ್ಷಾಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳೆಲ್ಲ ಬತ್ತತೊಡಗಿವೆ. ನದಿಯಾಶ್ರಿತ ಜೀವಿಗಳು ಕಂಗೆಟ್ಟಿವೆ. ಪಶ್ಚಿಮಘಟ್ಟದ ಜಲಮೂಲದಲ್ಲಿ ಅಪರೂಪವೆನಿಸುವ ನೀರು ನಾಯಿಗಳು ಸಂಘರ್ಷದ ಬದುಕನ್ನು ಸವೆಸುತ್ತಿವೆ. 

ಪ್ರಸಕ್ತ ವರ್ಷದ ಬರಕ್ಕೆ ಜಿಲ್ಲೆಯ ಬಹುತೇಕ ನದಿಗಳಲ್ಲಿ ನೀರಿನ ತುಟಾಗ್ರತೆ ಎದುರಾಗಿದೆ. ವರದಾ ನದಿ ಸಂಪೂರ್ಣ ಬತ್ತಿದರೆ, ಶಾಲ್ಮಲಾ, ಅಘನಾಶಿನಿ, ಕಾಳಿ ನದಿಗಳಲ್ಲಿ ನೀರು ಅಲ್ಪ ಪ್ರಮಾಣದಲ್ಲಿದೆ. ತಿಳಿ ನೀರ ಆಶ್ರಯಿಸಿ ಜೀವನ ಕಟ್ಟಿಕೊಂಡ ನೀರು ನಾಯಿಗಳ ಜೀವನ ಕ್ರಮದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿದೆ.

'ಅಘನಾಶಿನಿ ನದಿ ಈವರೆಗೆ ಅಶುದ್ಧವಾಗಿರದ ಪರಿಣಾಮ ನೀರು ನಾಯಿಗಳು ಆಶ್ರಯ ಪಡೆದಿದ್ದವು. ಆಳದ ನೀರಿನಲ್ಲಿ ಇರುವ ಮೀನುಗಳು, ಏಡಿಗಳು, ಕಪ್ಪೆಗಳು, ಕೊಕ್ಕರೆ, ನೀರುಕೋಳಿ, ಬಾತುಕೋಳಿಗಳು ನೀರುನಾಯಿಗಳ ಪ್ರಮುಖ ಆಹಾರವಾಗಿತ್ತು. ನದಿ ಸಮೀಪದ ಬಂಡೆಗಳ ಪೊಟರೆಗಳಲ್ಲಿ ವಾಸವಿದ್ದವು. ಆದರೆ, ಈ ವರ್ಷದ ಬರಕ್ಕೆ ಅಘನಾಶಿನಿ ನದಿಯಲ್ಲಿನ ಜಲಚರಗಳ ಮೇಲೆ ದುಷ್ಪರಿಣಾಮ ಬೀರಿದೆ’ ಎಂದು ದಂಟಕಲ್ ಗ್ರಾಮದ ವಿನಯ ಹೆಗಡೆ ತಿಳಿಸಿದರು.

‘ಆಹಾರ ಸಿಗದ ಕಾರಣ ನೀರು ನಾಯಿಗಳು ಆಹಾರ ಕೊರತೆಯನ್ನು ಎದುರಿಸುತ್ತಿದ್ದು, ನದಿಗುಂಟ ವಲಸೆ ಹೋಗುತ್ತಿವೆ. ಯಾವುದೇ ನದಿಯಲ್ಲಿ ಕನಿಷ್ಠ ಪಾರಿಸಾರಿಕ ಹರಿವು ಇರುವುದು ಅನಿವಾರ್ಯ. ಕನಿಷ್ಠ ಪಾರಿಸಾರಿಕ ಹರಿವು ಇದ್ದಾಗ ಮಾತ್ರ ನದಿ ನೀರನ್ನು ಅವಲಂಬಿಸಿರುವ ಜೀವಿ, ವೃಕ್ಷ, ಪಕ್ಷಿ ಸಂಕುಲಗಳು ಜೀವಂತ ಇರುತ್ತವೆ. ಅದು ನಿಂತರೆ ಏನು ದುಷ್ಪರಿಣಾಮ ಉಂಟಾಗಲಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ’ ಎಂದು ಅವರು ಹೇಳಿದರು.

'ಘಟ್ಟದ ಮೇಲಿನ ನದಿ ಭಾಗದಲ್ಲಿದ್ದ ನೀರು ನಾಯಿಗಳು ನದಿ ಹರಿವು ಕಡಿಮೆ ಆಗುತ್ತಿದ್ದಂತೆ ಕೆಳಮುಖ ಚಲನೆ ಅನುಸರಿಸಿವೆ. ನದಿಯ ಆಳ ಗುಂಡಿ ಹುಡುಕುವ ಇವು ಘಟ್ಟದ ಕೆಳಭಾಗಕ್ಕೆ ಹೋಗುತ್ತಿವೆ. ನದಿ, ಸಮುದ್ರ ಸೇರುವ ಭಾಗವನ್ನು ಆಶ್ರಯಿಸುವ ಅವುಗಳಿಗೆ ಅವೈಜ್ಞಾನಿಕ ಮೀನುಗಾರಿಕೆ, ನದಿಯಾಳದಲ್ಲಿ ಮರಳು ಗಣಿಗಾರಿಕೆ ಸಮಸ್ಯೆ ತಂದೊಡ್ಡಿವೆ. ಅತಿಯಾಗಿ ಮರಳು ತೆಗೆಯುವುದರಿಂದ ಇವುಗಳ ವಾಸಸ್ಥಾನವಾದ ಕಲ್ಲು ಪೊಟರೆಗಳಿಗೆ ಹಾನಿಯಾಗುತ್ತಿದೆ. ಮರಳು ತೆಗೆಯುವ ಕಾರಣ ಏಡಿಗಳು ಹೆಚ್ಚು ಇರುತ್ತಿಲ್ಲ. ಇದು ನೀರುನಾಯಿಗಳ ವಿನಾಶಕ್ಕೆ ಕಾರಣವಾಗುತ್ತಿದೆ’ ಎಂದು ಶಿರಸಿಯ ಅಮಿತ್ ಹೆಗಡೆ ತಿಳಿಸಿದರು. ಅವರು ನೀರುನಾಯಿಗಳ ಕುರಿತು ಅಧ್ಯಯನ ಮಾಡಿದ್ದಾರೆ.

ಮಲೆನಾಡ ಪರಿಸರ ವ್ಯವಸ್ಥೆಗೆ ಹೊಂದಿಕೊಂಡ ನೀರುನಾಯಿಗಳಿಗೆ ಪ್ರಸಕ್ತ ಸಾಲಿನ ಬರ ನೀರಿನ ಕೊರತೆ ಸಂಕಷ್ಟ ತಂದಿದೆ. ಬದುಕಿಗಾಗಿ ಅವು ಆಳ ಗುಂಡಿಗಳ ಹುಡುಕಾಟಕ್ಕೆ ಅಲೆಯುವುದು ಅನಿವಾರ್ಯವಾಗಿದೆ. 
- ಬಾಲಚಂದ್ರ ಸಾಯಿಮನೆ- ವನ್ಯಜೀವಿ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT