ಕಾರವಾರ: ತಾಲ್ಲೂಕಿನ ವಿವಿಧ ಜಲಪಾತಗಳಿಗೆ, ನದಿಯಂಚಿನ ಪಿಕ್‍ನಿಕ್ ತಾಣಗಳಿಗೆ ಪ್ರವಾಸಿಗರು ತೆರಳುವುದನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಭಾನುವಾರ ಪ್ರಮುಖ ತಾಣದಲ್ಲಿ ಪೊಲೀಸ್ ಕಾವಲು ಹಾಕಲಾಗಿತ್ತು.
ತೊಡೂರು ಸಮೀಪದ ಗೊಲ್ಲಾರಿ ಜಲಪಾತ, ನಾಗರಮಡಿ ಜಲಪಾತ, ಶಿರವಾಡ ಬಳಿಯ ಜಾಂಗಾ ಜಲಪಾತ, ದೇವಳಮಕ್ಕಿ ಸಮೀಪದ ನಗೆಕೋವೆ, ಗೋಟೆಗಾಳಿ, ಅಣಶಿ ಜಲಪಾತ ಸೇರಿದಂತೆ ವಿವಿಧೆಡೆ ನಿಷೇಧದ ಫಲಕ ಅಳವಡಿಸಲಾಗಿತ್ತು. ಜತೆಗೆ ಪೊಲೀಸ್ ಸಿಬ್ಬಂದಿ ಕಾವಲು ನಿಂತು ಜನರು ನೀರಿರುವ ಕಡೆಗೆ ತೆರಳವುದನ್ನು ತಡೆದರು.
ಬಿಸಿಲಿನ ವಾತಾವರಣ ಇದ್ದಿದ್ದರ ಜತೆಗೆ ವಾರಾಂತ್ಯವೂ ಆಗಿದ್ದರಿಂದ ಜನರು ತಂಡೋಪತಂಡವಾಗಿ ಜಲಪಾತಗಳಿಗೆ ಭೇಟಿ ನೀಡಲು ತೆರಳಿದ್ದರು. ಕೆಲವರು ಕುಟುಂಬ ಸಮೇತ ಮೋಜಿಗೆ ಹೋಗಿದ್ದರು. ಆದರೆ ಅವರನ್ನು ಪೊಲೀಸರು ಮರಳಿ ಕಳಿಸಿದರು. ಜಲಪಾತದ ಸೊಬಗು ನೋಡಲು ತೆರಳಿದ್ದ ಜನರು ಬೇಸರದಿಂದ ಮರಳುವಂತಾಯಿತು.
‘ಕೆಲವು ದಿನಗಳಿಂದ ರಭಸದ ಮಳೆ ಸುರಿದಿದ್ದ ಹಿನ್ನೆಲೆಯಲ್ಲಿ ಜಲಪಾತ, ನದಿ ಪ್ರದೇಶಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲು ಜಿಲ್ಲಾಧಿಕಾರಿ ಆದೇಶಿಸಿದ ಪ್ರಕಾರ ಪೊಲೀಸ್ ಇಲಾಖೆಗೆ ಸೂಚನೆ ಕೊಡಲಾಗಿತ್ತು. ಜನರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಆಗಿದೆ’ ಎಂದು ತಹಶೀಲ್ದಾರ್ ನಿಶ್ಚಲ್ ನೊರೋನಾ ಪ್ರತಿಕ್ರಿಯಿಸಿದರು.