ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ ವಿಧಾನಸಭಾ ಕ್ಷೇತ್ರ| ಪಕ್ಷಾಂತರಿಗಳ ನಡುವೆ ಸ್ಪರ್ಧೆ

ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನೇರಾನೇರ ಪೈಪೋಟಿ
Last Updated 26 ಮಾರ್ಚ್ 2023, 16:12 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಯಲ್ಲಾಪುರ–ಮುಂಡಗೋಡ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಕಾಂಗ್ರೆಸ್‍ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್‍ಗೆ ಜಿಗಿದ ನಾಯಕರ ನಡುವೆ ನೇರಾನೇರ ಹಣಾಹಣಿಯ ನಿರೀಕ್ಷೆ ಇದೆ.

ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳ ಜತೆಗೆ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಹಾಲಿ ಕಾರ್ಮಿಕ ಸಚಿವರಾಗಿರುವ ಶಿವರಾಮ ಹೆಬ್ಬಾರ ಬಿಜೆಪಿ ಅಭ್ಯರ್ಥಿಯಾಗುವುದು ನಿಚ್ಚಳವಾಗಿದೆ. ಇವರಿಗೆ ಪ್ರಬಲ ಸ್ಪರ್ಧೆಯೊಡ್ಡಲು ಮಾಜಿ ಶಾಸಕ ವಿ.ಎಸ್.ಪಾಟೀಲ್ ಅಣಿಯಾಗಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಪಕ್ಷ ಇನ್ನೂ ಟಿಕೆಟ್ ಅಂತಿಮಗೊಳಿಸಿಲ್ಲ.

ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಈವರೆಗೆ ಸಮಬಲದ ಹೋರಾಟವನ್ನೇ ನಡೆಸಿವೆ. ಎರಡೂ ಪಕ್ಷಗಳಿಗೂ ತಮ್ಮದೇ ಮತಬ್ಯಾಂಕ್ ಇದೆ. ಇದರ ಹೊರತಾಗಿ ವೈಯಕ್ತಿಕ ವರ್ಚಸ್ಸಿನ ಮೇಲೆ ಗಳಿಸುವ ಮತಗಳು ಗೆಲುವಿಗೆ ನಿರ್ಣಾಯಕವಾಗುತ್ತವೆ.

ಬಿಜೆಪಿಯಲ್ಲಿ ಟಿಕೆಟ್ ಪಡೆಯಲು ಪೈಪೋಟಿ ನಡೆದಿಲ್ಲ. ಆದರೆ ಕಾಂಗ್ರೆಸ್‍ನಲ್ಲಿ ಪೈಪೋಟಿ ಇದೆ. ವಿ.ಎಸ್.ಪಾಟೀಲ್ ಪ್ರಬಲ ಆಕಾಂಕ್ಷಿಯಾಗಿದ್ದರೆ, ಈಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಉದ್ಯಮಿ ಶ್ರೀನಿವಾಸ ಭಟ್ಟ ಧಾತ್ರಿ ಕೂಡ ಸ್ಪರ್ಧೆಯಲ್ಲಿದ್ದಾರೆ. ಕೆಲವು ತಿಂಗಳ ಹಿಂದೆ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಪುತ್ರ ಪ್ರಶಾಂತ ದೇಶಪಾಂಡೆ ಕ್ಷೇತ್ರದಲ್ಲಿ ನಿರಂತರ ಓಡಾಟ ನಡೆಸಿದ್ದರು. ಅವರೂ ಪಕ್ಷದ ಅಭ್ಯರ್ಥಿಯಾಗಲು ಪ್ರಯತ್ನ ನಡೆಸಿದ್ದರು.

2019ರಲ್ಲಿ ಶಿವರಾಮ ಹೆಬ್ಬಾರ ಪಕ್ಷಾಂತರ ಮಾಡಿದ್ದ ಕಾರಣ ಉಪಚುನಾವಣೆಯನ್ನು ಈ ಕ್ಷೇತ್ರ ಕಂಡಿತ್ತು. ಕಾಂಗ್ರೆಸ್‍ನಿಂದ ಗೆದ್ದು ಶಾಸಕರಾಗಿದ್ದ ಹೆಬ್ಬಾರ ಒಂದೇ ವರ್ಷದಲ್ಲಿ ಬಿಜೆಪಿ ಸೇರ್ಪಡೆಗೊಂಡು ಮತ್ತೆ ಚುನಾವಣೆ ಎದುರಿಸಿ ಪುನಃ ಗೆಲುವು ಸಾಧಿಸಿದ್ದರು.

90ರ ದಶಕದಲ್ಲಿ ಬಿಜೆಪಿಯಲ್ಲಿದ್ದ ಶಿವರಾಮ ಹೆಬ್ಬಾರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರಿದ್ದರು. 2008ರ ಚುನಾವಣೆಯಲ್ಲಿ ಸ್ಪರ್ಧಿಸಿ ವಿ.ಎಸ್.ಪಾಟೀಲ್ ಎದುರು ಸೋಲು ಕಂಡಿದ್ದರು. ಬಳಿಕ 2013, 2018ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದಿದ್ದರು. ವಿ.ಎಸ್.ಪಾಟೀಲ್ ಬಿಜೆಪಿಯಿಂದ 2008ರಲ್ಲಿ ಒಂದು ಅವಧಿಗೆ ಶಾಸಕರಾಗಿದ್ದರು. ನಂತರದ ಎರಡು ಚುನಾವಣೆಯಲ್ಲೂ ಸೋಲು ಕಂಡಿದ್ದಾರೆ. 2020ರಲ್ಲಿ ಅವರು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಸಚಿವ ಹೆಬ್ಬಾರ ಜತೆಗಿನ ರಾಜಕೀಯ ಮನಸ್ತಾಪದಿಂದ ಪಕ್ಷದ ತೊರೆದು ಕಳೆದ ವರ್ಷ ಕಾಂಗ್ರೆಸ್ ಸೇರಿದ್ದಾರೆ.

ಜೆಡಿಎಸ್ ಕ್ಷೇತ್ರದಲ್ಲಿ ಅಷ್ಟಾಗಿ ಭದ್ರವಾಗಿಲ್ಲ. ಆದರೂ ಒಂದಷ್ಟು ಮತ ಸೆಳೆಯಬಹುದು ಎಂಬ ನಿರೀಕ್ಷೆ ಇದೆ. ಅಲ್ಲಿ ಅಭ್ಯರ್ಥಿಗಳಾಗಲು ಯಲ್ಲಾಪುರದ ಉದ್ಯಮಿ ಸಂತೋಷ ರಾಯ್ಕರ್, ಶಿರಸಿಯ ನಿವೃತ್ತ ಪ್ರಾಧ್ಯಾಪಕ ನಾಗೇಶ ನಾಯ್ಕ ಕಾಗಾಲ ಪೈಪೋಟಿ ನಡೆಸುತ್ತಿದ್ದಾರೆ.

ಇಂದು...

ಕಾರ್ಮಿಕ ಸಚಿವರಾಗಿರುವ ಶಿವರಾಮ ಹೆಬ್ಬಾರ ಅವರಿಗೆ ಕಳೆದ ಉಪಚುನಾವಣೆಯಲ್ಲಿ ಬೆಂಬಲಿಸಿದ್ದ ವಿ.ಎಸ್.ಪಾಟೀಲ್ ಬಿಜೆಪಿ ತೊರೆದು ಕಾಂಗ್ರೆಸ್ ಪಾಳಯಕ್ಕೆ ಜಿಗಿದಿದ್ದಾರೆ. ಸಚಿವರಾದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದಿರುವುದಾಗಿ ಹೆಬ್ಬಾರ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ಪಡೆದಿಲ್ಲ ಎಂಬ ಗುರುತರ ಆರೋಪ ಅವರ ಮೇಲಿದೆ. ಇದರಿಂದ ಪಕ್ಷದೊಳಗೆ ಅಪಸ್ವರ ಎದ್ದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಬಿಜೆಪಿಯಲ್ಲೇ ಗುರುತಿಸಿಕೊಂಡು ದಶಕಗಳ ಕಾಲ ರಾಜಕೀಯ ಮಾಡಿರುವ ವಿ.ಎಸ್.ಪಾಟೀಲ್ ಹೆಬ್ಬಾರ ಅವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯದ ಕಾರಣ ಮುಂದಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಅವರು ಪ್ರಬಲ ಪೈಪೋಟಿಗೆ ಇಳಿಯಲು ಕಾದು ಕುಳಿತಿದ್ದಾರೆ. ಆದರೆ ಟಿಕೆಟ್ ಪಡೆಯಲು ಅವರೊಟ್ಟಿಗೆ ಇರುವ ಶ್ರೀನಿವಾಸ ಭಟ್ಟ ಧಾತ್ರಿ ಕೂಡ ಸ್ಪರ್ಧೆಗೆ ಇಳಿದಿದ್ದಾರೆ.

2019ರ ಉಪಚುನಾವಣೆ ಫಲಿತಾಂಶ

ಅಭ್ಯರ್ಥಿ;ಪಕ್ಷ;ಪಡೆದ ಮತ

ಶಿವರಾಮ ಹೆಬ್ಬಾರ;ಬಿಜೆಪಿ;80,442

ಭೀಮಣ್ಣ ನಾಯ್ಕ;ಕಾಂಗ್ರೆಸ್;49,034

ಚೈತ್ರಾ ಗೌಡ;ಜೆಡಿಎಸ್;1235

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT