ಸೋಮವಾರ, ಆಗಸ್ಟ್ 15, 2022
27 °C
ವಿಜಯನಗರ ಜಿಲ್ಲೆಯಲ್ಲಿ 2.81 ಲಕ್ಷ ಹೆಕ್ಟೇರ್‌ನಲ್ಲಿ ಶೇ 30ರಷ್ಟು ಬಿತ್ತನೆ

ವಿಜಯನಗರ | ಮುನಿಸಿಕೊಂಡ ಮಳೆ; ಬಿತ್ತನೆಗೆ ಹಿನ್ನಡೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಮಳೆರಾಯ ಮುನಿಸಿಕೊಂಡಿದ್ದರಿಂದ ಜೂನ್‌ನಲ್ಲಿ ಜಿಲ್ಲೆಯಾದ್ಯಂತ ಬಿತ್ತನೆಗೆ ಭಾರಿ ಹಿನ್ನಡೆ ಉಂಟಾಗಿದೆ.

ಜಿಲ್ಲೆಯಲ್ಲಿ ನೀರಾವರಿ ಹಾಗೂ ಮಳೆಯಾಶ್ರಿತ ಸೇರಿ ಒಟ್ಟು 2.81 ಲಕ್ಷ ಹೆಕ್ಟೇರ್‌ ಕೃಷಿ ಜಮೀನಿದೆ. ಜೂನ್‌ ತಿಂಗಳು ಮುಗಿಯಲು ಇನ್ನೊಂದು ವಾರ ಬಾಕಿ ಉಳಿದಿದೆ. ಆದರೆ, ಇದುವರೆಗೆ ಶೇ 30ರಷ್ಟೇ ಬಿತ್ತನೆ ಆಗಿದೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಈಗಾಗಲೇ ಬಿತ್ತನೆ ಆಗಿರುವ ಪ್ರದೇಶದಲ್ಲಿ ಬೀಜ ಮೊಳಕೆಯೊಡೆಯದೇ ನೆಲದಲ್ಲಿ ಹಾಳಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಶೇ 31ರಷ್ಟು ಜಮೀನಿನಲ್ಲಿ ಮುಸುಕಿನ ಜೋಳ, ಹೈಬ್ರಿಡ್‌ ಜೋಳ, ಹೆಸರು, ತೊಗರಿ, ಹೆಸರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜೂನ್‌ನಲ್ಲಿ ಸರಾಸರಿ ಮಳೆಯ ಪ್ರಮಾಣ 7–8 ಸೆಂ.ಮೀ. ಅಷ್ಟಾಗುತ್ತದೆ. ಆದರೆ, ಸದ್ಯ 1 ಸೆಂ.ಮೀ. ಗಿಂತ ಕಡಿಮೆ ಮಳೆಯಾಗಿದೆ. ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಬೀಸುತ್ತಿರುವುದರಿಂದ ತೇವಾಂಶ ಕೂಡ ಇಲ್ಲದಂತಾಗಿದೆ. ಈ ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆ ಮಾಡಿದವರಿಗೆ ಸಂಕಷ್ಟ ಎದುರಿಸಬೇಕಾಗಬಹುದು.

‘ಈ ಸಲ ಉತ್ತಮ ಮುಂಗಾರು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದರಿಂದ ಹತ್ತು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ. ಇನ್ನೇನು ತಿಂಗಳಾಗುತ್ತ ಬಂತು. ಮಳೆಯ ಸೂಚನೆ ಇಲ್ಲ. ಇದೇ ಪರಿಸ್ಥಿತಿ ಇದ್ದರೆ ಎಲ್ಲ ಹಾಳಾಗುವ ಆತಂಕ ಕಾಡುತ್ತಿದೆ. ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ರೈತಾಪಿ ಮಾಡುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಹಡಗಲಿಯ ರೈತ ಸೋಮೇಶ್ವರ್‌.

ಬಿತ್ತನೆ ತಡವಾದರೆ ಇಳುವರಿ ಕುಸಿತ: ಈಗಾಗಲೇ ಬಿತ್ತನೆ ಮಾಡಿದವರು ಹಾಗೂ ಬಿತ್ತನೆಗೆ ಎದುರುನೋಡುತ್ತಿರುವವರು ಮಳೆಯ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿತ್ತನೆ ಮಾಡಿದವರಿಗೆ ಹೂಡಿಕೆ ಮಾಡಿರುವ ಬಂಡವಾಳದ ಚಿಂತೆಯಾದರೆ, ಬಿತ್ತನೆ ಮಾಡುವುದು ತಡವಾದರೆ ಇಳುವರಿ ಕುಸಿಯಬಹುದು ಎಂಬ ಆತಂಕ ಇನ್ನೊಂದು ವರ್ಗದ ರೈತರ ಚಿಂತೆಗೆ ಕಾರಣ.

‘ಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ದೊಡ್ಡ ಮಳೆಗಳು ಬರಲಿವೆ. ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಕಿಲ್ಲ. ಇನ್ನೊಂದು ವಾರದೊಳಗೆ ಮಳೆಯಾದರೆ ಮುಸುಕಿನ ಜೋಳ, ಶೇಂಗಾ, ನವಣೆ ಬಿತ್ತನೆ ಮಾಡುವುದು ಉತ್ತಮ. ಬಿತ್ತನೆಗೆ ವಿಳಂಬವಾದರೆ ಸಹಜವಾಗಿಯೇ ಇಳುವರಿ ಕಡಿಮೆಯಾಗುತ್ತದೆ. ಮಳೆಯಾಗಲಿ, ಆಗದೆಯೇ ಇರಲಿ ಎಲ್ಲ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಬೆಳೆ ಕೈಕೊಟ್ಟರೆ ಪರಿಹಾರ ಪಡೆಯಬಹುದು’ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌ ಹೇಳಿದರು.

ಜಿಲ್ಲೆಯಲ್ಲಿ ಯಾವ ಬೆಳೆ ಎಷ್ಟು ಬಿತ್ತನೆ (ಹೆಕ್ಟೇರ್‌ಗಳಲ್ಲಿ)

42.8ಮುಸುಕಿನ ಜೋಳ
50.5ಹೈಬ್ರಿಡ್‌ ಜೋಳ
23.5ಸಜ್ಜೆ
30.8ತೊಗರಿ
44ಹೆಸರು

ವಿಜಯನಗರ ಜಿಲ್ಲೆ ನೀರಾವರಿ, ಮಳೆಯಾಶ್ರಿತ ಪ್ರದೇಶದ ವಿವರ

81805 ಹೆಕ್ಟೇರ್‌ನೀರಾವರಿ ಪ್ರದೇಶ
250989 ಹೆಕ್ಟೇರ್ಮಳೆಯಾಶ್ರಿತ ಪ್ರದೇಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.