ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿಕರ ಮನಸ್ಸು ಅರ್ಥ ಮಾಡಿಕೊಂಡಿದ್ದಕ್ಕೆ ಮತ್ತೆ ಶಾಸಕನಾದೆ: ಎಚ್‌.ಆರ್.ಗವಿಯಪ್ಪ

ಹಸಿರಿನೊಂದಿಗೆ ಮಾತುಕತೆ ವಾರ್ಷಿಕೋತ್ಸವ–ಕೃಷಿ ಸಾಧಕರ ಕುರಿತ ಕೃತಿ ಬಿಡುಗಡೆ: ಗವಿಯಪ್ಪ ಖುಷಿ
Published 30 ಜೂನ್ 2024, 14:36 IST
Last Updated 30 ಜೂನ್ 2024, 14:36 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಭಾನುವಾರ ‘ಹಸಿರಿನೊಂದಿಗೆ ಮಾತುಕತೆ’ಯ ಮೊದಲ ವರ್ಷಾಚರಣೆ ಕೃತಿ ಬಿಡುಗಡೆ ರೂಪದಲ್ಲಿ ವಿಶಿಷ್ಟವಾಗಿ ನಡೆಯಿತು. ಒಂದು ವರ್ಷ ಜಿಲ್ಲೆಯ ಹಲವು ಪ್ರಗತಿಪರ ಕೃಷಿಕರ ತೋಟಗಳಲ್ಲಿ ನಡೆದ ಸಂವಾದದ ಸಾರಾಂಶದ ರೀತಿಯಲ್ಲಿ ಕಾರ್ಯಕ್ರಮ ಮೂಡಿಬಂತು.

‘ಹಸಿರಿನೊಂದಿಗೆ ಮಾತುಕತೆ’ ನಡೆದ ತೋಟಗಳ ಮಾಲೀಕರೂ ಆಗಿರುವ ಪ್ರಗತಿಪರ ಕೃಷಿಕರು ಹಾಗೂ ಇತರ ಹಲವು ಕೃಷಿಕರು ತಮ್ಮ ಅನುಭವ ಹಂಚಿಕೊಂಡರು. ಕೃಷಿ ಇಲಾಖೆಯೇ ಇದೆಲ್ಲದಕ್ಕೂ ವೇದಿಕೆಯಾಗಿ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್‌.ಆರ್.ಗವಿಯಪ್ಪ, ‘ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಸೋತ ನಂತರ ನಾನು ನನ್ನ ತೋಟದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡೆ ಹಾಗೂ ಕೃಷಿಕರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಅದುವೇ ನನ್ನ ಗೆಲುವಿಗೆ ದಾರಿಮಾಡಿಕೊಟ್ಟಿತು’ ಎಂದರು.

‘ನಾನು ಯಾಕೆ ಸೋತೆ ಎಂಬ ಆತ್ಮಾವಲೋಕನ ನನ್ನ ತೋಟದಲ್ಲಿ ನನಗಾಯಿತು. ಕೃಷಿ ತೋಟದ ಸಾಂಗತ್ಯ ನನಗೆ ಒಂದಷ್ಟು ಮಾರ್ಗಗಳನ್ನು ತೋರಿಸಿತು. ಅದೇ ಕಾರಣದಿಂದ ರೈತರ ಕಷ್ಟಗಳ ಅರಿವೂ ಆಗಿದೆ. ಮಾಗಣೆ ರಸ್ತೆಗಳ ಸಮಸ್ಯೆ  ನೀಗಿಸಿದರೆ ಕಬ್ಬು, ಇತರ ಕೃಷಿ ಉತ್ಪನ್ನಗಳ ಸಾಗಣೆ ವೆಚ್ಚ ತಗ್ಗುತ್ತದೆ, ಹೀಗಾಗಿ ಈ ರಸ್ತೆಗಳ ದುರಸ್ತಿ, ಸುಧಾರಣೆಗೆ ಹೆಚ್ಚಿನ ಗಮನ ಹರಿಸಿದ್ದೇನೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್‌ ಮಾತನಾಡಿದರು.

ಹಗರಿ ಕೃಷಿ ಕಾಲೇಜಿನ ಸಹ ಪ್ರಾಧ್ಯಾಪಕಿ ಶಿಲ್ಪಾ ಎಚ್‌. ಅವರು ಬಾಳೆಯ ಮೌಲ್ಯವರ್ಧನೆ, ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆಯ ತಂಡ ನಾಯಕ ಆರ್.ದೊರೆಸ್ವಾಮಿ, ಪ್ರಗತಿಪರ ಕೃಷಿಕ ವಿಶ್ವೇಶ್ವರ ಸಜ್ಜನ್‌ ಮಾಹಿತಿ ನೀಡಿದರು.

ಹಸಿರುನೊಂದಿಗೆ ಮಾತುಕತೆ ಮೊದಲ ಬಾರಿಗೆ ಆರಂಭವಾದ ತೋಟದ ಮಾಲೀಕ ಹಾಗೂ ಪ್ರಗತಿಪರ ಕೃಷಿಕ ಬಸಯ್ಯ ಸ್ವಾಮಿ ವೇದಿಕೆಯಲ್ಲಿದ್ದರು. ಗಂಗಾವತಿ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಬದರಿಪ್ರಸಾದ್ ಪಿ.ಆರ್. ಕೃತಿ ಪರಿಚಯ ಮಾಡಿದರು.

ಮಣ್ಣಿನ ಮಡಿಕೆಗೆ ಸಿರಿಧಾನ್ಯ ಸುರಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಿಡುಗಡೆ ಮಾಡಲಾದ ಪುಸ್ತಕದ ಮೊದಲ ಪ್ರತಿಯನ್ನು ಪುಸ್ತಕದ ಮುಖಪುಟದಲ್ಲಿರುವ ಮಹಿಳೆ ಫಕೀರಮ್ಮ ಅವರಿಗೆ ನೀಡಲಾಯಿತು. ಹಸಿರಿನೊಂದಿಗೆ ಮಾತುಕತೆ ಬಳಗದ ಸಂಚಾಲಕ ಮಲ್ಲಿಕಾರ್ಜುನ ಹೊಸಪಾಳ್ಯ ಪ್ರಾಸ್ತಾವಿಕ ಮಾತನಾಡಿದರು. ವಾರ್ಷಿಕೋತ್ಸವ ನೆನಪಿನಲ್ಲಿ ಜೆ.ಡಿ.ಕಚೇರಿ ಆವರಣದಲ್ಲಿ ಹೊಂಗೆ ಗಿಡವನ್ನು ಶಾಸಕರು ನೆಟ್ಟರು. 

‘ಕೃಷಿ ಅನುಭವಗಳ ಕಥನ’

‘ಹಸಿರು ಮಾತುಕತೆ’ ಪುಸ್ತಕ ಒಂದು ವರ್ಷ ವಿಜಯನಗರ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದ ‘ಹಸಿರಿನೊಂದಿಗೆ ಮಾತುಕತೆ’ ಕಾರ್ಯಕ್ರಮದ ಸಾರಾಂಶ ರೂಪದಲ್ಲಿದ್ದು ಹಲವು ಪ್ರಗತಿಪರ ಕೃಷಿಕರ ಯಶೋಗಾಥೆ ಇದರಲ್ಲಿದೆ. ಹುಲಿಕೆರೆಯ ವಿಶ್ವೇಶ್ವರ ಸಜ್ಜನ ನಂದೀಪುರದ ಮಹೇಶ್ವರ ಸ್ವಾಮೀಜಿ ಕಮಲಾಪುರದ ಪಂಪಯ್ಯ ಮಳೇಮಠ ವೆಂಕಟಾಪುರದ ಅನ್ನಪೂರ್ಣ ದೇವದಾಸಿ ಕೂಪದಿಂದ ಹೊರಬಂದು ಕೃಷಿ ಮಾಡುತ್ತಿರುವ ಈಶ್ವರಮ್ಮ ಸಿರಿಧಾನ್ಯ ಬೆಳೆಯುವ ಪಾಪಿನಾಯಕನಹಳ್ಳಿಯ ಫಕೀರಮ್ಮ ದೇಸೀ ಬೀಜ ಸಂರಕ್ಷಕ ಕಲ್ಲಪ್ಪ ಅಕ್ಕಡಿ ಬೇಸಾಯದಲ್ಲಿ ಪರಿಣಿತರಾದ ಕೊಟ್ಟೂರಿನ ಕೋಟ್ಯಪ್ಪ ಅನಂತಶಯನಗುಡಿಯ ಪ್ರಸನ್ನ ಆನೆಹೊಸೂರಿನ ಸಣ್ಣಕ್ಕಿ ಕುಟುಂಬ ಒಣಭೂಮಿ ತೋಟಗಾರಿಕೆ ಮಾಡುತ್ತಿರುವ ವಸಂತ ಮಾಲವಿ ಮುಂತಾದ 12 ರೈತರ ಕೃಷಿ ಬದುಕನ್ನು ಪುಸ್ತಕದಲ್ಲಿ ನಿರೂಪಿಸಲಾಗಿದೆ. ಜೊತೆಗೆ ವಿಜಯನಗರ ಅರಸರ ಕಾಲದಲ್ಲಿ ಇಲ್ಲಿನ ಕೃಷಿ ವಿವರಗಳು ಈ ಜಿಲ್ಲೆಯ ವಿಶಿಷ್ಟ ಬಾಳೆ ತಳಿಗಳಾದ ಸಕ್ಕರೆ ಬಾಳೆ ಮತ್ತು ಸುಗಂಧಿ ಬಾಳೆ ಬಗ್ಗೆಯೂ ಮಾಹಿತಿ ನೀಡಿರುವುದು ಪುಸ್ತಕದ ವೈಶಿಷ್ಟ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT