ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಕಬಳಿಕೆ ಆರೋಪ | ₹50 ಲಕ್ಷಕ್ಕೆ ನನ‌ಗೆ ಬ್ಲ್ಯಾಕ್‌ಮೇಲ್‌: ಆನಂದ್‌ ಸಿಂಗ್

ಸಚಿವರ ಮಗ, ಭಾಮೈದನ ವಿರುದ್ಧ ದೇಗುಲದ ಇನಾಮ ಜಮೀನು ಕಬಳಿಸಿದ ಆರೋಪ
Last Updated 23 ಮಾರ್ಚ್ 2023, 12:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್‌. ಕುಮಾರಸ್ವಾಮಿ ಅವರು ₹50 ಲಕ್ಷಕ್ಕಾಗಿ ನನಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಹಣ ಕೊಡದ ಕಾರಣ ನನ್ನ ಮಗ ಸಿದ್ದಾರ್ಥ ಸಿಂಗ್‌ ವಿರುದ್ಧ ಸರ್ಕಾರಿ ಜಮೀನು ಕಬಳಿಸಿದ ಆರೋಪ ಮಾಡುತ್ತಿದ್ದಾರೆ. ನನ್ನ ಮಗ ಅವರ ವಿರುದ್ಧ ಮಾನನಷ್ಟ ಕ್ರಿಮಿನಲ್‌ ಮೊಕದ್ದಮೆ ಹೂಡಲು ತೀರ್ಮಾನಿಸಿದ್ದಾನೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ತಾಲ್ಲೂಕಿನ ವೆಂಕಟಾಪುರದಲ್ಲಿ ಗುರುವಾರ ಕೆರೆ ತುಂಬಿಸುವ ಯೋಜನೆ ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 11 ಜನ ಇನಾಮ ಜಮೀನು ಕಬಳಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಅದರಲ್ಲಿ ನನ್ನ ಹೆಸರಿಲ್ಲ. ನನ್ನ ಮಗ ಸಿದ್ದಾರ್ಥ ಸಿಂಗ್‌, ಭಾಮೈದ ಧರ್ಮೇಂದ್ರ ಸಿಂಗ್‌ ಹೆಸರಿದೆ. ಇತರೆ ಒಂಬತ್ತು ಜನ ಯಾರೆಂಬುದು ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ಸುಮಾರು ವರ್ಷಗಳ ಹಿಂದೆ ಬೇರೆಯವರ ಮೂಲಕ ನನ್ನ ಬಳಿ ಬಂದಿದ್ದರು. ಜಮೀನಿನ ಕುರಿತು ಹೇಳಿದಾಗ ನನ್ನ ಮಗ ಖರೀದಿಸಿದರೆ ಅದರಲ್ಲಿ ತಪ್ಪೇನಿದೆ ಎಂದಿದ್ದೆ. ನಿಮ್ಮ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿ, ಬೇರೆಯವರ ಮೂಲಕ ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ನನ್ನ ಮಗ ಸ್ವತಃ ಎಲ್‌.ಎಲ್‌.ಬಿ ಪದವೀಧರ. ಅವನಿಗೆ ಕಾನೂನಿನ ಜ್ಞಾನವಿದೆ. ವಕೀಲರೊಂದಿಗೆ ಚರ್ಚಿಸಿದ್ದು, ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಲಾಗಿದೆ ಎಂದರು.

ಕುಮಾರಸ್ವಾಮಿ ಬೆಂಗಳೂರಿಗೆ ಬಂದು ಮಾತನಾಡಿದ್ದರು. ಅವರು ಕೇಳಿದಷ್ಟು ಹಣ ಕೊಟ್ಟಿಲ್ಲ. ಅವರು ಮಾತಾಡಿರುವ ಆಡಿಯೊ ಹುಡುಕುತ್ತಿರುವೆ. ಮೊಬೈಲ್‌ ಬದಲಿಸಿರುವುದರಿಂದ ಸಿಗುತ್ತಿಲ್ಲ. ಈಗ ಚುನಾವಣೆ ಸಂದರ್ಭ ಇರುವುದರಿಂದ ನಮ್ಮ ಕುಟುಂಬದವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನನ್ನ ಮಗ ಸಿದ್ದಾರ್ಥ ಸಿಂಗ್‌ಗೆ ಮದುವೆಯಾಗಿದೆ. ಒಂದು ಮಗುವಿದೆ. ಅವನಿಗೆ ಏನು ಮಾಡಬೇಕೆಂಬ ತಿಳಿವಳಿಕೆ ಇದೆ. ನನ್ನ ಭಾಮೈದ ಧರ್ಮೇಂದ್ರ ಸಿಂಗ್‌ ಕೂಡ ಅಷ್ಟೇ. ನನ್ನ ಸಂಬಂಧಿಕರು, ಸ್ನೇಹಿತರು ಏನು ಬೇಕಾದರೂ ಮಾಡಬಹುದು. ಸರ್ಕಾರಕ್ಕೆ ಸೇರಿದ ಇನಾಮ, ಹಳ್ಳದ ಜಮೀನು ಖರೀದಿಸಲು ಯಾರಿಗೂ ಬರುವುದಿಲ್ಲ ಎಂದರು.

ಹಾಲಿ ನಗರಸಭೆಯ ಪಕ್ಷೇತರ ಸದಸ್ಯ ಅಬ್ದುಲ್‌ ಖದೀರ್‌ ಅವರ ಹೆಸರು ರೌಡಿಶೀಟರ್‌ ಪಟ್ಟಿಯಲ್ಲಿದೆ. ಅದೇ ರೀತಿ ಮಾಜಿ ನಗರಸಭೆ ಸದಸ್ಯ ಡಿ. ವೇಣುಗೋಪಾಲ್‌ ಕೂಡ ರೌಡಿಶೀಟರ್‌. ಇದೆಲ್ಲ ರೌಡಿಶೀಟರ್‌ಗಳ ಒಂದು ಗುಂಪು ಇದ್ದ ಹಾಗೆ ಕಾಣಿಸುತ್ತಿದೆ. ಇದೇ ಅಬ್ದುಲ್‌ ಖದೀರ್‌ ನಾನು ಸರ್ಕಾರಿ ಜಮೀನು ಅತಿಕ್ರಮಿಸಿ ಮನೆ ಕಟ್ಟಿದ್ದೇನೆ ಎಂದು ಆರೋಪಿಸಿ ಕೋರ್ಟ್‌ಗೆ ಪಿಐಎಲ್‌ ಹಾಕಿದ್ದಾರೆ. ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಇವರೇ ನನ್ನೊಂದಿಗೆ ಸಂಧಾನಕ್ಕೆ ಬಂದಿದ್ದರು. ನಾನು ತಪ್ಪು ಮಾಡಿಲ್ಲ. ಸಂಧಾನಕ್ಕೆ ಒಪ್ಪಲಿಲ್ಲ. ಈಗ ಇವರೆಲ್ಲ ಒಂದೆಡೆ ಸೇರಿದ್ದಾರೆ. ಇವರೆಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಎಂದರು.

ಸಂಡೂರಿನ ಎಮ್ಮಿಹಟ್ಟಿ ಗ್ರಾಮದಲ್ಲಿ ಕುಮಾರಸ್ವಾಮಿ ದೇವಾಲಯಕ್ಕೆ ಸೇರಿದ 180 ಎಕರೆ ಇನಾಮ ಜಮೀನು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ಠಾಕೂರ್‌, ಭಾಮೈದ ಧರ್ಮೇಂದ್ರ ಸಿಂಗ್‌, ಮಾವ ಅಬ್ದುಲ್‌ ರಹೀಮ್‌ ಮತ್ತು ಇತರೆ ಎಂಟು ಜನರ ಹೆಸರಿನಲ್ಲಿ ಸಚಿವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಮಾರ್ಚ್‌ 19ರಂದು ಗಂಭೀರ ಆರೋಪ ಮಾಡಿದ್ದರು.

****

‘ಹೊಸಪೇಟೆ ತಾಲ್ಲೂಕಿನ ಹಂಪಿ ಸಮೀಪದ ನವವೃಂದಾವನದ ಬಳಿ ಮನರಂಜನಾ ಪಾರ್ಕ್‌ ಹೆಸರಿನಲ್ಲಿ ಹಳ್ಳಿ ಸೊಗಡಿನ ವಾತಾವರಣ ಸೃಷ್ಟಿಸಿ ರಾಕ್‌ ಗಾರ್ಡನ್‌ ಮಾದರಿಯಲ್ಲಿ ‘ರೆಪ್ಲಿಕಾ ಆಫ್‌ ವಿಜಯನಗರ’ ಮಾಡುವ ಯೋಜನೆ ಇದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಅದಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಸರ್ಕಾರ ನನ್ನ ಮನವಿ ತಿರಸ್ಕರಿಸಿದೆ ಎಂಬ ಮಾಹಿತಿ ಇದೆ. ಒಂದುವೇಳೆ ನನ್ನ ಅರ್ಜಿ ತಿರಸ್ಕರಿಸಿದರೆ ನ್ಯಾಯಾಲಯದ ಮೊರೆ ಹೋಗುವೆ. ಆನಂದ್‌ ಸಿಂಗ್‌ ‘ರಿಕ್ರಿಯೇಷನ್‌ ಪಾರ್ಕ್‌’ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಅದು ನನ್ನ ವಿರುದ್ಧ ಮಾಡುತ್ತಿರುವ ಲಾಬಿಯಷ್ಟೇ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ಸಚಿವ ಆನಂದ್‌ ಸಿಂಗ್‌ ಅವರು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿರುವ ನವವೃಂದಾವನದ ಬಳಿ ಮನರಂಜನಾ ಪಾರ್ಕ್‌, ವಾಣಿಜ್ಯ ಉದ್ದೇಶದ ಹೆಸರಿನಲ್ಲಿ ಕ್ಲಬ್‌, ರೆಸಾರ್ಟ್‌ ಸ್ಥಾಪಿಸಲು ಮುಂದಾಗಿದ್ದಾರೆ. ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಪವಿತ್ರ ಸ್ಥಳದಲ್ಲಿ ಸಚಿವರಿಗೆ ಕ್ಲಬ್‌, ರೆಸಾರ್ಟ್‌ ತೆಗೆಯಲು ಸರ್ಕಾರ ಅವಕಾಶ ಕಲ್ಪಿಸಬಾರದು’ ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಹಿಟ್ನಾಳ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT