ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ನಗರಸಭೆಯಲ್ಲಿ ಕೇಸರಿ ಬಾವುಟ

ಸುಂಕಮ್ಮ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆ, ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷರಾದ ಆನಂದ್‌
Last Updated 22 ಜನವರಿ 2022, 4:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಒಂದು ಶತಮಾನದ ಸುದೀರ್ಘ ಇತಿಹಾಸ ಹೊಂದಿರುವ ಹೊಸಪೇಟೆ ನಗರಸಭೆಯಲ್ಲಿ ಪ್ರಪ್ರಥಮ ಬಾರಿಗೆ ಕೇಸರಿ ಬಾವುಟ ಹಾರಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ತಂತ್ರಗಾರಿಕೆಯ ನೆರವಿನಿಂದ ಬಿಜೆಪಿ ಸದಸ್ಯರು ಶುಕ್ರವಾರ ನಡೆದ ಚುನಾವಣೆಯಲ್ಲಿ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. 4ನೇ ವಾರ್ಡಿನ ಸುಂಕಮ್ಮ ಅವಿರೋಧವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾದರೆ, 15ನೇ ವಾರ್ಡಿನ ಎಲ್‌.ಎಸ್‌. ಆನಂದ್‌ ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷರಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಸುಂಕಮ್ಮ ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ. ಇದರಿಂದಾಗಿ ಆ ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಕನಕಮ್ಮ, ನಾಮಪತ್ರ ಸಲ್ಲಿಕೆ ಅವಧಿ ಕೊನೆಗೊಂಡ ನಂತರ ಬಂದಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಬಿ. ನಾರಾಯಣಪ್ಪ ಉಮೇದುವಾರಿಕೆ ಸಲ್ಲಿಸಿದ್ದರು. ಈ ಪೈಕಿ ಬಿಜೆಪಿ ಅಭ್ಯರ್ಥಿ ಪರ ಎಎಪಿ ಸೇರಿದಂತೆ 22 ಜನ ಮತ ಚಲಾಯಿಸಿದರು. ಕಾಂಗ್ರೆಸ್‌ ಪರ 13 ಮತಗಳು ಬಿದ್ದವು. ಪಕ್ಷೇತರ ಅಭ್ಯರ್ಥಿ ಅಬ್ದುಲ್‌ ಖದೀರ್‌ ತಟಸ್ಥರಾಗಿ ಉಳಿದರು. ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಚುನಾವಣೆ ನಡೆಸಿಕೊಟ್ಟರು.

ಡಿಸೆಂಬರ್‌ನಲ್ಲಿ ನಗರಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 35 ಸ್ಥಾನಗಳಲ್ಲಿ ಕಾಂಗ್ರೆಸ್ 12, ಪಕ್ಷೇತರರು 12, ಬಿಜೆಪಿ ಹತ್ತು, ಎಎಪಿ ಒಂದು ಸ್ಥಾನದಲ್ಲಿ ಜಯ ಗಳಿಸಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಎಎಪಿಯ ಒಬ್ಬ ಸದಸ್ಯ ಹಾಗೂ ಒಂಬತ್ತು ಜನ ಪಕ್ಷೇತರರು ಬಿಜೆಪಿ ಸೇರಿದ್ದರು.

ಇದರೊಂದಿಗೆ ಬಿಜೆಪಿ ಸಂಖ್ಯಾಬಲ 20ಕ್ಕೆ‌ ಹೆಚ್ಚಾಗಿತ್ತು. ಸಹಜವಾಗಿಯೇ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಕಾಂಗ್ರೆಸ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನಲಾಗಿತ್ತು. ಆದರೆ, ಪಕ್ಷೇತರರನ್ನು ಸಂಪರ್ಕಿಸಿ ಕಾಂಗ್ರೆಸ್‌ ಸ್ಪರ್ಧೆಗೆ ಸಿದ್ಧವಾಗಿತ್ತು. ಆದರೆ, ಆ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಬರದಂತೆ ತಡೆಯೊಡ್ಡುವ ಮೂಲಕ ಬಿಜೆಪಿ ಸುಲಭವಾಗಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದೆ.

ಇದರಲ್ಲಿ ಆನಂದ್‌ ಸಿಂಗ್‌ ತಂತ್ರಗಾರಿಕೆ, ಅಧಿಕಾರದ ಬಲ ನೆರವಿಗೆ ಬಂದಿದೆ. ರಾಜಕೀಯ ಚದುರಂಗದಾಟದಲ್ಲಿ ಸಿಂಗ್‌ ಮೇಲುಗೈ ಆಗಿದೆ. ಆನಂದ್‌ ಸಿಂಗ್ ಪ್ರಭಾವವಿಲ್ಲದ ವ್ಯಕ್ತಿಯನ್ನು ಅಧ್ಯಕ್ಷ, ಉಪಾಧ್ಯಕ್ಷರಾಗಿ ಮಾಡಬೇಕು ಎಂದು ಮುಖಂಡರಾದ ಎಚ್‌.ಆರ್‌.ಗವಿಯಪ್ಪ, ರಾಣಿ ಸಂಯುಕ್ತಾ ಸಾಕಷ್ಟು ಕಸರತ್ತು ನಡೆಸಿದ್ದರು. ಅಂತಿಮವಾಗಿ ಆನಂದ್‌ ಸಿಂಗ್‌ ಕೈ ಮೇಲಾಗಿದೆ. ಕಾಂಗ್ರೆಸ್‌ನ ಹಲವು ಮುಖಂಡರು ಒಳಗೊಳಗೆ ಆನಂದ್‌ ಸಿಂಗ್‌ ಬೆಂಬಲಕ್ಕೆ ನಿಂತಿದ್ದು ಅವರ ಯಶಸ್ಸಿಗೆ ಮುಖ್ಯ ಕಾರಣ ಎಂದು ಗೊತ್ತಾಗಿದೆ. ಇಷ್ಟೇ ಅಲ್ಲ, ಇಡೀ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಸ್ಥಳೀಯ ಮುಖಂಡರ ಹೆಗಲ ಮೇಲೆ ಹಾಕಿತ್ತು. ಒಂದುವೇಳೆ ಪ್ರಭಾವಿ ಮುಖಂಡರಿಗೆ ಜವಾಬ್ದಾರಿ ಕೊಟ್ಟಿದ್ದರೆ ಪ್ರಬಲ ಪೈಪೋಟಿ ಏರ್ಪಡುತ್ತಿತ್ತು ಎನ್ನುತ್ತಾರೆ ಸ್ವತಃ ಆ ಪಕ್ಷದ ಸ್ಥಳೀಯ ಮುಖಂಡರು.

/ಬಾಕ್ಸ್‌/

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಶ್ರಾಂತಿ

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷವು ಕನಕಮ್ಮ ಅವರನ್ನು ನಿಲ್ಲಿಸಲು ನಿರ್ಧರಿಸಿ ವಿಪ್‌ ಜಾರಿಗೊಳಿಸಿತ್ತು. ಆದರೆ, ಕನಕಮ್ಮ ಅವರು ನಾಮಪತ್ರ ಸಲ್ಲಿಸುವ ಅವಧಿ ಮುಗಿದ ನಂತರ ನಗರಸಭೆಗೆ ಬಂದಿದ್ದರು. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಸುಂಕಮ್ಮ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದರು.

ಈ ಕುರಿತು ಕನಕಮ್ಮ ಅವರನ್ನು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ‘ನನ್ನ ಆರೋಗ್ಯ ಸರಿ ಇರಲಿಲ್ಲ. ಪ್ಯಾರಾಸಿಟಮಲ್‌ ಗುಳಿಗೆ ತೆಗೆದುಕೊಂಡು ವಿಶ್ರಾಂತಿ ತೆಗೆದುಕೊಂಡು ಈಗ ಬಂದಿದ್ದೇನೆ. ಇಲ್ಲಿಗೆ ಬಂದ ನಂತರ ಸಮಯ ಮುಗಿದಿದೆ ಎಂದು ಗೊತ್ತಾಗಿದೆ’ ಎಂದು ಹೇಳಿದರು.


ಸದಸ್ಯತ್ವ ರದ್ದತಿಗೆ ಶಿಫಾರಸು

ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ಪಕ್ಷ ಎಲ್ಲ ಸದಸ್ಯರಿಗೆ ವಿಪ್‌ ಜಾರಿಗೊಳಿಸಿತ್ತು. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಭೆಗೆ ಗೈರಾಗಿದ್ದರು. ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಪಕ್ಷ ಮುಂದಾಗಿದೆ.

‘ಕನಕಮ್ಮ ಪಕ್ಷದ ವಿಪ್‌ ಉಲ್ಲಂಘಿಸಿದ್ದಾರೆ. ಅವರ ಸದಸ್ಯತ್ವ ರದ್ದತಿಗೆ ಸಂಬಂಧಿಸಿದಂತೆ ಕೆಪಿಸಿಸಿಗೆ ವರದಿ ಸಲ್ಲಿಸಿ, ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಕನಕಮ್ಮ ಬಿಜೆಪಿಯವರ ಆಮಿಷಕ್ಕೆ ಒಳಗಾಗಿ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ’ ಎಂದು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ವಿನಾಯಕ್‌ ಶೆಟ್ಟರ್‌ ತಿಳಿಸಿದ್ದಾರೆ.


ಫಲಿತಾಂಶಕ್ಕೂ ಮೊದಲೇ ಕಟೌಟ್‌

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಗರಸಭೆ ಕಚೇರಿಯಲ್ಲಿ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಅದಕ್ಕೂ ಮುಂಚೆಯೇ ಕಚೇರಿ ಎದುರು ‘ಬಿಜೆಪಿಯ ಸುಂಕಮ್ಮ, ಎಲ್‌.ಎಸ್‌. ಆನಂದ್‌ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ’ ಎಂಬ ಕಟೌಟ್‌ ಹಾಕಲಾಗಿತ್ತು. ಇವರಿಬ್ಬರೇ ಅಧ್ಯಕ್ಷರಾಗುವುದು ಬಿಜೆಪಿಗೆ ಮೊದಲೇ ಖಚಿತವಾಗಿತ್ತು.

ಕೋವಿಡ್‌ ಉಲ್ಲಂಘಿಸಿ ಮೆರವಣಿಗೆ

ಮೂಕ ಪ್ರೇಕ್ಷಕರಾದ ಪೊಲೀಸರು

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ತಡೆಯಲು ರಾಜ್ಯ ಸರ್ಕಾರ ಮೆರವಣಿಗೆ, ರ್‍ಯಾಲಿ, ಜಾತ್ರೆ ಸೇರಿದಂತೆ ಜನ ಗುಂಪು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದೆ. ಆದರೆ, ಹೊಸಪೇಟೆಯಲ್ಲಿ ಶುಕ್ರವಾರ ರಾಜಾರೋಷವಾಗಿ ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಅನೇಕ ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌, ಸಂಸದ ವೈ.ದೇವೇಂದ್ರಪ್ಪ ಕೆಲ ನಿಮಿಷ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದು, ನಂತರ ಅಲ್ಲಿಂದ ನಿರ್ಗಮಿಸಿದರು. ಆದರೆ, ಪೊಲೀಸರು ಮೆರವಣಿಗೆ ತಡೆಯುವ ಕೆಲಸ ಮಾಡಲಿಲ್ಲ. ಇತ್ತೀಚೆಗೆ ನಗರದಲ್ಲಿ ‘ಆಮ್‌ ಆದ್ಮಿ’ ಪಕ್ಷದವರು ಪ್ರತಿಭಟನೆ ನಡೆಸಿದ್ದಾಗ ಪೊಲೀಸರು ಅವರನ್ನು ತಡೆದು ಪ್ರಕರಣ ದಾಖಲಿಸಿದ್ದರು. ಮಾಧ್ಯಮದವರು ಪ್ರಶ್ನಿಸಿದ ನಂತರವಷ್ಟೇ ಸಂಜೆ ಪೊಲೀಸರು, ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ 70 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT