ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದನ್ನು ವಿರೋಧಿಸಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಅಂಜುಮನ್ ಕಮಿಟಿಯ ಅಧ್ಯಕ್ಷ ಎಚ್.ಎನ್.ಎಫ್. ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಾದ್ಯಂತ ವಕ್ಫ್ ಆಸ್ತಿಗಳ ಮೇಲಿನ ಮುಸ್ಲಿಮರ ನಿಯಂತ್ರಣವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಹೊಸ ತಿದ್ದುಪಡಿಗಳಲ್ಲಿ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ಅಡಗಿದೆ. ಇದು ಸಂವಿಧಾನ ವಿರೋಧಿಯಾವಾಗಿದೆ’ ಎಂದರು.
‘ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ಇತರ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ನೇಮಿಸುವುದು ದುರುದ್ದೇಶದಿಂದ ಕೂಡಿದೆ. ಕೇಂದ್ರ ಸರ್ಕಾರ ಈ ನಿಲುವಿನಿಂದ ಹಿಂದೆ ಸರಿಯಬೇಕು ಮತ್ತು ರಾಜ್ಯ ಸರ್ಕಾರ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿಬೇಕು’ ಎಂದು ಒತ್ತಾಯಿಸಿದರು.