ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಕಸಮುದ್ರ: 750 ಹೆಕ್ಟೇರ್ ಪ್ರದೇಶಕ್ಕಿಲ್ಲ ಅರಣ್ಯ ಇಲಾಖೆ ಕಚೇರಿ

‘ರಾಮ್‍ಸರ್’ ಹೆಗ್ಗಳಿಕೆಯ ಹಗರಿಬೊಮ್ಮನಹಳ್ಳಿ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶ
Published 21 ಜೂನ್ 2024, 4:38 IST
Last Updated 21 ಜೂನ್ 2024, 4:38 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಯುನೆಸ್ಕೋ ನಿರ್ದೇಶನದಂತೆ ಭಾರತ ಸರ್ಕಾರ ‘ರಾಮ್‍ಸರ್’ ಪ್ರದೇಶವೆಂದು ಘೋಷಿಸಲ್ಪಟ್ಟ, ಕಲ್ಯಾಣ ಕರ್ನಾಟಕದ ಮೊದಲ ಪಕ್ಷಿಧಾಮವೆಂದು ಹೆಗ್ಗಳಿಕೆ ಹೊಂದಿರುವ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶ ತಾಲ್ಲೂಕಿನಲ್ಲಿ ಇದೆ. 750 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶ ಹೊಂದಿದ್ದರೂ ತಾಲ್ಲೂಕಿನಲ್ಲಿ ವಲಯ ಅರಣ್ಯ ಇಲಾಖೆಯ ಕಚೇರಿಯೇ ಇಲ್ಲ.

ತಾಲ್ಲೂಕಿನಲ್ಲಿ ಎರಡು ಕಾದಿಟ್ಟ ಬೃಹತ್ ಅರಣ್ಯ ಪ್ರದೇಶಗಳಿವೆ. ಬೆಣ್ಣೆಕಲ್ಲು ಅರಣ್ಯ ಅಂದಾಜು 3300 ಹೆಕ್ಟೇರ್, ದಶಮಾಪುರ ಅರಣ್ಯ 3200ಹೆಕ್ಟೇರ್ ಪ್ರದೇಶ ಇದೆ. ಬೆಣ್ಣೆಕಲ್ಲು ಪ್ರದೇಶ ವಿಶಾಲವಾಗಿದ್ದು, ದಶಮಾಪುರ ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ತನ್ನ ಇರುವಿಕೆಯನ್ನು ವಿಸ್ತರಿಸಿಕೊಂಡಿದೆ.

244 ಎಕರೆ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು ವಲಸೆ ಬರುತ್ತವೆ, ಚಳಿಗಾಲದಲ್ಲಿ ವಿದೇಶದಿಂದ ಬರುವ ಹಲವು ವಿಹಾರಕ್ಕೆ ಬಂದರೆ, ಕೆಲವು ಸಂತಾನೋತ್ಪತ್ತಿಗಾಗಿ ಆಗಮಿಸುತ್ತವೆ. ಇಲ್ಲಿನ ಜೀವವೈವಿಧ್ಯತೆ ರಾಜ್ಯದ ಬೇರೆಲ್ಲೂ ಕಂಡುಬರುವುದಿಲ್ಲ ಎಂದು ಪಕ್ಷಿ ತಜ್ಞರೇ ಹೇಳುತ್ತಾರೆ.

ಅರಣ್ಯ ಪ್ರದೇಶದಲ್ಲಿ ತೋಳಗಳ ಸಂಖ್ಯೆ ಹೆಚ್ಚುತ್ತಿದೆ, ನರಿಗಳ ಸಂಖ್ಯೆ ಯಥೇಚ್ಛವಾಗಿದೆ. ಚಿರತೆ, ಕರಡಿ ಈ ಭಾಗದಲ್ಲಿ ಚಲನವಲನ ಇದೆ. ನೂರಾರು ಸಂಖ್ಯೆಯಲ್ಲಿ ನವಿಲುಗಳಿವೆ. ತುಂಗಭದ್ರಾ ಹಿನ್ನೀರು ಪ್ರದೇಶದಲ್ಲೂ ರಾಜಹಂಸ, ಹೆಜ್ಜಾರ್ಲೆ ಸೇರಿದಂತೆ ಅನೇಕ ಅಪರೂಪದ ಬಾನಾಡಿಗಳು ಯಥೇಚ್ಛವಾಗಿ ವಲಸೆ ಬರುತ್ತವೆ.
ಇಷ್ಟೆಲ್ಲಾ ವಿಶೇಷತೆ ಇರುವ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಕಚೇರಿ ಇಲ್ಲದಿರುವುದು, ಹಲವು ಅಭಿವೃದ್ಧಿಗಳಿಗೆ ತೊಡಕಾಗಿ ಪರಿಣಮಿಸಿದೆ.

ನರೇಗಾ ಯೋಜನೆ ಅಡಿಯಲ್ಲಿ ಅರಣ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ವೇಗ ಕುಂಠಿತಗೊಂಡಿದೆ, ವಿಶೇಷ ಕಾರ್ಯಕ್ರಮಗಳು ಆಮೆಗತಿಯಲ್ಲಿ ಸಾಗಿವೆ. ಜನಸಾಮಾನ್ಯರು ತಮ್ಮದೇ ಜಮೀನುಗಳಲ್ಲಿನ ಮರಗಳಿಂದ ಕೃಷಿ ಚಟುವಟಿಕೆಗಳಿಗೆ ಮರಮುಟ್ಟುಗಳನ್ನು ತಯಾರಿಸಲು ಹೊಸಪೇಟೆ ಮತ್ತು ಹೂವಿನಹಡಗಲಿಯಲ್ಲಿರುವ ಅರಣ್ಯ ಇಲಾಖೆಯ ಕಚೇರಿಗಳಿಗೆ ಅಲೆಯಬೇಕಾದ ಅನಿವಾರ್ಯತೆ ಉಂಟಾಗಿದೆ.

ಸ್ಥಳಾಂತರಗೊಂಡ ಕಚೇರಿ: ಈ ಹಿಂದೆ ಪಟ್ಟಣದ ಹಳೇ ಊರಿನ ಸ್ವಂತ ಸುಸಜ್ಜಿತ ಕಟ್ಟಡದಲ್ಲಿ ವಲಯ ಅರಣ್ಯ ಕಚೇರಿ ಇತ್ತಾದರೂ, 2012ರಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಗುಡೇಕೋಟೆಗೆ ಸ್ಥಳಾಂತರಗೊಂಡಿತು. ಇದರಿಂದಾಗಿ ಬೆಣ್ಣೆಕಲ್ಲು ಅರಣ್ಯ ಪ್ರದೇಶ ಮತ್ತು ಪಕ್ಷಿ ಸಂರಕ್ಷಿತ ವಲಯ ಹೂವಿನಹಡಗಲಿಗೆ, ದಶಮಾಪುರ ಅರಣ್ಯ ಪ್ರದೇಶ ಹೊಸಪೇಟೆ ವಲಯಕ್ಕೆ ಹಂಚಿ ಹೋಯಿತು.

ಹಗರಿಬೊಮ್ಮನಹಳ್ಳಿ ತಾಲ್ಲೂಕಿಗೆ ಅಗತ್ಯವಾದ ಕಚೇರಿ ಸ್ಥಾಪಿಸಿ ವಲಯ ಅರಣ್ಯಾಧಿಕಾರಿ, ಸಹಾಯಕ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕರು, ಅರಣ್ಯ ಕಾವಲುಗಾರರನ್ನು ನಿಯೋಜಿಸಿದರೆ ಪೂರ್ಣ ಪ್ರಮಾಣದ ಕಚೇರಿಗೆ ಸಿಬ್ಬಂದಿ ದೊರೆದಂತಾಗುತ್ತದೆ. ಇಲ್ಲಿ ಸಿಬ್ಬಂದಿಗಾಗಿ ಮೂರು ವಸತಿ ಕಟ್ಟಡಗಳಿವೆ. ಕಚೇರಿ ಮತ್ತು ಸಿಬ್ಬಂದಿ ವಾಸ್ತಾವ್ಯಕ್ಕಾಗಿ ಅನುದಾನದ ಅಗತ್ಯವೂ ಇಲ್ಲ. ಆದರೆ ಬಾನಾಡಿಗಳ, ಗಿಡಮರಗಳ ರಕ್ಷಣೆಗಾಗಿ ತುರ್ತಾಗಿ ಕಚೇರಿಯನ್ನು ಸ್ಥಾಪಿಸುವ ಅಗತ್ಯವಿದೆ ಎನ್ನುತ್ತಾರೆ ಪಕ್ಷಿ ಪ್ರೇಮಿ ವಿಜಯ್‍ಕುಮಾರ ಇಟ್ಟಿಗಿ.

ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಕಚೇರಿ ಸ್ಥಾಪನೆಯಿಂದಾಗಿ ಅಗತ್ಯ ಸಿಬ್ಬಂದಿ ದೊರೆಯುತ್ತದೆ. ಜತೆಗೆ ಮರಗಳ್ಳರ ಬಾನಾಡಿ ಬೇಟೆಗಾರರ ಹಾವಳಿ ಕಡಿಮೆ ಆಗುತ್ತದೆ ಅಪರೂಪದ ಜೀವವೈವಿದ್ಯದ ರಕ್ಷಣೆಗೆ ಸಹಕಾರಿಯಾಗುತ್ತದೆ
ಆನಂದ್‍ಬಾಬು ಪಕ್ಷಿಪ್ರೇಮಿ
ವಲಯ ಅರಣ್ಯ ಇಲಾಖೆಯ ಕಚೇರಿ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ
ಅರ್ಸಲನ್ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT