ಗುರುವಾರ , ಆಗಸ್ಟ್ 18, 2022
26 °C

ವಿಜಯನಗರ | ‘ಅಗ್ನಿಪಥ’ ಯೋಜನೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಅಗ್ನಿಪಥ’ ಯೋಜನೆ ಕೈಬಿಡುವಂತೆ ಆಗ್ರಹಿಸಿ ಎಐಡಿವೈಒ, ಎಐಡಿಎಸ್‌ಒ ಜಿಲ್ಲಾ ಸಮಿತಿ ಕಾರ್ಯಕರ್ತರು ಸೋಮವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಕೈ ಬಿಡಿ, ಕೈಬಿಡಿ, ಅಗ್ನಿಪಥ ಯೋಜನೆ ಕೈಬಿಡಿ’, ‘ಯುವಕರ ದಾರಿ ತಪ್ಪಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗಿದರು. ನಂತರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ದೇಶದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದು, ಅವುಗಳನ್ನು ಕೇಂದ್ರ ಸರ್ಕಾರ ಮೊದಲು ತುಂಬಬೇಕು. ಅದು ಬಿಟ್ಟು ‘ಅಗ್ನಿಪಥ’ ಯೋಜನೆಯ ಹೆಸರಿನಲ್ಲಿ ಯುವಕರ ಹಾದಿ ತಪ್ಪಿಸುತ್ತಿರುವುದು ಸರಿಯಲ್ಲ. ಗುತ್ತಿಗೆ ಆಧಾರಿತ ಕೆಲಸವನ್ನು ಕೈಬಿಟ್ಟು, ಕಾಯಂ ಉದ್ಯೋಗಗಳನ್ನು ನೀಡಬೇಕು. ಪ್ರಜಾಸತ್ತಾತ್ಮಕ ಹೋರಾಟಗಳನ್ನು ಹತ್ತಿಕ್ಕುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

2020ರ ಮಾರ್ಚ್ 1ಕ್ಕೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಖಾಲಿ ಹುದ್ದೆಗಳಿರುವುದಾಗಿ ಸರ್ಕಾರವೇ ಸಂಸತ್ತಿನಲ್ಲಿ ತಿಳಿಸಿದೆ. ಖಾಸಗಿ ವಲಯದಲ್ಲೂ ನಿರುದ್ಯೋಗ ಸಮಸ್ಯೆ ಎಷ್ಟರ ಮಟ್ಟಿಗೆ ಬಿಗಡಾಯಿಸಿದೆ ಎಂದರೆ, ದೇಶದಲ್ಲಿನ ಸುಮಾರು 45 ಕೋಟಿ ನಿರುದ್ಯೋಗಿಗಳು ಕೆಲಸ ಹುಡುಕುವುದನ್ನೇ ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದು ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈಗ ಒಂದೂವರೆ ವರ್ಷದಲ್ಲಿ 10 ಲಕ್ಷ ಹುದ್ದೆಗಳನ್ನು ತುಂಬುವುದಾಗಿ ಹೇಳುತ್ತಿದೆ. ನಿರುದ್ಯೋಗ ಸಮಸ್ಯೆ ದೇಶವನ್ನು ಬಾಧಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಮೈಮರೆತು ಕುಳಿತಿದೆ ಎಂದು ಆರೋಪಿಸಿದರು.

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ರವಿಕಿರಣ್, ಎಐಡಿವೈಒ ಜಿಲ್ಲಾ ಅಧ್ಯಕ್ಷ ಪ್ರಶಾಂತ, ಕಾರ್ಯದರ್ಶಿ ಪಂಪಾಪತಿ, ಜಿಲ್ಲಾ ಸದಸ್ಯರಾದ ಕಲ್ಮೇಶ, ಫಾಲಾಕ್ಷ, ಪ್ರಕಾಶ್ ನಾಯ್ಕ, ಅಜಯ ಕುಮಾರ್ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು