ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ನಾಯ್ಕ್ ನಿಂದನೆ: ಸಿರಾಜ್‌ ಶೇಖ್‌ ಬಂಧನಕ್ಕೆ ಬಂಜಾರಾ ಧರ್ಮಗುರುಗಳ ಆಗ್ರಹ

Published 18 ಆಗಸ್ಟ್ 2023, 7:25 IST
Last Updated 18 ಆಗಸ್ಟ್ 2023, 7:25 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿಯಲ್ಲಿ ಇದೇ 12ರಂದು ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಭೀಮಾ ನಾಯ್ಕ್‌ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಜಯನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ  ಸಿರಾಜ್ ಶೇಖ್‌ ಅವರನ್ನು ಇನ್ನೂ ಬಂಧಿಸಿದೆ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಂಜಾರಾ ಧರ್ಮಗುರುಗಳ ಮಹಾಸಭಾ, ಬಂಧನಕ್ಕೆ 48 ಗಂಟೆಗಳ ಗಡುವು ನೀಡಿದೆ.

‘ಸಿರಾಜ್ ಶೇಖ್‌ ವಿರುದ್ಧ ಎಫ್‌ಐಆರ್ ದಾಖಲಾಗಿ ಮೂರು ದಿನ ಕಳೆದಿದೆ. ಆದರೂ ಅವರನ್ನು ಇನ್ನೂ ಬಂಧಿಸಿಲ್ಲ. ಇನ್ನು 48 ಗಂಟೆಯೊಳಗೆ ಅವರನ್ನು ಬಂಧಿಸದೆ ಇದ್ದರೆ ಹಗರಿಬೊಮ್ಮನಹಳ್ಳಿ ಠಾಣೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಮಹಾಸಭಾದ ಕಾರ್ಯಾಧ್ಯಕ್ಷ ಕುಮಾರ್ ಮಹಾರಾಜ್‌ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಬಂಜಾರಾ ಸಮುದಾಯ ಮತ್ತು ಮುಸ್ಲಿಂ ಸಮುದಾಯ ಅನ್ಯೋನ್ಯವಾಗಿದೆ. ಆದರೆ ಡಿಸಿಸಿ ಅಧ್ಯಕ್ಷರು ಮಾತ್ರ ಬಂಜಾರಾ ಸಮಾಜವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ವಿವಾದಗಳಿದ್ದರೆ ಕೂತು ಬಗೆಹರಿಸಿಕೊಳ್ಳುವುದು ಬಿಟ್ಟು ಬೀದಿ ರಂಪಾಟ ಮಾಡುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.

‘ಸಿರಾಜ್ ಶೇಖ್‌ ಅವರ ವರ್ತನೆಯಿಂದ ಇಡೀ ಬಂಜಾರಾ ಸಮುದಾಯಕ್ಕೆ ಬಹಳ ನೋವು ಉಂಟಾಗಿದೆ. ಇದಕ್ಕಾಗಿ ಧರ್ಮಗುರುಗಳೇ ಬೀದಿಗಿಳಿಯಬೇಕಾಯಿತು. ಭೀಮಾ ನಾಯ್ಕ್ ಮತ್ತು ಸಿರಾಜ್ ಶೇಖ್‌ ಇಬ್ಬರೂ ಕಾಂಗ್ರೆಸ್ ನಾಯಕರು. ಪಕ್ಷದ ಹೈಕಮಾಂಡ್ ಇಬ್ಬರನ್ನೂ ಕರೆದು, ಬುದ್ಧಿವಾದ ಹೇಳಿದರೆ ಸಿರಾಜ್‌ ಶೇಖ್‌ ಅವರಿಂದ ಸಾರ್ವಜನಿಕವಾಗಿ ಕ್ಷಮೆಯನ್ನಷ್ಟೇ ನಾವು ನಿರೀಕ್ಷಿಸುತ್ತೇವೆ‘ ಎಂದು ಅವರು ಸ್ಪಷ್ಟಪಡಿಸಿದರು.

ಹಗರಿಬೊಮ್ಮನಹಳ್ಳಿಯ ಜೆಡಿಎಸ್ ಶಾಸಕ ನೇಮರಾಜ ನಾಯ್ಕ ಅವರ ಬೆಂಬಲವನ್ನೂ ನಾವು ಪಡೆಯುತ್ತೇವೆ. ಇದು ಪಕ್ಷಾತೀತವಾಗಿ ನಡೆಯುವ ಹೋರಾಟ. ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದರು.‌

ಮಹಾಸಭಾದ ಅಧ್ಯಕ್ಷ ಸೈನಾ ಭಗತ್ ಮಾತನಾಡಿ, ಸಿರಾಜ್ ಶೇಖ್‌ ವಿರುದ್ಧ ತಕ್ಷಣ ಕಾನೂನು ಕ್ರಮ ಆಗಬೇಕು ಎಂದರು.

ಮಹಾಸಭಾದ ಸಂಚಾಲಕ ಮಂಜು ಮಹಾರಾಜ್ ಮಾತನಾಡಿ, ಸಿರಾಜ್‌ ಶೇಖ್‌ ಅವರ ಮನೆಯಲ್ಲೂ ಹೆಣ್ಣು ಮಕ್ಕಳಿರುವಾಗ, ಬೇರೆ ಹೆಣ್ಣುಮಕ್ಕಳ ಬಗ್ಗೆ ಬೀದಿಯಲ್ಲಿ ಅವಾಚ್ಯವಾಗಿ ನಿಂದಿಸುವುದು ತಪ್ಪು ಎಂದರು.

ಮಹಾಸಭಾದ ಗೋಸಾಯಿ ಬಾಬಾ, ವೆಂಕಟೇಶ್ ಗುರೂಜಿ, ಗಿರೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು. 

ಸಿರಾಜ್ ಶೇಖ್‌ ತಕ್ಷಣ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಬಳಿಕೆ ಮನವಿ ಸಲ್ಲಿಸಲಾಯಿತು.

ಹಿನ್ನೆಲೆ

ಇದೇ 12ರಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ತಾಲ್ಲೂಕುವಾರು ಕೆಡಿಪಿ ಸಭೆ ನಡೆಸಲು ಹಗರಿಬೊಮ್ಮನಹಳ್ಳಿಗೆ ಬಂದಿದ್ದರು. ಅದಕ್ಕೆ ಪೂರಕವಾಗಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್‌ಗಳನ್ನು ಅಳವಡಿಸಿದ್ದರು. ಅದರಲ್ಲಿ ಡಿಸಿಸಿ ಅಧ್ಯಕ್ಷ ಸಿರಾಜ್ ಶೇಖ್‌ ಅವರ ಭಾವಚಿತ್ರ ಇರಲಿಲ್ಲ. ಇದನ್ನು ಕಂಡು ಕೆರಳಿದ ಸಿರಾಜ್‌ ಶೇಖ್‌ ಅವರು ಸ್ಥಳದಲ್ಲಿದ್ದ ಕಾಂಗ್ರೆಸ್‌ ನಾಯಕಿಯೊಬ್ಬರನ್ನು ನಿಂದಿಸಿದ್ದರು ಹಾಗೂ ಭೀಮಾ ನಾಯ್ಕ್ ಮತ್ತು ಅವರ ಬೆಂಬಲಿಗರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದರು.

ಸಿರಾಜ್‌ ಶೇಖ್‌ ಅವರ ಈ ನಿಂದನೆಯ ವಿಡಿಯೊ ಎಲ್ಲೆಡೆ ಹರಿದಾಡಿತ್ತು. ಇದರಿಂದ ಸಮುದಾಯದಲ್ಲಿ ತೀವ್ರ ಆಕ್ಷೇಪದ ಧ್ವನಿ ಕೇಳಿಸಿತು. ಹೀಗಾಗಿ ಇದೇ 15ರಂದು ಹಗರಿಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಮಂಜುನಾಥ ಎಸ್‌.ಎಲ್‌.ಎಂಬುವವರು ಸಿರಾಜ್ ಶೇಖ್‌ ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ ಸಿರಾಜ್ ಶೇಖ್‌ ಎಫ್‌ಐಆರ್ ದಾಖಲಾಗಿತ್ತು.

ಇದಕ್ಕೆ ಮೊದಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಸಿರಾಜ್ ಶೇಖ್ ಮತ್ತು ಕೆ.ಸಿ.ಕೊಂಡಯ್ಯ ಕಾರಣ ಎಂದು ಭೀಮಾ ನಾಯ್ಕ್ ಅವರು ಆರೋಪಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT