ಮಂಗಳವಾರ, ಜೂನ್ 28, 2022
20 °C
ತಿಂಗಳ ಆರಂಭದಲ್ಲೇ ಬ್ಯಾಂಕ್‌ ಮುಚ್ಚಿಸಿರುವುದರಿಂದ ಪೆನ್ಶನ್‌ ಸಿಗದೆ ತೊಂದರೆ

ವಿಜಯನಗರ ಜಿಲ್ಲೆಯಲ್ಲಿ ಬ್ಯಾಂಕ್‌ ಬಂದ್‌; ಪಿಂಚಣಿದಾರರಿಗೆ ಸಂಕಷ್ಟ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಜಿಲ್ಲಾಡಳಿತವು ತಿಂಗಳ ಆರಂಭದಲ್ಲೇ ಜಿಲ್ಲೆಯಾದ್ಯಂತ ಎಲ್ಲ ಬ್ಯಾಂಕ್‌ಗಳನ್ನು ಮುಚ್ಚಿಸಿ ಆದೇಶ ಹೊರಡಿಸಿರುವುದರಿಂದ ಪಿಂಚಣಿದಾರರು ಬಹಳ ಸಂಕಷ್ಟ ಎದುರಿಸುವಂತಾಗಿದೆ.

ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ ತಗ್ಗಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಅದರ ಆದೇಶದ ಪ್ರಕಾರ, ಬುಧವಾರದಿಂದ ಶುಕ್ರವಾರದ ವರೆಗೆ (ಜೂನ್‌ 2ರಿಂದ 4ರ ತನಕ) ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ, ವಾಣಿಜ್ಯ ಹಾಗೂ ಸಹಕಾರ ಬ್ಯಾಂಕುಗಳು ಮುಚ್ಚಿರಲಿವೆ. ಶನಿವಾರ, ಭಾನುವಾರ ಎಂದಿನಂತೆ ಬ್ಯಾಂಕುಗಳಿಗೆ ರಜೆ ಇರಲಿದೆ.

ಮಂಗಳವಾರ (ಜೂ. 1) ಮಧ್ಯಾಹ್ನ 12ರ ವರೆಗೆ ಬ್ಯಾಂಕುಗಳಿಂದ ಹಣ ಬಿಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಬಹುತೇಕರಿಗೆ ಬ್ಯಾಂಕಿನಿಂದ ಹಣ ಬಿಡಿಸಿ, ತೆಗೆದುಕೊಂಡು ಹೋಗಲು ಸಾಧ್ಯವಾಲಿಲ್ಲ. ಬರುವ ಸೋಮವಾರ, ಮಂಗಳವಾರದ ವರೆಗೆ ಕಾಯುವುದು ಅನಿವಾರ್ಯವಾಗಿದೆ. ಆದರೆ, ಆ ಎರಡು ದಿನ ಲಾಕ್‌ಡೌನ್‌ ಪೂರ್ಣ ಪ್ರಮಾಣದಲ್ಲಿ ಸಡಿಲಿಕೆಯಾಗುತ್ತದೆಯೋ ಅಥವಾ ಮಧ್ಯಾಹ್ನ 12 ಗಂಟೆಯ ವರೆಗೆ ಸಾರ್ವಜನಿಕರಿಗೆ ಹೊರಗೆ ಬರಲು ಅವಕಾಶ ಕಲ್ಪಿಸಲಾಗುತ್ತದೆಯೇ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಇದರಿಂದ ಸಹಜವಾಗಿಯೇ ಪಿಂಚಣಿದಾರರು ಗೊಂದಲಕ್ಕೆ ಸಿಲುಕಿದ್ದಾರೆ.

ಬಹುತೇಕ ಪಿಂಚಣಿದಾರರು ತಿಂಗಳ ಆರಂಭದಲ್ಲಿ ಬ್ಯಾಂಕಿಗೆ ಹೋಗಿ, ಹಣ ಬಿಡಿಸಿಕೊಂಡು ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ, ಈ ತಿಂಗಳು ಅವರಿಗೆ ಸಾಧ್ಯವಾಗಿಲ್ಲ. ಹೆಚ್ಚಿನವರ ದೈನಂದಿನ ಬದುಕು ಪೆನ್ಶನ್‌ ಮೇಲೆಯೇ ನಿಂತಿದೆ. ಅವರಿಗೆ ಬೇರೆ ಉಳಿತಾಯವಿಲ್ಲ. ದಿನಸಿ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತು ಖರೀದಿಸುವುದಕ್ಕೆ ಆ ಹಣ ಖರ್ಚಾಗುತ್ತದೆ. ಸಕಾಲಕ್ಕೆ ಪೆನ್ಶನ್‌ ಸಿಗದಿದ್ದರೆ ಅವರಿಗೆ ಬಹಳ ತೊಂದರೆಯಾಗುತ್ತದೆ. ಜಿಲ್ಲಾಡಳಿತ ವಿವೇಚಿಸಿ, ಹೆಜ್ಜೆ ಇಡಬೇಕಾಗಿತ್ತು ಎನ್ನುವುದು ಪಿಂಚಣಿದಾರರ ವಾದ.

‘ನನಗೆ ಮಾಸಿಕ ಎಂಟು ಸಾವಿರ ಪಿಂಚಣಿ ಬರುತ್ತದೆ. ಮನೆಯ ಬಾಡಿಗೆ, ದಿನಸಿ ವಸ್ತು, ಔಷಧ ಖರೀದಿಸಲು ಪೆನ್ಶನ್‌ ಹಣ ಖರ್ಚಾಗುತ್ತದೆ. ಯಾವುದೇ ರೀತಿಯ ಉಳಿತಾಯವಿಲ್ಲ. ತಿಂಗಳ ಮೊದಲ ವಾರಕ್ಕಾಗಿ ಕಾದು ಕೂತಿರುತ್ತೇನೆ. ಈ ಸಲ ಏಕಾಏಕಿ ಜಿಲ್ಲಾಡಳಿತವು ಬ್ಯಾಂಕ್‌ ಮುಚ್ಚಿಸಿರುವುದರಿಂದ ಹಣ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಚಿತ್ತವಾಡ್ಗಿಯ ಬಸವರಾಜ ಗೋಳು ತೋಡಿಕೊಂಡರು.

‘ಹಣ ಬಿಡಿಸಿಕೊಳ್ಳಲು ಮಂಗಳವಾರ ಬ್ಯಾಂಕಿಗೆ ಹೋಗಿದ್ದೆ. ಆದರೆ, ಸಾಕಷ್ಟು ಜನ ಬ್ಯಾಂಕಿಗೆ ಬಂದಿದ್ದರು. ಮಧ್ಯಾಹ್ನ 12 ಗಂಟೆಯ ವರೆಗೆ ಹೊರಗೆ ಹಣ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. 12 ಗಂಟೆ ನಂತರ ಹೊರಗೆ ಓಡಾಡಿದರೆ ಪೊಲೀಸರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಮನೆ ಸೇರಿದೆ. ಈಗ ಐದು ದಿನ ಕಾಯುವುದು ಅನಿವಾರ್ಯ. ಬರುವ ಸೋಮವಾರ ಮತ್ತೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬೇರೆಯವರ ಬಳಿ ಸಾಲ ಕೂಡ ಪಡೆಯಲು ಆಗುವುದಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು.

‘ಕೆಲವು ಪಿಂಚಣಿದಾರರ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತಾರೆ. ಅದೇ ರೀತಿ ಸರ್ಕಾರದ ಎಲ್ಲ ಇಲಾಖೆಯವರಿಗೂ ಮಾಡಬೇಕು. ಕಡ್ಡಾಯವಾಗಿ ಬ್ಯಾಂಕಿಗೆ ಹೋಗಿ ಪಾಸ್‌ಬುಕ್‌ ತೋರಿಸಿದರೆ, ಹಣ ಕೊಡುತ್ತಾರೆ. ಅಂತಹವರಿಗೆ ಬ್ಯಾಂಕ್‌ ಮುಚ್ಚಿರುವುದರಿಂದ ಬಹಳ ತೊಂದರೆ ಉಂಟಾಗುತ್ತಿದೆ. ಪಿಂಚಣಿದಾರರನ್ನು ಗಮನದಲ್ಲಿ ಇಟ್ಟುಕೊಂಡು, ಅವರಿಗೆ ವಿನಾಯಿತಿ ನೀಡಬೇಕಿತ್ತು. ಏಕೆಂದರೆ ಅದನ್ನೇ ನೆಚ್ಚಿಕೊಂಡು ಅನೇಕರು ಬದುಕು ನಡೆಸುತ್ತಿದ್ದಾರೆ’ ಎಂದು ಪಾಂಡುರಂಗ ಕಾಲೊನಿಯ ಪರಮೇಶ್ವರ ತಿಳಿಸಿದರು.

‘ಜಿಲ್ಲಾಡಳಿತವು ಬ್ಯಾಂಕ್‌ಗಳನ್ನು ಮುಚ್ಚಿಸಿ ಆದೇಶ ಹೊರಡಿಸಿರುವುದರಿಂದ ಪಿಂಚಣಿದಾರರಿಗೆ ಬಹಳ ತೊಂದರೆಯಾಗುತ್ತಿದೆ. ಮೊದಲೇ ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳುವುದು ಸರಿಯಲ್ಲ. ಈ ನಿರ್ಧಾರವನ್ನು ಜಿಲ್ಲಾಡಳಿತ ಮರು ಪರಿಶೀಲಿಸಬೇಕು’ ಎಂದು ವಿಜಯನಗರ ನಾಗರಿಕ ವೇದಿಕೆಯ ಅಧ್ಯಕ್ಷ ವೈ. ಯಮುನೇಶ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು