ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ನೀರಿನ ಘಟಕಗಳಿಂದ ದರ ಏರಿಕೆ, ಅಂತರ್ಜಲಕ್ಕೆ ಧಕ್ಕೆ

24X7 ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿಗೆ ಕಲುಷಿತ ನೀರು
Last Updated 22 ಮಾರ್ಚ್ 2023, 6:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): 24X7 ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿಯಿಂದ ನಗರದ ಕೆಲವು ವಾರ್ಡ್‌ಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವುದನ್ನೇ ಬಂಡವಾಳ ಮಾಡಿಕೊಂಡು ನಗರದಲ್ಲಿರುವ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಏಕಾಏಕಿ ನೀರಿನ ದರ ಹೆಚ್ಚಿಸಿದ್ದು, ಸಾರ್ವಜನಿಕರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ.

ಕಲುಷಿತ ನೀರಿನ ಸೇವನೆಯಿಂದಾಗಿಯೇ ನಗರದ ರಾಣಿಪೇಟೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟು, 200ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು.

ಅನೇಕ ದಿನಗಳವರೆಗೆ ನೀರು ಪೂರೈಕೆ ಸ್ಥಗಿತಗೊಳಿಸಿ, ಟ್ಯಾಂಕರ್ ಮೂಲಕ ಪೂರೈಸಲಾಗಿತ್ತು. ಇದರ ಬಳಿಕ ನಗರದ 25 ವಾರ್ಡ್‌ಗಳಲ್ಲಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಸ್ವತಃ ನಗರಸಭೆ ಸದಸ್ಯರೇ ಸಾಮಾನ್ಯ ಸಭೆಯಲ್ಲಿ ಆರೋಪಿಸಿದ್ದರು. ಅದಕ್ಕೆ ಪೂರಕವಾದ ಚಿತ್ರ, ದಾಖಲೆಗಳನ್ನು ಸಹ ಬಿಡುಗಡೆಗೊಳಿಸಿದ್ದರು.

ಕ್ಯಾನ್‌ ನೀರಿಗೆ ಬೇಡಿಕೆ ಹೆಚ್ಚಿರುವುದರಿಂದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಏಕಾಏಕಿ ನೀರಿನ ದರ ಹೆಚ್ಚಳ ಮಾಡಿವೆ. ಕೆಲ ವರ್ಷಗಳ ಹಿಂದೆ 20 ಲೀಟರ್‌ ನೀರಿನ ಕ್ಯಾನ್‌ಗೆ ₹ 2 ವಿಧಿಸುತ್ತಿದ್ದರು. ಅದಾದ ಬಳಿಕ ₹ 5ಕ್ಕೆ ಏರಿಸಿದ್ದರು. ಜನವರಿಯಲ್ಲಿ ₹7ಕ್ಕೆ ಹೆಚ್ಚಿಸಿದ್ದರು. ಮತ್ತೆ ಕೆಲವೇ ದಿನಗಳ ಅಂತರದಲ್ಲಿ ₹10 ಮಾಡಿದ್ದಾರೆ.

ನೀರು ಮಾರಾಟ ಇತ್ತೀಚಿನ ದಿನಗಳಲ್ಲಿ ಪಕ್ಕಾ ವಾಣಿಜ್ಯದ ಸ್ವರೂಪ ಪಡೆದುಕೊಂಡಿದೆ. ಹೋಟೆಲ್‌ ಸೇರಿದಂತೆ ಇತರೆ ವಾಣಿಜ್ಯ ಮಳಿಗೆಗಳವರಿಗೂ ನೀರು ಪೂರೈಸುತ್ತಿದ್ದಾರೆ. ಶುದ್ಧ ನೀರಿನಲ್ಲಿ ಯಾವ ಯಾವುದೇ ಖನಿಜಾಂಶ ಇರುವುದಿಲ್ಲ.

‘ನೀರಿನ ಘಟಕಗಳಲ್ಲಿ 100 ಲೀಟರ್ ಶುದ್ಧಿಕರಿಸಿದರೆ ಶೇ 70ರಿಂದ 80ರಷ್ಟು ನೀರು ಪೋಲಾಗುತ್ತದೆ. ಬಹುತೇಕ ಘಟಕಗಳಲ್ಲಿ ಆ ನೀರನ್ನು ಇಂಗುಗುಂಡಿಗಳಲ್ಲಿ ಸಂಗ್ರಹಿಸಿ ಅಂತರ್ಜಲ ಹೆಚ್ಚಿಸುವ ಯಾವುದೇ ವ್ಯವಸ್ಥೆ ಇಲ್ಲ. ಸದ್ಯ ನಗರದಲ್ಲಿ 60ಕ್ಕೂ ಹೆಚ್ಚು ಘಟಕಗಳಿವೆ. ಇದೇ ರೀತಿ ಅವುಗಳು ಕೆಲಸ ನಿರ್ವಹಿಸಿದರೆ ಭವಿಷ್ಯದಲ್ಲಿ ಅಂತರ್ಜಲದ ಮೇಲೆ ತೀವ್ರ ಪರಿಣಾಮ ಬೀರಬಹುದು. ಹನಿ ನೀರಿಗೂ ಪರದಾಡುವ ಸಂದರ್ಭ ಸೃಷ್ಟಿಯಾಗಬಹುದು. ಅನೇಕ ಜಿಲ್ಲೆಗಳಲ್ಲಿ ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಲ್ಲಿಸಲಾಗಿದೆ. ಅದೇ ರೀತಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಆಪತ್ತು ತಪ್ಪಿದಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಭೂಗರ್ಭಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

/ಬಾಕ್ಸ್‌/

‘ಮಿನರಲ್‌ ವಾಟರ್‌ ಎನ್ನುವುದು ಶುದ್ಧ ಸುಳ್ಳು’

‘ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಮಿನರಲ್‌ ವಾಟರ್‌ ಕೊಡುತ್ತೇವೆ ಎನ್ನುವುದು ಶುದ್ಧ ಸುಳ್ಳು. ಅಲ್ಲಿ ಕ್ಲೋರಿನೇಶನ್‌ ಸಹ ಮಾಡುವುದಿಲ್ಲ. ವಾಸ್ತವದಲ್ಲಿ ನಗರಸಭೆಯ ನೀರೇ ಉತ್ತಮ. ಸ್ವತಃ ನಾನು ಕೂಡ ಅದನ್ನೇ ಕುಡಿಯುತ್ತೇನೆ. ನಗರಸಭೆಯಿಂದ ನಿತ್ಯ ಕ್ಲೋರಿನೇಶನ್‌ ಮಾಡಿ ಜನರಿಗೆ ನೀರು ಪೂರೈಸಲಾಗುತ್ತಿದೆ. ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಅಂತರ್ಜಲದ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಭೂಗರ್ಭಶಾಸ್ತ್ರಜ್ಞರ ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

/ಬಾಕ್ಸ್‌/
‘ಬೇಕಾಬಿಟ್ಟಿ ದರ ಹೆಚ್ಚಿಸಿದವರಿಗೆ ನೋಟಿಸ್‌’

‘ನಗರದಲ್ಲಿ ಯಾರ್‍ಯಾರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಡೆಸುತ್ತಿದ್ದಾರೆ. ಎಲ್ಲರೂ ಒಂದೇ ರೀತಿಯಲ್ಲಿ ಹಣ ಪಡೆಯಬೇಕು. ಬೇಕಾಬಿಟ್ಟಿ ದರ ಹೆಚ್ಚಿಸಿದವರಿಗೆ ಶೀಘ್ರವೇ ನೋಟಿಸ್‌ ನೀಡಲಾಗುವುದು. ನಾಲ್ಕೈದು ಘಟಕಗಳವರು ಹೆಚ್ಚಿನ ಹಣ ಪಡೆಯುತ್ತಿರುವುದರಿಂದ ದೂರುಗಳು ಬರುತ್ತಿವೆ. ಈಗಾಗಲೇ ಅಂತಹವರಿಗೆ ಎಚ್ಚರಿಕೆ ನೋಟಿಸ್‌ ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕದ ಎಲ್ಲ ವಸ್ತುಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಹೀಗಿದ್ದರೂ ಇತ್ತೀಚೆಗೆ ಒಂದು ಕ್ಯಾನ್‌ ಬೆಲೆ ₹5ರಿಂದ ₹7ಕ್ಕೆ ಹೆಚ್ಚಿಸಲಾಗಿದೆ. ಅಷ್ಟೇ ಹಣ ಪಡೆಯಬೇಕೆಂದು ಸ್ವತಃ ನಾನೇ ಎಲ್ಲರಿಗೂ ತಿಳಿಸಿದ್ದೇನೆ. ಅದಕ್ಕಿಂತ ಹೆಚ್ಚು ಪಡೆಯುವುದು ತಪ್ಪು’ ಎಂದು ಶುದ್ಧ ಕುಡಿಯುವ ನೀರಿನ ಸರ್ವಧರ್ಮ ಕ್ರಿಯಾಶೀಲ ಸಮಾಜ ಸೇವಕರುಗಳ ಸಂಘದ ಅಧ್ಯಕ್ಷ ಮಂಟೂರ ಮಠ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನೀರು ಶುದ್ಧೀಕರಿಸುವುದರಿಂದ ಶೇ 60ರಿಂದ 70ರಷ್ಟು ನೀರು ವೆಸ್ಟೇಜ್‌ ರೂಪದಲ್ಲಿ ಹೋಗುತ್ತದೆ. ನಾನು ಸೇರಿದಂತೆ ಕೆಲವರು ಇಂಗುಗುಂಡಿಗಳನ್ನು ಮಾಡಿಕೊಂಡಿದ್ದೇವೆ. ಎಲ್ಲರೂ ಇದೇ ರೀತಿ ಮಾಡಿಕೊಂಡರೆ ಅಂತರ್ಜಲಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT