ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಬ್ರಿಟಿಷ್ ಕಾಲದ ಬೃಹತ್ ಬಂಡೆಗಲ್ಲು ಶಾಸನ ಪತ್ತೆ

ವಿಜಯನಗರ ತಿರುಗಾಟ ಸಂಶೋಧನಾ ತಂಡದಿಂದ ಬಳ್ಳಾರಿ ನಗರದಲ್ಲಿ ಶೋಧನೆ
Published 26 ಮೇ 2024, 15:36 IST
Last Updated 26 ಮೇ 2024, 15:36 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯ ಗಾಯತ್ರಿ ನಗರದ ಈಶ್ವರ ದೇವಸ್ಥಾನದ ಪಕ್ಕದ ಗುಡ್ಡದ ಬಳಿ ಬ್ರಿಟಿಷ್‌ ಕಾಲದ ಬೃಹತ್ ಬಂಡೆಗಲ್ಲು ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡ ಶೋಧಿಸಿದ್ದು, ಇದು ಇಂಗ್ಲಿಷ್ ಮತ್ತು ತೆಲುಗು ಲಿಪಿಯಲ್ಲಿದೆ.

ಈ ಬೃಹತ್ ಬಂಡೆಗಲ್ಲು ಶಾಸನವು ಉತ್ತರಾಭಿಮುಖವಾಗಿದ್ದು, 25 ಅಡಿ ಎತ್ತರ ಮತ್ತು 20 ಅಡಿ ಅಗಲವಾಗಿದೆ. ಬಂಡೆಯ ಮೇಲುತುದಿಯಲ್ಲಿ ಇಂಗ್ಲಿಷ್ ಲಿಪಿಯ ಎಂಟು ಸಾಲುಗಳಿದ್ದರೆ, ಕೆಳಗೆ ಆರು ಸಾಲಿನ ತೆಲುಗು ಲಿಪಿ ಇದೆ.

ಬಂಡೆ ಇರುವ ಸ್ಥಳದಿಂದ ಸಿರುಗುಪ್ಪ ರಸ್ತೆಯ ಮೂಲಕ ಕಾಲುವೆಯನ್ನು ನಿರ್ಮಿಸಿದ ಮಾಹಿತಿ ಈ ಶಾಸನದಲ್ಲಿದೆ. ಮ್ಯಾಥ್ಯೂ ಅವರ ಮಗ ಡೇನಿಯಲ್ ಅಬ್ರಹಾಂ ಅವರು ಜನರ ಬಳಕೆಗಾಗಿ ನೀರು ಹರಿಸಲು ಕಾಲುವೆ ಕಾಮಗಾರಿ ಮಾಡಿಸಿದ ಎಂಬ ಮಾಹಿತಿ ಇದರಲ್ಲಿದೆ. 1842ರಲ್ಲಿ ಡೇನಿಯಲ್ ಅಬ್ರಹಾಂ ನಿಧನರಾದರು ಎಂಬ ಮಾಹಿತಿಯೂ ಇದೆ. ಈ ಕಾಲುವೆಯ ಕಾಮಗಾರಿ 1872ರಲ್ಲಿ ಬಳ್ಳಾರಿ ಜಿಲ್ಲಾ ಕಲೆಕ್ಟರ್ ಜೆ.ಎಚ್‌.ಮಾಸ್ಟರ್‌ ಅವರ ಅವಧಿಯಲ್ಲಿ ಪೂರ್ಣಗೊಂಡಿರಬೇಕು ಎಂಬ ಮಾಹಿತಿಯೂ ಶಾಸನದ ಕೊನೆಯಲ್ಲಿ ಸಿಗುತ್ತದೆ.

ಆದರೆ ಸದ್ಯ ಈ ಕಾಲುವೆಯ ಸುಳಿವೇ ಇಲ್ಲಿ ಇಲ್ಲ. ಬಹುಶಃ ನೀರು ಹರಿಯದ ಕಾರಣ ಕ್ರಮೇಣ ಒತ್ತುವರಿಗೊಂಡು ಕಾಲುವೆ ಕಣ್ಮರೆಯಾಗಿರಬೇಕು ಎಂದು ಸಂಶೋಧಕರು ಶಂಕಿಸಿದ್ದಾರೆ.

ರಕ್ಷಣೆಗೆ ಮೊರೆ: ‘ಬೃಹತ್ ಬಂಡೆಗಲ್ಲು ಶಾಸನದ ಸುತ್ತಲೂ ಜಿಲ್ಲಾಡಳಿತವು ರಕ್ಷಣೆ ಮಾಡಿ, ದಾಖಲೆಯನ್ನು ಉಳಿಸಬೇಕಾಗಿದೆ. ಏಕೆಂದರೆ ಪಡಿಯಚ್ಚು ತೆಗೆಯುವಾಗ ಅಲ್ಲಿನ ಸ್ಥಳೀಯ ನಿವಾಸಿಯೊಬ್ಬ ಇದೇ ತರಹದ ಲಿಪಿಯ ಬಂಡೆಗಲ್ಲು ಶಾಸನವಿತ್ತು, ಅದನ್ನು ಒಡೆದು ಹಾಕಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ’ ಎಂದು ಇತಿಹಾಸಕಾರರು ಹಾಗೂ ತಂಡದ ಸದಸ್ಯರು ತಿಳಿಸಿದ್ದಾರೆ.

ಇತಿಹಾಸ ಸಂಶೋಧಕರಾದ ಟಿ.ಎಚ್.ಎಂ. ಬಸವರಾಜ ಮತ್ತು ವೈ.ಹನುಮಂತ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರಾದ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ತಿಪ್ಪೇಸ್ವಾಮಿ ಎಚ್., ಸಂಶೋಧನಾಕಾರರಾದ ವೀರಾಂಜನೇಯ, ರವಿಕುಮಾರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಗೋವಿಂದ, ಕೃಷ್ಣಗೌಡ, ಗೋವರ್ಧನ್ ಅವರು ಶಾಸನವನ್ನು ಪತ್ತೆಹಚ್ಚಿದ್ದಾರೆ.

ಬಳ್ಳಾರಿ ನಗರದಲ್ಲಿ ಪತ್ತೆಯಾದ ಬ್ರಿಟಿಷ್ ಕಾಲದ ಬಂಡೆ ಶಾಸನದ ದೂರದ ನೋಟ
ಬಳ್ಳಾರಿ ನಗರದಲ್ಲಿ ಪತ್ತೆಯಾದ ಬ್ರಿಟಿಷ್ ಕಾಲದ ಬಂಡೆ ಶಾಸನದ ದೂರದ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT