ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಕೂಡ್ಲಿಗಿಯಲ್ಲಿ ಬಿಜೆಪಿ ಅದ್ದೂರಿ ಯಾತ್ರೆ

ಪಕ್ಷದ ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ರೋಡ್‌ ಶೋ; ಸ್ಥಳೀಯ ಶಾಸಕ ಭಾಗಿ
Last Updated 15 ಮಾರ್ಚ್ 2023, 14:18 IST
ಅಕ್ಷರ ಗಾತ್ರ

ಕೂಡ್ಲಿಗಿ (ವಿಜಯನಗರ): ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್ ಕಟೀಲ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಅದ್ದೂರಿ ರೋಡ್‌ ಶೋ ನಡೆಯಿತು.

ಸಂಡೂರಿನಿಂದ ಬಂದ ಯಾತ್ರೆಯನ್ನು ಪಟ್ಟಣ ಪಂಚಾಯಿತಿ ಗಡಿಯಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಿದ ಮಂಡಲ ಯುವ ಘಟಕದ ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ಪಟ್ಟಣದ ಪ್ರವಾಸಿ ಮಂದಿರಕ್ಕೆ ಕರೆ ತಂದರು. ನಂತರ ಪ್ರವಾಸಿ ಮಂದಿರದ ಮುಂಭಾಗದಿಂದ ಆರಂಭವಾದ ಯಾತ್ರೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಪಾದಗಟ್ಟೆ ಮೂಲಕ ಮದಕರಿ ನಾಯಕ ವೃತ್ತ ತಲುಪಿತು. ಮಹಿಳಾ ಡೊಳ್ಳು ಕುಣಿತ, ಜಂಜಾಳ ಸೇರಿದಂತೆ ವಿವಿಧ ವಾದ್ಯ ತಂಡಗಳು ಹಾಗೂ ಪೂರ್ಣ ಕುಂಭ ಹೊತ್ತ ಮಹಿಳೆಯರು ಯಾತ್ರೆಯಲ್ಲಿ ಭಾಗವಹಿಸಿ ಮೆರುಗು ತಂದರು.

ದಾರಿಯುದ್ದಕ್ಕೂ ಮೋದಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರ ಘೋಷಣೆ ಮೊಳಗಿಸುತ್ತ, ಕಾರ್ಯಕರ್ತರು ಲವಲವಿಕೆಯಿಂದ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಪಕ್ಷ ತೊರೆಯುತ್ತಾರೆ ಎಂಬ ವದಂತಿ ನಡುವೆ ಶಾಸಕ ಎನ್‌.ವೈ. ಗೋಪಾಲಕೃಷ್ಣ ಕೂಡ ರೋಡ್‌ ಶೋ ದಲ್ಲಿ ಭಾಗವಹಿಸಿ ಗಮನ ಸೆಳೆದರು.

ಶಾಸಕ ಜಗದೀಶ ಶೆಟ್ಟರ್, ಸಂಸದ ವೈ. ದೇವೇಂದ್ರಪ್ಪ, ತೆಲಂಗಾಣದ ಬಿಜೆಪಿ ನಾಯಕಿ ಬಿ.ಕೆ. ಅರುಣಾ, ವಿಧಾನ ಪರಿಷತ್ ಸದಸ್ಯ ವೈ. ಸತೀಶ್, ಬಿಜೆಪಿ ಮಂಡಲ ಅಧ್ಯಕ್ಷ ಕೆ.ಚನ್ನಪ್ಪ, ಎಸ್ಟಿ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸೂರ್ಯಪಾಪಣ್ಣ, ಬಿ. ಭೀಮೇಶ್ ಭಾಗಿಯಾಗಿದ್ದರು. ‘ರಾಜ್ಯ, ಕೇಂದ್ರ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಪುನಃ ಅಧಿಕಾರದ ಗದ್ದುಗೆ ಏರಲಿದೆ’ ಎಂದು ಮುಖಂಡರು ಭರವಸೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮುಖಂಡರು ಪಟ್ಟಣದ ಗಾಂಧಿ ಚಿತಾ‌ಭಸ್ಮವಿರುವ ಹುತಾತ್ಮಾರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು

ತೋರಣಗಲ್‌ನಲ್ಲಿ ಪ್ರಚಾರ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಸಂಡೂರು ತಾಲ್ಲೂಕಿನ ತೋರಣಗಲ್‌ ಪಟ್ಟಣದಲ್ಲಿ ಬುಧವಾರ ಪಕ್ಷದ ರೋಡ್‌ ಶೋ ಜರುಗಿತು. ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯುವುದರ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಧೂಳಿಪಟ ಮಾಡಲಾಗುವುದು ಎಂದು ಹೇಳಿದ ಮುಖಂಡರು ಡಬಲ್‌ ಎಂಜಿನ್‌ ಸರ್ಕಾರದ ಸಾಧನೆಗಳನ್ನು ವಿವರಿಸಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT