ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಣದ ಚಿಕ್ಕಮೆಗಳಗೆರೆ ಕೆರೆ ಸೇತುವೆ

ಗ್ರಾಮ ಪಂಚಾಯತಿಗೆ ತೆರಳಲು ಸಾರ್ವಜನಿಕರ ಪರದಾಟ
Last Updated 20 ಏಪ್ರಿಲ್ 2022, 6:44 IST
ಅಕ್ಷರ ಗಾತ್ರ

ಅರಸೀಕೆರೆ (ವಿಜಯನಗರ ಜಿಲ್ಲೆ): ಇಲ್ಲಿನ ಚಿಕ್ಕಮೆಗಳಗೆರೆ ಗ್ರಾಮದ ಕೆರೆಯ ಸೇತುವೆ ಶಿಥಿಲಗೊಂಡು, ರಸ್ತೆ ಹಾಳಾಗಿದ್ದರೂ ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗದ ಕಾರಣ ಸಾರ್ವಜನಿಕರು ಪರದಾಡುವುದು ತಪ್ಪಿಲ್ಲ.

ಕಳೆದ ಹಿಂಗಾರಿನ ಅವಧಿಯಲ್ಲಿ ಉಚ್ಚಂಗಿದುರ್ಗ, ಹಿರೇಮೆಗಳಗೆರೆ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿತ್ತು. ಮಳೆಯಿಂದಾಗಿ ಕೆರೆ ಬಳಿ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿತ್ತು. ರಸ್ತೆಯುದ್ದಕ್ಕೂ ಕಂದಕಗಳು ಸೃಷ್ಟಿಯಾಗಿವೆ. ಸಂಚಾರ ದುಸ್ತರವಾಗಿತ್ತು. ಇತ್ತೀಚೆಗೆ ರೈತರೇ ಅಲ್ಲಲ್ಲಿ ಮಣ್ಣು ಹಾಕಿ, ಓಡಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ದೊಡ್ಡ ವಾಹನಗಳ ಸಂಚಾರ ಸಾಧ್ಯವಿಲ್ಲ. ಬೈಕ್‌ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಇದೆ.

ಇನ್ನೊಂದು ತಿಂಗಳು ಕಳೆದರೆ ಮತ್ತೆ ಮುಂಗಾರು ಪ್ರವೇಶವಾಗುತ್ತದೆ. ಹೀಗಿದ್ದರೂ ಸೇತುವೆ ದುರಸ್ತಿಯತ್ತ ಗಮನ ಹರಿಸಿಲ್ಲ. ಈ ಸಲ ಭಾರಿ ಮಳೆ ಬಂದರೆ ಅಲ್ಪಸ್ವಲ್ಪ ಉಳಿದಿರುವ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಆಗ ಬೇರೆ ಊರುಗಳೊಂದಿಗೆ ಗ್ರಾಮ ಸಂಪರ್ಕ ಕಳೆದುಕೊಳ್ಳಬಹುದು.

ಹದಗೆಟ್ಟ ಸೇತುವೆಯಿಂದಾಗಿ ಹಿರೇಮೆಗಳಗೆರೆ ಗ್ರಾಮ ಪಂಚಾಯಿತಿ ಕಚೇರಿ, ಬ್ಯಾಂಕ್, ಆರೋಗ್ಯ ಕೇಂದ್ರಗಳಿಗೆ ತೆರಳುವ ಪೋತಲಕಟ್ಟೆ, ನಾಗತಿಕಟ್ಟೆ ತಾಂಡದ ನೂರಾರು ಜನರಿಗೆ ಸಂಚರಿಸಲು ಸಮಸ್ಯೆಯಾಗಿದೆ.ರಸ್ತೆಯುದ್ದಕ್ಕೂ ಮುಳ್ಳು ಕಂಟಿಗಳು ಬೆಳೆದಿವೆ. ವರ್ಷದಿಂದ ವರ್ಷಕ್ಕೆ ರಸ್ತೆ ಕಿರಿದಾಗುತ್ತ ಹೋಗುತ್ತಿದೆ.ಸಂಬಂಧಪಟ್ಟವರು ಗಮನಹರಿಸಿ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT