ಹೂವಿನಹಡಗಲಿ (ವಿಜಯನಗರ ಜಿಲ್ಲೆ): ‘ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿಯ ಅಭಿನವ ಹಾಲವೀರಪ್ಪ ಸ್ವಾಮೀಜಿ ಅವರು ರಾಜಕಾರಣಿಗಳ ಸಂಗ ಮಾಡಿದ್ದರಿಂದ 10 ರಿಂದ 12 ವರ್ಷಗಳಲ್ಲಿ ಜೀವನಶೈಲಿ ಬದಲಾಗಿತ್ತು. ಅವರ ಬಂಧನದಿಂದ ಮಠದ ಒಟ್ಟಾರೆ ಅಭಿಮಾನಕ್ಕೆ ಭಂಗವಾಗಿದೆ’ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.
‘ಹಿರೇಹಡಗಲಿ ಹಾಲಸ್ವಾಮಿ ಮಠ ವಿಶಿಷ್ಟ ಧಾರ್ಮಿಕ ಪರಂಪರೆಯನ್ನು ಹೊಂದಿದೆ. ಮಠದ ಜಾತ್ಯತೀತ, ಧರ್ಮಾತೀತ ತತ್ವಕ್ಕೆ ವಿರುದ್ಧವಾಗಿ ಸ್ವಾಮೀಜಿ ಬೇರೆ ಬೇರೆ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಕಾವಿ ಬಟ್ಟೆ ದುರ್ಬಳಕೆ ಮಾಡಿಕೊಂಡು ರಾಜಕೀಯ ನಾಯಕರ ನಂಟು ಬೆಳೆಸಿದ್ದೇ ಈಗಿನ ಸ್ಥಿತಿಗೆ ಕಾರಣ’ ಎಂದು ಸ್ಥಳೀಯರು ತಿಳಿಸಿದರು.
‘ವಿಧಾನಸಭೆ ಚುನಾವಣೆಗೆ ಮುನ್ನ ದಿನಗಳಲ್ಲಿ ಉದ್ಯಮಿ ಗೋವಿಂದಬಾಬು ಪೂಜಾರಿ, ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಹಿರೇಹಡಗಲಿ ಹಾಲಸ್ವಾಮಿ ಮಠಕ್ಕೆ ಭೇಟಿ ನೀಡಿ ಹಾಲವೀರಪ್ಪ ಸ್ವಾಮೀಜಿ ಜತೆ ಮಾತುಕತೆ ನಡೆಸಿದ್ದಾರೆ. ಇಲ್ಲಿನ ಮಠದಲ್ಲೇ ಹಣದ ವ್ಯವಹಾರ ನಡೆದಿರಬಹುದು’ ಎಂದು ಸ್ಥಳೀಯರು ಶಂಕಿಸುತ್ತಾರೆ.
ವಂಚನೆ ಪ್ರಕರಣ ದಾಖಲಾದ ಬಳಿಕ ಸಿಸಿಬಿ ಪೊಲೀಸರು ಹಿರೇಹಡಗಲಿಗೆ ಭೇಟಿ ನೀಡಿ, ಆಸ್ತಿ ಮತ್ತು ಇನ್ನಿತರ ವಿವರ ಸಂಗ್ರಹಿಸಿದ್ದಾರೆ. ವಿಚಾರಣೆಗಾಗಿ ಅವರನ್ನು ಹಿರೇಹಡಗಲಿಗೆ ಕರೆತರುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.