ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ನೋಂದಣಿ ವಿಳಂಬ: ಮೂವರಿಗೆ ಕೊಕ್‌

ಹೊಸಪೇಟೆ ನಗರಸಭೆ– ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಭೇಟಿಯ ಫಲ
Published 25 ಮೇ 2024, 15:41 IST
Last Updated 25 ಮೇ 2024, 15:41 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಖಾತಾ ವರ್ಗಾವಣೆ, ಫಾರಂ–3 ಮತ್ತು ನವೀಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಲ್ಲಿಸಿದ್ದ ಕಡತಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸದೆ ವಿಳಂಬ ತಂತ್ರ ಅನುಸರಿಸುತ್ತಿದ್ದ ಮೂವರು ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಕೆಲಸದಿಂದ ತೆಗೆದುಹಾಕಲು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಅವರು ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮನೋಹರ್ ಅವರು ಪ್ರತಿ ಸೋಮವಾರ ನಗರಸಭೆಗೆ ಭೇಟಿ ನೀಡಿ ಬಾಕಿ ಕಡತಗಳನ್ನು ಪರಿಶೀಲಿಸುವ ಕ್ರಮ ಕೈಗೊಂಡಿದ್ದರಿಂದ 225 ಕಡತಗಳನ್ನು ಅನಗತ್ಯವಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸದೆ ವಿಳಂಬ ತಂತ್ರ ಅನುಸರಿಸಿದ್ದು ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಅವರು ನೀಡಿದ ವರದಿ ಹಾಗೂ ಸಾರ್ವಜನಿಕರು ಸಲ್ಲಿಸಿದ ದೂರಿನ ಆಧಾರದಲ್ಲಿ ಜಿಲ್ಲಾಧಿಕಾರಿ ಅವರು ಈ ಸೂಚನೆ ನೀಡಿದ್ದಾರೆ.

ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್‌ಗಳಾದ ರಾಜು, ಶ್ರೀನಿವಾಸ್‌ ಮತ್ತು ಅಕ್ಬರ್‌ ಅವರನ್ನು ಬದಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ಬಾಕಿ ಉಳಿಸಿಕೊಂಡಿರುವ ಅರ್ಜಿಗಳ ಕುರಿತು ವೈಯಕ್ತಿಕವಾಗಿ ಗಮನ ಹರಿಸಿ ಕ್ರಮ ಕೈಗೊಳ್ಳದ್ದಕ್ಕೆ ಪೌರಾಯುಕ್ತರನ್ನೂ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಲೋಕಾಯುಕ್ತ ತನಿಖೆ ಪ್ರಗತಿಯಲ್ಲಿ: ನಗರಸಭೆಯಲ್ಲಿ ಕಡತಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬವಾಗುತ್ತಿರುವುದರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ನಾಲ್ಕು ತಿಂಗಳ ಹಿಂದೆ ಇದೇ ಕಾರಣಕ್ಕೆ ಲೋಕಾಯುಕ್ತ ಅಧಿಕಾರಿಗಳು ನಗರಸಭೆಗೆ ಬಂದು ಇಡೀ ದಿನ ಕಡತಗಳ ಪರಿಶೀಲನೆ ನಡೆಸಿದ್ದರು ಹಾಗೂ ಒಟ್ಟು 18 ಮಂದಿಯ ವಿರುದ್ಧ ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದ್ದರು.

ಲೋಕಾಯುಕ್ತ ತನಿಖೆ ಎದುರಿಸುತ್ತಿರುವರಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ, ಈ ಹಿಂದಿನ ಪೌರಾಯುಕ್ತ, ಕಚೇರಿ ವ್ಯವಸ್ಥಾಪಕ, ಆರೋಗ್ಯ ಪರಿವೀಕ್ಷಕ, ಮೂವರು ಕಂದಾಯ ಪರಿವೀಕ್ಷಕರು, ಇಬ್ಬರು ಎಫ್‌ಡಿಗಳು, ಆರು ಮಂದಿ ಬಿಲ್‌ ಕಲೆಕ್ಟರ್‌ಗಳು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT