ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಸಾಲು ರಜೆ; ಹಂಪಿಯಲ್ಲಿ ಸಂಚಾರ ಅಸ್ತವ್ಯಸ್ತ

Last Updated 14 ಆಗಸ್ಟ್ 2022, 13:16 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸಾಲು ಸಾಲು ರಜೆಗಳು ಬಂದದ್ದರಿಂದ ವಿಶ್ವಪ್ರಸಿದ್ಧ ಹಂಪಿಗೆ ಪ್ರವಾಸಿಗರ ದಂಡೇ ಹರಿದು ಬಂದಿದೆ.
ಶುಕ್ರವಾರ ರಕ್ಷಾ ಬಂಧನ, ಎರಡನೇ ಶನಿವಾರ, ಭಾನುವಾರ ರಜಾ ದಿನ ಹಾಗೂ ಸೋಮವಾರ ಆ.15 ಕೂಡ ರಜೆ ಇರುವುದರಿಂದ ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಉತ್ತರ ಭಾರತದ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಜನ ಬಂದಿದ್ದಾರೆ.

ಬಹುತೇಕರು ಸ್ವಂತ ವಾಹನಗಳಲ್ಲಿ ಬಂದದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಒಂದೇ ಸ್ಮಾರಕ ವೀಕ್ಷಿಸಲು ಗಂಟೆಗಟ್ಟಲೇ ಸಮಯ ವ್ಯಯಿಸಬೇಕಾಯಿತು. ಅದರಲ್ಲೂ ಹಂಪಿ ತಳವಾರಘಟ್ಟಕ್ಕೆ ಹೋಗುವ ರಸ್ತೆ ಕಿರಿದಾಗಿದ್ದು, ರಸ್ತೆಯ ಎರಡೂ ಬದಿಯಲ್ಲಿ ಬೇಕಾಬಿಟ್ಟಿ ನಿಲ್ಲಿಸಿದ್ದರಿಂದ ವಾಹನಗಳು ಚಲಿಸಲಾರದೇ ಸಿಕ್ಕಿಕೊಂಡಿದ್ದವು. ಸುಗಮ ವಾಹನ ಸಂಚಾರಕ್ಕೆ ಪೊಲೀಸರು ಪರದಾಡಿದರು.

ಎರಡು ವಾರಗಳ ಹಿಂದೆಯೇ ನಗರದ ಎಲ್ಲ ಹೋಟೆಲ್‌, ತಾಲ್ಲೂಕಿನ ಕಮಲಾಪುರ, ಕಡ್ಡಿರಾಂಪುರ, ನೆರೆಯ ಕೊಪ್ಪಳ ಜಿಲ್ಲೆಯ ಹೋಟೆಲ್‌, ರೆಸಾರ್ಟ್‌ಗಳಲ್ಲಿ ಕೊಠಡಿಗಳು ಕಾಯ್ದಿರಿಸಲಾಗಿತ್ತು. ಕೊಠಡಿಗಳನ್ನು ಕಾಯ್ದಿರಿಸದೇ ನೇರವಾಗಿ ಬಂದ ಪ್ರವಾಸಿಗರು ತೊಂದರೆ ಅನುಭವಿಸಿದರು. ಕೆಲವರು ಅವರ ವಾಹನಗಳಲ್ಲಿಯೇ ರಾತ್ರಿ ಕಾಲ ಕಳೆದರು.

ಕೆಲವರು ಸಂಜೆಯ ವರೆಗೆ ಸ್ಮಾರಕಗಳನ್ನು ಕಣ್ತುಂಬಿಕೊಂಡು, ಒಂದೇ ದಿನಕ್ಕೆ ಪ್ರವಾಸ ಮೊಟಕುಗೊಳಿಸಿ ಹಿಂತಿರುಗುವ ದೃಶ್ಯ ಕಂಡು ಬಂತು.

ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟದ ಸಂದರ್ಭದಲ್ಲಿ ನಗರ ಸೇರಿದಂತೆ ವಿವಿಧ ಕಡೆಯ ಹೋಟೆಲ್‌ಗಳಲ್ಲಿ ಜನಜಾತ್ರೆ ಕಂಡು ಬಂತು. ಹೋಟೆಲ್‌ಗಳವರಿಗೆ ಬಿಡುವಿಲ್ಲದ ಕೆಲಸ. ಕೈತುಂಬ ಹಣ ಗಳಿಸಲು ಇದೇ ಸುವರ್ಣಾವಕಾಶ ಎಂದು ಭಾವಿಸಿ ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡು ಹೆಚ್ಚಿನ ಆಹಾರ ತಯಾರಿಸುತ್ತಿದ್ದಾರೆ.

ರಾಜ್ಯದ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಬೇರೆ ಕಡೆಗಳಿಗೆ ಜನ ಹೋಗುತ್ತಿಲ್ಲ. ನಗರದ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿದ್ದು, ನದಿಗೆ 1.20 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಆದರೆ, ಇದರಿಂದ ಜನರಿಗೆ ಯಾವುದೇ ಸಮಸ್ಯೆ ಇಲ್ಲ.

ನದಿ ಮೈದುಂಬಿಕೊಂಡು ಹರಿಯುತ್ತಿರುವುದರಿಂದ ಹಂಪಿ ಪರಿಸರಕ್ಕೆ ವಿಶೇಷ ಕಳೆ ಬಂದಿದೆ. ಹಾಗಾಗಿ ಹೆಚ್ಚಿನ ಪ್ರವಾಸಿಗರು ಹಂಪಿಗೆ ಬಂದು ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದ್ದು, ಜನ ಹಾಲ್ನೊರೆಯಂತೆ ಹರಿಯುತ್ತಿರುವ ದೃಶ್ಯ ಕಣ್ತುಂಬಿಕೊಂಡು ಪುಳಕಿತರಾಗುತ್ತಿದ್ದಾರೆ. ಸೆಲ್ಫಿ, ಛಾಯಾಚಿತ್ರ ತೆಗೆದುಕೊಳ್ಳುತ್ತಿದ್ದಾರೆ. ಹಂಪಿ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ದರೋಜಿ ಕರಡಿಧಾಮದಲ್ಲೂ ಪ್ರವಾಸಿಗರ ದಟ್ಟಣೆ ಕಂಡು ಬಂತು.

ಒತ್ತಡದ ಕೆಲಸದಿಂದ ದೂರವಿದ್ದು, ಜನ ಪ್ರವಾಸಿ ತಾಣಗಳಲ್ಲಿ ಸುತ್ತುವುದರ ಮೂಲಕ ಅದನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದದ್ದರಿಂದ ಹಂಪಿ ವ್ಯಾಪಾರಿಗಳು, ಗೈಡ್‌ಗಳಿಗೆ ಬಿಡುವಿಲ್ಲದ ಕೆಲಸ. ಎಲ್ಲರಿಗೂ ಕೈತುಂಬ ಹಣ ಗಳಿಸುವ ಅವಕಾಶ ಒಲಿದು ಬಂದಿದೆ. ಸೋಮವಾರ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT