ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಮಾತ್ರ ಕರ್ಫ್ಯೂ, ರಾಜಕೀಯ ನಾಯಕರಿಗಲ್ಲ: ಜಗನ್‌ ಆಕ್ರೋಶ

Last Updated 12 ಜನವರಿ 2022, 12:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ತಡೆಯಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರಾತ್ರಿ ಹಾಗೂ ವೀಕೆಂಡ್‌ ಕರ್ಫ್ಯೂ ಜನಸಾಮಾನ್ಯರಿಗೆ ಸೀಮಿತವಾಗಿದೆ ಹೊರತು ರಾಜಕೀಯ ನಾಯಕರಿಗಲ್ಲ. ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ’ ಎಂದು ಕರ್ನಾಟಕ ಪ್ರಜಾ ಅಧಿಕಾರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಜಗನ್‌ ಸಿಟ್ಟು ಹೊರಹಾಕಿದರು.

‘ಉಳ್ಳವರಿಗೊಂದು, ಇಲ್ಲದವರಿಗೊಂದು ನಿಯಮ ಜಾರಿಯಲ್ಲಿದೆ. ಇದರಿಂದ ದಿನಗೂಲಿ ನೌಕರರು, ಬಡತನ ರೇಖೆಗಿಂತ ಕೆಳಗಿರುವವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜನರು ಗುಂಪುಗೂಡದಂತೆ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರಿಗೆ ಯಾರೂ ಕೇಳುವವರು ಇಲ್ಲದಂತಾಗಿದೆ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

‘ರಾಜ್ಯದಾದ್ಯಂತ ದಿನೇ ದಿನೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಯಾವುದೇ ಸಂದರ್ಭದಲ್ಲಿ ಲಾಕ್‌ಡೌನ್‌ ಮಾಡುವ ಮಾತುಗಳು ಕೇಳಿ ಬರುತ್ತಿವೆ. ರಾಜ್ಯದಲ್ಲಿ 1.32 ಕೋಟಿ ಬಿಪಿಎಲ್‌ ಕಾರ್ಡುದಾರರಿದ್ದಾರೆ. ಅವರಿಗೆ ಮಾಸಿಕ ₹10,000 ಪರಿಹಾರ ನೀಡಬೇಕು. ಕೋವಿಡ್‌ನಿಂದ ಮೃತರಾದ ಕುಟುಂಬದವರಿಗೆ ಇದುವರೆಗೆ ಪರಿಹಾರ ವಿತರಿಸಿಲ್ಲ. ದಾಖಲೆಗಳ ನೆಪವೊಡ್ಡಿ ಪರಿಹಾರ ನೀಡುವುದು ವಿಳಂಬ ಮಾಡಬಾರದು‘ ಎಂದು ಆಗ್ರಹಿಸಿದರು.

‘ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಈಗಲಾದರೂ ಸರ್ಕಾರ ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ದಿನಗೂಲಿ ಮಾಡುವವರು, ಬಡತನ ರೇಖೆಗಿಂತ ಕೆಳಗಿನವರಿಗೆ ಆಹಾರ ಭದ್ರತೆ ಒದಗಿಸಬೇಕು. ಯಾರೂ ಹಸಿವಿನಿಂದ ಮಲಗಬಾರದು. ಸಾಯಬಾರದು. ಸರ್ಕಾರ ಸೂಕ್ಷ್ಮವಾಗಿ ವರ್ತಿಸಬೇಕು‘ ಎಂದು ಒತ್ತಾಯಿಸಿದರು.

‘ಕೋವಿಡ್‌ನಿಂದ ಅನೇಕರು ಕೆಲಸ ಕಳೆದುಕೊಂಡು ಅವರ ಊರುಗಳಿಗೆ ಹಿಂತಿರುಗಿದ್ದಾರೆ. ಅಂತಹವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷವಿಡೀ ಕೆಲಸ ನೀಡಬೇಕು. ನಿತ್ಯ ಕೂಲಿ ಪಾವತಿಸಬೇಕು. ಎಲ್ಲ ಕೋವಿಡ್‌ ಮುಂಚೂಣಿ ನೌಕರರಿಗೆ ಸಮಾನ ಸೌಕರ್ಯ ಕಲ್ಪಿಸಬೇಕು‘ ಎಂದು ಹಕ್ಕೊತ್ತಾಯ ಮಾಡಿದರು.

ಮುಖಂಡ ಪಿ. ಅಬ್ದುಲ್ಲಾ ಮಾತನಾಡಿ, ‘ಸರ್ಕಾರ ಲಾಕ್‌ಡೌನ್‌ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ, ದುಡಿಯುವ ವರ್ಗಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಬಳ್ಳಾರಿ–ವಿಜಯನಗರ ಜಿಲ್ಲೆಯಲ್ಲಿ ಕೋವಿಡ್‌ನಿಂದ 400ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ತಕ್ಷಣವೇ ಪರಿಹಾರ ಕಲ್ಪಿಸಿಕೊಡುವ ಕೆಲಸ ಮಾಡಬೇಕು‘ ಎಂದು ಆಗ್ರಹಿಸಿದರು. ಮುಖಂಡ ಇನ್ಸಾಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT