ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ | ಹವಾಮಾನ ವೈಪರೀತ್ಯ: ಮೆಕ್ಕೆಜೋಳ ಇಳುವರಿ ಕುಂಠಿತ

ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿ; ಸಂಕಷ್ಟದಲ್ಲಿ ರೈತರು
Published : 20 ಸೆಪ್ಟೆಂಬರ್ 2024, 5:56 IST
Last Updated : 20 ಸೆಪ್ಟೆಂಬರ್ 2024, 5:56 IST
ಫಾಲೋ ಮಾಡಿ
Comments

ಅರಸೀಕೆರೆ: ಹರಪನಹಳ್ಳಿ ತಾಲ್ಲೂಕಿನ ಮೆಕ್ಕೆಜೋಳದ ಕಣಜ ಎನಿಸಿಕೊಂಡಿರುವ ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಹವಾಮಾನ ವೈಪರೀತ್ಯದಿಂದ ಮೆಕ್ಕೆಜೋಳದ ಇಳುವರಿ ಕುಂಠಿತಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದ್ದು, 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ನಿರೀಕ್ಷೆಯಂತೆ ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಜುಲೈ ತಿಂಗಳ ಅವಧಿಯಲ್ಲಿ ಬಿತ್ತನೆ ಮಾಡಲಾಗಿದೆ.

ಬಿತ್ತನೆ ಮಾಡಿದ ದಿನಗಳ ನಂತರದಲ್ಲಿ ಆರಂಭವಾದ ಮಳೆಯು ಆಗಸ್ಟ್‌ವರೆಗೂ ಮುಂದುವರಿದಿದ್ದು, ಬೆಳೆಗೆ ತೇವಾಂಶ ಹೆಚ್ಚಾಗಿ ಬೆಳೆ ಹಾನಿಯಾಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳವಣಿಗೆ ಇಲ್ಲದೆ ಹಳದಿ ಬಣ್ಣಕ್ಕೆ ತಿರುಗಿ, ಕೊಳೆತು ನೆಲಕಚ್ಚಿದೆ. ಬೆಳೆ ಜಾನುವಾರುಗಳ ಪಾಲಾಗಿದೆ.

ಪುಣಭಗಟ್ಟ, ಹಿರೇಮೆಗಳಗೆರೆ, ತವಡೂರು, ಅಣಜಿಗೆರೆ, ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿದ ಮಳೆಗೆ ಬಿಸಿಲು ಕಾಣದ ಬೆಳೆಯ ಹೂ (ಸುಲಂಗಿ) ತೆನೆ ಮೇಲೆ ಪರಾಗ ಸ್ಪರ್ಶ ಆಗದೆ, ಸಮರ್ಪಕವಾಗಿ ಬೆಳೆದಿಲ್ಲ. ತೆನೆ ಅರ್ಧದಷ್ಟು ಖಾಲಿಯಾಗಿದ್ದು, ಬೀಜಗಳು ಬಲಿಷ್ಠವಾಗಿಲ್ಲ. ಅಲ್ಲದೆ, ಮೆಕ್ಕೆಜೋಳ ಬೆಳೆಗೆ ಲದ್ದಿ ಹಾಗೂ ತೆನೆ ಕೊರಕ ಹುಳುವಿನ ಬಾಧೆಯು ರೈತರನ್ನು ಸಂಕಷ್ಟಕ್ಕೆ ದೂಡಿದೆ.

‘ಕೊಳೆ ರೋಗದಿಂದ ನಾಲ್ಕು ಎಕರೆಯಲ್ಲಿ ಬೆಳೆದ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಮಳೆ ಇದ್ದಾಗ ಉತ್ತಮವಿದ್ದ ಬೆಳೆ, ಬಿಡುವಿನ ಬಳಿಕ ಏಕಾಏಕಿ ಒಣಗುತ್ತಿದೆ. ತೆನೆ ಕಟ್ಟುತ್ತಿಲ್ಲ. ಹೊರಗಡೆ ತೆನೆ ಕಂಡರೂ ಒಳಗಡೆ ಬೀಜವಿಲ್ಲ. ಕಳೆದ ಬಾರಿ ಅನಾವೃಷ್ಟಿಗೆ ನೊಂದಿದ್ದು, ಈ ಸಲವೂ ಬರೆ ಎಳೆದಂತಾಗಿದೆ' ಎಂದು ಪುಣಭಗಟ್ಟ ಗ್ರಾಮದ ರೈತ ಅಂಜಿನಪ್ಪ ಅಳಲು ತೋಡಿಕೊಂಡರು.

ಹಾನಿಯಾದ ಮೆಕ್ಕೆಜೋಳ ಬೆಳೆ ಕಟಾವು ಮಾಡಿ ಜಾನುವಾರುಗಳಿಗೆ ಕೊಂಡೊಯ್ಯುತ್ತಿರುವುದು
ಹಾನಿಯಾದ ಮೆಕ್ಕೆಜೋಳ ಬೆಳೆ ಕಟಾವು ಮಾಡಿ ಜಾನುವಾರುಗಳಿಗೆ ಕೊಂಡೊಯ್ಯುತ್ತಿರುವುದು
ನಂದಿಕಂಬ ಗ್ರಾಮದ ರೈತರೊಬ್ಬರ ಹೊಲದಲ್ಲಿ ಅರೆಬರೆಯಾಗಿ ಬೆಳೆದಿರುವ ಮೆಕ್ಕೆಜೋಳ
ನಂದಿಕಂಬ ಗ್ರಾಮದ ರೈತರೊಬ್ಬರ ಹೊಲದಲ್ಲಿ ಅರೆಬರೆಯಾಗಿ ಬೆಳೆದಿರುವ ಮೆಕ್ಕೆಜೋಳ
ಪ್ರಾಥಮಿಕ ವರದಿ ಪಡೆದು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅಗತ್ಯವಿದ್ದರೆ ಕೃಷಿ ತಜ್ಞರ ತಂಡ ಭೇಟಿಗೆ ವ್ಯವಸ್ಥೆ ಕಲ್ಪಿಸಲಾಗುವುದು
ಉಮೇಶ್ ವಿ.ಸಿ. ಸಹಾಯಕ ಕೃಷಿ ನಿರ್ದೇಶಕ
ನೂರಾರು ಎಕರೆಯಲ್ಲಿ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು
ಕೆ.ಕೆಂಚಪ್ಪ ರೈತ ಉಚ್ಚಂಗಿದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT