ಮರಿಯಮ್ಮನಹಳ್ಳಿ: ಚಿತ್ರದುರ್ಗ–ಹೊಸಪೇಟೆ ಹೆದ್ದಾರಿಯಲ್ಲಿ ಹೊಸಪೇಟೆಗೆ ಕೇವಲ ನಾಲ್ಕು ಕಿ.ಮೀ.ದೂರದಲ್ಲಿರುವ ಗುಂಡಾ ಫಾರೆಸ್ಟ್, ತುಂಬಿ ತುಳುಕುತ್ತಿರುವ ತುಂಗಭದ್ರಾ ಜಲಾಶಯದ ಹಿನ್ನೀರಿನ ಕಾರಣ ಇದೀಗ ಜನಾಕರ್ಷಣೆಯ ಕೇಂದ್ರವಾಗಿದೆ.
ತುಂಗಭದ್ರೆಯ ಹಿನ್ನೀರು ಸಮುದ್ರದ ತೆರೆಯಂತೆ ನೀರನ್ನು ದಡಕ್ಕೆ ಅಪ್ಪಳಿಸುತ್ತಿದ್ದು, ಗುಂಡಾ ಫಾರೆಸ್ಟ್ ಒಳಗಡೆ ಕಾರಂಜಿಯಂತೆ ನೀರು ಪ್ರವಾಸಿಗರ ಮೇಲೆ ಚಿಮ್ಮುತ್ತಿದೆ. ಈ ನೀರನ್ನು ಚಿಮುಕಿಸಿಕೊಳ್ಳಲು ಮುಂದಾಗುವ ಮಕ್ಕಳ ಆನಂದಕ್ಕೆ ಎಣೆಯೇ ಇಲ್ಲ. ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ಈ ಉದ್ಯಾನದಲ್ಲಿ ಅಕ್ವೇರಿಯಂ ಒಂದಿದ್ದು, ಸದ್ಯ ಅದು ಮುಚ್ಚಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಕಾರಣ ಇನ್ನಷ್ಟು ಜನರನ್ನು ಸೆಳೆಯಲು ಅಕ್ವೇರಿಯಂ ಅನ್ನು ಮತ್ತೆ ಶೀಘ್ರ ತೆರೆಯಲು ಸಿದ್ಧತೆ ನಡೆದಿದೆ.
‘ಈ ವರ್ಷ ಜಲಾಶಯ ತುಂಬಿದೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅಕ್ವೇರಿಯಂನಲ್ಲಿ ಚೆಂದದ ಮೀನುಗಳಿವೆ, ನೋಡಲು ಖುಷಿಯಾಗುವ ವಾತಾವರಣವೂ ಇದೆ. ಒಬ್ಬ ಸಿಬ್ಬಂದಿ ನಿವೃತ್ತಿಯಾದ ಕಾರಣ ಅಕ್ವೇರಿಯಂ ಅನ್ನು ಸದ್ಯ ಮುಚ್ಚಲಾಗಿದೆ. ಶೀಘ್ರ ಇನ್ನೊಬ್ಬರನ್ನು ನಿಯೋಜಿಸಿ ಅಕ್ವೇರಿಯಂ ತೆರೆಯಲಿದ್ದೇವೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಭರತ್‌ರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹೆದ್ದಾರಿ ಬದಿಯಲ್ಲೇ ತುಂಗಭದ್ರೆಯ ಹಿನ್ನೀರು ಜನರನ್ನು ಸೆಳೆಯುತ್ತಿದೆ. ಸಂಚಾರಕ್ಕೆ ತೊಂದರೆ ಆಗದಂತೆ ಪ್ರಕೃತಿಯನ್ನು ಸವಿಯಿರಿಅರ್ಸಲನ್, ಡಿಸಿಎಫ್
ಉದ್ಯಾನದೊಳಗೆ ಶನಿವಾರ ಹತ್ತಾರು ಮಕ್ಕಳು ಚಿಮ್ಮುತ್ತಿರುವ ನೀರನ್ನು ಚಿಮುಕಿಸಿಕೊಳ್ಳುತ್ತ ಖುಷಿ ಪಡುತ್ತಿದ್ದ ದೃಶ್ಯ ಕಂಡುಬಂತು. ನೀರಿಗೆ ಇಳಿಯದಂತೆ ಉತ್ತಮ ತಡೆಬೇಲಿ ಇದ್ದು, ಗೇಟ್‌ಗಳು ಇರುವಲ್ಲಿ ಮುಳ್ಳಿನ ಬೇಲಿ ಅಳವಡಿಸಿ ಜನರು ನೀರಿಗೆ ಇಳಿಯದಂತೆ ವ್ಯವಸ್ಥೆ ಮಾಡಲಾಗಿದೆ. ಹತ್ತಾರು ವಾಹನಗಳಿಗೆ ನಿಲುಗಡೆಗೆ ವ್ಯವಸ್ಥೆ ಇದ್ದರೂ, ವಾರಾಂತ್ಯಗಳಲ್ಲಿ ಹೆದ್ದಾರಿ ಬದಿಯಲ್ಲೇ ಸರದಿಯಲ್ಲಿ ವಾಹನ ನಿಲ್ಲಿಸುವ ಅನಿವಾರ್ಯತೆ ಇದೆ.
ಸಾಮಾನ್ಯ ದಿನಗಳಲ್ಲೂ ಹೆದ್ದಾರಿ ಬದಿಯಲ್ಲೇ ವಾಹನ ನಿಲುಗಡೆ ಮಾಡಿ ಸೌಂದರ್ಯ ಸವಿಯುವವರ ಸಂಖ್ಯೆಯೂ ದೊಡ್ಡದಿದೆ. ಅವರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಇಬ್ಬರು ಗೃಹರಕ್ಷಕ ದಳದವರನ್ನು ನಿಯೋಜಿಸಿದೆ. ವಾರಾಂತ್ಯಗಳಲ್ಲಿ ಪೊಲೀಸರು ಸಹ ಇಲ್ಲಿ ನಿಯೋಜನೆಗೊಳ್ಳುತ್ತಿದ್ದಾರೆ.
ಡಿಸಿಎಫ್ ಸಲಹೆ
‘ತುಂಗಭದ್ರಾ ತುಂಬಿರುವುದು ಎಲ್ಲರಿಗೂ ಖುಷಿಯ ಸಂಗತಿ. ಪ್ರವಾಸಿಗರು ಸೌಂದರ್ಯ ಸವಿಯಬೇಕು, ನೀರಲ್ಲಿ ಹುಚ್ಚಾಟ ಆಡಬಾರದು. ಉದ್ಯಾನವನ್ನು ಇನ್ನಷ್ಟು ಆಕರ್ಷಣೀಯವಾಗಿಸಲು ಯೋಜನೆ ರೂಪುಗಳ್ಳುತ್ತಿದೆ’ ಎಂದು ಡಿಸಿಎಫ್ ಅರ್ಸಲನ್ ತಿಳಿಸಿದರು.
ಪ್ರತಿದಿನ ನೂರಾರು ಜನ ಭೇಟಿ
ಗುಂಡಾ ಫಾರೆಸ್ಟ್‌ಗೆ ಸಾಮಾನ್ಯ ದಿನಗಳಲ್ಲಿ ಪ್ರತಿದಿನ ನೂರಕ್ಕೂ ಅಧಿಕ ಹಾಗೂ ವಾರಾಂತ್ಯದಲ್ಲಿ 500ರಿಂದ 600 ಜನರು ಭೇಟಿ ನೀಡುತ್ತಾರೆ. ಮುಂದಿನ ಎರಡು ತಿಂಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ವಯಸ್ಕರಿಗೆ ₹20 ಹಾಗೂ ಮಕ್ಕಳಿಗೆ ₹10 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.