ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಪಿ ವಿಚಾರದಲ್ಲಿ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ವೀರಸಂಗಯ್ಯ

Last Updated 16 ಮಾರ್ಚ್ 2021, 9:48 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೊಡುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳಿ ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆರೋಪಿಸಿದರು.

‘ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಾಗುವುದು ಎಂದು ಮೋದಿಯವರು ಗುಜರಾತ್‌ ಮುಖ್ಯಮಂತ್ರಿ ಇದ್ದಾಗ ಹೇಳಿದ್ದರು. ಆದರೆ, ಈಗ ಅವರೇ ಹೇಳಿದ ಮಾತು ಮರೆತು ಹೋಗಿದ್ದಾರೆ’ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನವದೆಹಲಿ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಪ್ರಮುಖ ವಿಷಯ ಕನಿಷ್ಠ ಬೆಂಬಲ ಬೆಲೆ ನಿಗದಿಯೇ ಆಗಿದೆ. ಕೇಂದ್ರ ಸರ್ಕಾರದೊಂದಿಗೆ ರೈತರು ನಡೆಸಿದ 14 ಸಲದ ಮಾತುಕತೆಯಲ್ಲಿ ಇದೇ ವಿಷಯ ಮುಖ್ಯ ಬೇಡಿಕೆಯಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಒಪ್ಪುಕೊಳ್ಳುತ್ತಿಲ್ಲ. ಹಾಗಾಗಿಯೇ ರೈತರು ಕೂಡ ಪಟ್ಟು ಸಡಿಲಿಸುತ್ತಿಲ್ಲ’ ಎಂದರು.

‘ರೈತರ ಚಳವಳಿ 113ನೇ ದಿನಕ್ಕೆ ಕಾಲಿರಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಈಗಲೂ ದೇಶದ 70 ಕೋಟಿ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿ ಕ್ಷೇತ್ರ ನಾಶವಾದರೆ ಇತರೆಲ್ಲ ಕ್ಷೇತ್ರಗಳು ನಾಶವಾಗುತ್ತವೆ. ಸ್ವಾಮಿನಾಥನ್‌ ಆಯೋಗ ಕೂಡ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಟ್ಟರೆ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಶಿಫಾರಸು ಮಾಡಿದೆ. ಹೀಗಿದ್ದರೂ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ’ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆ, ಮುಕ್ತವಾದ ಕೃಷಿ ಬಗ್ಗೆ ಮಾತನಾಡುತ್ತಿದೆ. ಆದರೆ, ರಾಜ್ಯದಲ್ಲಿ 67 ಲಕ್ಷ ಸಣ್ಣ ರೈತರಿದ್ದಾರೆ. ಇವರೆಲ್ಲರೂ ಐದು ಎಕರೆಯೊಳಗೆ ಜಮೀನು ಹೊಂದಿರುವವರು. ಅವರ ಬಳಿ ಯಾರಾದರೂ ದಲ್ಲಾಳಿ ಹೋಗಿ ಅವರ ಉತ್ಪನ್ನ ಖರೀದಿಸಲು ಸಾಧ್ಯವೇ? ಹೊಸ ಕಾನೂನುಗಳಿಂದ ಕಾರ್ಪೊರೇಟ್‌ ಕಂಪನಿಯವರಿಗೆ ಲಾಭವಾಗಲಿದೆ ಹೊರತು ಸಾಮಾನ್ಯ ರೈತರಿಗೆ ಯಾವುದೇ ಪ್ರಯೋಜನವಿಲ್ಲ’ ಎಂದು ಹೇಳಿದರು.

‘ರೈತರಿಗೆ ಬೆಳೆ ಬೆಳೆಯುವುದಷ್ಟೇ ಗೊತ್ತು. ಹೆಚ್ಚಿನವರು ಅಮಾಯಕರು. ಯಾವ ಕಾನೂನಿನಿಂದ ಏನಾಗುತ್ತದೆ ಎನ್ನುವ ಅರಿವು ಇಲ್ಲ. ರಾಜ್ಯದಲ್ಲಿ 52 ಸಂಘಟನೆಗಳ ಒಕ್ಕೂಟ ಮಾಡಿಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದಾದ್ಯಂತ ಸಂಚರಿಸಿ ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎಂದರು.

‘ಹಸಿರು ಟವೆಲ್‌ ಹೆಸರಿನಲ್ಲಿ ಅನೇಕರು ಭ್ರಷ್ಟಾಚಾರ, ಗೂಂಡಾಗಿರಿ ಮಾಡುತ್ತಿದ್ದಾರೆ. ಹೀಗಾಗಿಯೇ ರೈತ ಸಂಘಟನೆಗೆ ಒಂದು ಸಂವಿಧಾನ ರಚಿಸಿ, ಹೊಸ ರೂಪ ಕೊಡಲಾಗಿದೆ. ಎಲ್ಲ ಪದಾಧಿಕಾರಿಗಳು ಅವರ ಆಸ್ತಿ ಘೋಷಣೆ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಮೂರು ವರ್ಷಗಳ ನಂತರ ಹೊಸ ಪದಾಧಿಕಾರಿಗಳ ನೇಮಕ ಮಾಡಲಾಗುತ್ತದೆ. ಪಾವಿತ್ರ್ಯತೆ ಉಳಿಸಿಕೊಂಡು ಸಂಘ ಕಟ್ಟಲಾಗುತ್ತಿದೆ. ರಾಜ್ಯದಾದ್ಯಂತ ಅನೇಕರು ಸಂಘಟನೆ ಸೇರುತ್ತಿದ್ದಾರೆ’ ಎಂದು ಹೇಳಿದರು.

22ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ
‘ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು, ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ಕೈಬಿಡುವುದು ಸೇರಿದಂತೆ 22 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ. 22ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ’ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ತಿಳಿಸಿದರು.

‘ಅಂದು ನಡೆಯಲಿರುವ ಹೋರಾಟದಲ್ಲಿ ರಾಜ್ಯದ ವಿವಿಧ ಭಾಗಗಳ 50,000 ರೈತರು ಪಾಲ್ಗೊಳ್ಳುವರು. ಶಿವಮೊಗ್ಗ, ಹಾವೇರಿಯಲ್ಲಿ ನಡೆಯಲಿರುವ ಮಹಾಪಂಚಾಯತ್‌ಗೆ ಎಷ್ಟೇ ಅಡ್ಡಿಪಡಿಸಿದರೂ ರೈತರು ಭಾಗವಹಿಸುವುದು ಖಚಿತ’ ಎಂದು ಹೇಳಿದರು.

ರೈತ ಸಂಘದ ಕಾರ್ಯಾಧ್ಯಕ್ಷ ವಸಂತಕುಮಾರ, ಜಿಲ್ಲಾ ಅಧ್ಯಕ್ಷ ಗೋಣಿಬಸಪ್ಪ, ತಾಲ್ಲೂಕು ಅಧ್ಯಕ್ಷ ಘಂಟೆ ಸೋಮಶೇಖರ್‌, ಮುಖಂಡರಾದ ಅಮ್ಜದ್‌ ಪಾಷಾ, ಖಾಜಾ ಹುಸೇನ್‌ ನಿಯಾಜಿ, ಎ. ಬಸವರಾಜ, ದಮ್ಮೂರು ಮಹೇಶ, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT