ಹೊಸಪೇಟೆ (ವಿಜಯನಗರ): ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ‘ಸಂಯುಕ್ತ ಹೋರಾಟ ಕರ್ನಾಟಕ’ ಸಂಘಟನೆ ಅಡಿ ರೈತರು ತಾಲ್ಲೂಕಿನ ಹಂಪಿಯಿಂದ ನಗರದ ವರೆಗೆ ಶುಕ್ರವಾರ ಪಾದಯಾತ್ರೆ ನಡೆಸಿದರು.
ಹಂಪಿ ವಿರೂಪಾಕ್ಷೇಶ್ವರ ದೇಗುಲದ ಬಳಿ ಆರಂಭಗೊಂಡ ಪಾದಯಾತ್ರೆ ಕಡ್ಡಿರಾಂಪುರ, ಮಲಪನಗುಡಿ, ಕೊಂಡನಾಯಕನಹಳ್ಳಿ, ಅನಂತಶಯನಗುಡಿ ಮೂಲಕ ಹಾದು ಡಾ. ಪುನೀತ್ ರಾಜಕುಮಾರ್ ವೃತ್ತ ತಲುಪಿದರು. ಅಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಜಿ. ಅವರಿಗೆ ಸಲ್ಲಿಸಿದರು.
ಹೊಸಪೇಟೆಯಲ್ಲಿ ಸರ್ಕಾರವೇ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ತಾಲ್ಲೂಕಿನಲ್ಲಿ ರಾಜಾಪುರ, ಪಿ.ಕೆ.ಹಳ್ಳಿ, ನಲಾಪುರ ಗ್ರಾಮಗಳಿಗೆ ಅನುಕೂಲವಾಗುವಂತೆ ಏತ ನೀರಾವರಿ ಯೋಜನೆ ಪ್ರಾರಂಭಿಸಬೇಕು. ತಾಲ್ಲೂಕಿನ ಜಂಬುನಾಥಹಳ್ಳಿ, ಸಂಕ್ಲಾಪುರದಲ್ಲಿ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ಕೊಡಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿ ಸಮರ್ಪಕವಾಗಿ ಬಳಸಬೇಕು. ಎಲ್‌ಎಲ್‌ಸಿಗೆ ಏ. 20ರ ವರೆಗೆ ನೀರು ಹರಿಸಬೇಕು. ಅಗತ್ಯ ವಸ್ತುಗಳು, ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಬೇಕು. ಕೃಷಿ ಪರಿಕರ, ರಸಗೊಬ್ಬರ ಬೆಲೆ ನಿಯಂತ್ರಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಆರ್. ಭಾಸ್ಕರ್ ರೆಡ್ಡಿ, ಜೆ. ಕಾರ್ತಿಕ್, ಸಣ್ಣಕ್ಕಿ ರುದ್ರಪ್ಪ, ನಾಗೇಶ ಲಂಬಾಣಿ, ಎನ್. ಯಲ್ಲಾಲಿಂಗ, ಎನ್. ಅಂಕ್ಲೇಶ್, ಕಾಳಿದಾಸ್, ಷರೀಫ್, ಜೆ.ಎನ್. ಕಾಳಿದಾಸ್, ವಿ. ಸ್ವಾಮಿ, ಪ್ರಕಾಶ್ ಇತರರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.