ಅರಸೀಕೆರೆ: ಹೋಬಳಿಯ ಕ್ಯಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಾಸ್ತಾನು ಕೊಠಡಿಗೆ ಇತ್ತೀಚೆಗೆ ಆಕಸ್ಮಿಕ ಬೆಂಕಿ ತಗುಲಿ ಮಕ್ಕಳ ಪಡಿತರ, ಪೀಠೋಪಕರಣ ಭಸ್ಮವಾಗಿದೆ.
ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ದಾಸ್ತಾನು ಕೊಠಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಶಾಲಾ ನೆರೆಹೊರೆಯವರು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.
‘ದಾಸ್ತಾನು ಕೊಠಡಿಯಲ್ಲಿ ಮಕ್ಕಳ ಬಿಸಿಯೂಟದ ಅಕ್ಕಿ, ಗೋಧಿ, ಹಾಲಿನಪುಡಿ ಇದ್ದವು. ಶೂ, ಸಾಕ್ಸ್, ಶುಚಿ ಪ್ಯಾಡ್, ನಲಿ–ಕಲಿ ಟೇಬಲ್ಸ್, ಪ್ಲಾಸ್ಟಿಕ್ ಕುರ್ಚಿ, ವಿಜ್ಞಾನ ಬೋಧಕ ಉಪಕರಣಗಳು, ಸಮಾಜ ಕಲಿಕೋಪಕರಣಗಳು, ಟೇಬಲ್ ಫ್ಯಾನ್, ಚೇರ್, ಮೋಟರ್ ಹಾಗೂ ನೀರಿನ ಪೈಪ್ ಗಳು ಬೆಂಕಿಗೆ ಆಹುತಿಯಾಗಿದೆ.
ಬೆಂಕಿಗೆ ₹1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ಶಾಲಾ ಮುಖ್ಯಶಿಕ್ಷಕ ಪುರಂದರ ಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಅರಸೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.