ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಇಂದಿರಾ ಕ್ಯಾಂಟೀನ್‌ ನಿರ್ವಾಹಕರಿಗೆ ತರಾಟೆ

ಉಚಿತವಾಗಿ ಉಪಾಹಾರ, ಊಟ ವಿತರಣೆಗೆ ಕಟ್ಟುನಿಟ್ಟಿನ ಸೂಚನೆ
Last Updated 13 ಮೇ 2021, 7:17 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಣ ಪಡೆದು ಉಪಾಹಾರ, ಊಟ ಕೊಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರಿಂದ ಗುರುವಾರ ನಗರಸಭೆಯ ಅಧಿಕಾರಿಗಳು ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಅದರ ನಿರ್ವಾಹಕರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಉಚಿತವಾಗಿ ಒದಗಿಸಲು ಕ್ರಮ ಕೈಗೊಂಡರು.

ನಗರಸಭೆಯ ಪರಿಸರ ಎಂಜಿನಿಯರ್‌ ಆರತಿ, ಆರೋಗ್ಯ ಇನ್‌ಸ್ಪೆಕ್ಟರ್‌ ವೆಂಕಟೇಶ್‌ ಅವರು ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದರು. ‘ಹಣ ಪಡೆದು ಊಟ ಕೊಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಯಾರೂ ಆ ರೀತಿ ಮಾಡಬಾರದು. ಯಾರೇ ಬರಲಿ, ಉಚಿತ ಉಪಾಹಾರ, ಊಟ ಕೊಡಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಅಲ್ಲಿನ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

‘ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರ ಪೂರೈಸಬೇಕು. ಎಷ್ಟೇ ಜನ ಬಂದರೂ ಕೊಡಬೇಕು. ಯಾವುದೇ ಸಬೂಬು ಹೇಳಬಾರದು. ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡಬೇಕು. ನಿಯಮ ಮೀರಿದರೆ ಟೆಂಡರ್‌ ರದ್ದುಪಡಿಸಲಾಗುವುದು’ ಎಂದು ಆರತಿ ಎಚ್ಚರಿಸಿದರು.

‘ಕೋವಿಡ್‌–19 ನಿಷೇಧಾಜ್ಞೆ ಮುಗಿಯುವವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರ ಕೊಡಬೇಕು ಎಂದು ಸರ್ಕಾರ ನಿರ್ದೇಶನ ಕೊಟ್ಟಿದೆ. ಅದನ್ನು ಎಲ್ಲರೂ ಪಾಲಿಸಬೇಕು. ಕೂಲಿ ಕಾರ್ಮಿಕರು, ವಲಸಿಗರು ಹಾಗೂ ದುರ್ಬಲ ವರ್ಗದವರು ಹಸಿವಿನಿಂದ ಬಳಲಬಾರದು ಎಂಬ ದೃಷ್ಟಿಯಿಂದ ಸರ್ಕಾರ ಈ ಕ್ರಮ ಜರುಗಿಸಿದೆ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಸೂಚಿಸಿದರು.

ಸರ್ಕಾರಿ ಆಸ್ಪತ್ರೆ ಹಾಗೂ ಎಪಿಎಂಸಿಯಲ್ಲಿನ ಇಂದಿರಾ ಕ್ಯಾಂಟೀನ್‌ ಸಮಯಕ್ಕೆ ಸರಿಯಾಗಿ ಬಾಗಿಲು ತೆರೆದು, ಉಪಹಾರ ಕೊಟ್ಟರೆ, ನಗರಸಭೆ ಕಚೇರಿಗೆ ಹೊಂದಿಕೊಂಡಂತೆ ಇರುವ ಕ್ಯಾಂಟೀನ್‌ ಗುರುವಾರ ತಡವಾಗಿ ಬಾಗಿಲು ತೆರೆಯಿತು. ಅನೇಕ ಜನ ಬೆಳಿಗ್ಗೆ 7 ಗಂಟೆಗೆ ಕ್ಯಾಂಟೀನ್‌ ಬಾಗಿಲು ತೆರೆಯುವುದನ್ನು ಕಾದು ಕುಳಿತಿದ್ದರು. ಬುಧವಾರ ಕ್ಯಾಂಟೀನ್‌ಗಳಲ್ಲಿ ಹಣ ಪಡೆದು, ಆಹಾರ ಕೊಟ್ಟಿದ್ದರಿಂದ ಸಾರ್ವಜನಿಕರು ನಗರಸಭೆಗೆ ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT