ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊ.ರು.ಚ, ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ ಗೌರವ

ಏ.12 ರಂದು ಪ್ರದಾನ
Last Updated 7 ಏಪ್ರಿಲ್ 2022, 19:44 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರೀ ಹಾಗೂ ಭಾಷ್ಯಂ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

‘ಜಿ. ಕೃಷ್ಣಪ್ಪ, ಮಲೆಯೂರು ಗುರುಸ್ವಾಮಿ, ಡಾ. ಎಸ್.ಸಿ. ಶರ್ಮಾ, ಗುರುಲಿಂಗ ಕಾಪಸೆ, ಡಾ. ಶಿವಾನಂದ ನಾಯಕ, ರಮೇಶ ಎಂ.ಕೆ., ನಾಸೀರ್ ಅಹಮ್ಮದ್ ಸೇರಿದಂತೆ ಒಟ್ಟು ಹತ್ತು ಜನರ ಹೆಸರನ್ನು ನಾಡೋಜಕ್ಕೆ ಶಿಫಾರಸು ಮಾಡಲಾಗಿತ್ತು. ಅಂತಿಮವಾಗಿ ರಾಜ್ಯಪಾಲರು ಮೂವರ ಹೆಸರಿಗೆ ಅಂಕಿತ ಹಾಕಿದ್ದಾರೆ’ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ಚಿಕ್ಕಮಗಳೂರು ಜಿಲ್ಲೆ ಗೊಂಡೇದಹಳ್ಳಿಯ ಗೊ.ರು.ಚ. ಅವರು ಜಾನಪದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸ ಮಾಡಿದ್ದರೆ, ಮಂಡ್ಯ ಜಿಲ್ಲೆ ಮೇಲುಕೋಟೆಯ ಭಾಷ್ಯಂ ಸ್ವಾಮಿ ಅವರು ಸಂಸ್ಕೃತ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಮೈಸೂರಿನ ವೆಂಕಟಾಚಲಶಾಸ್ತ್ರೀ ಅವರು ಹಳಗನ್ನಡ ಮತ್ತು ಶಾಸ್ತ್ರ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ’ ಎಂದು ವಿವರಿಸಿದರು.

‘ಏ.12ರಂದು ಸಂಜೆ 5.30ಕ್ಕೆ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ‘ನುಡಿಹಬ್ಬ’ದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮೂವರಿಗೆ ನಾಡೋಜ ಪ್ರದಾನ ಮಾಡುವರು. ಚಿತ್ರದುರ್ಗದ ಮುರುಘಾ ಶರಣರು, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಕೆಂಪೇಗೌಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಬಿ.ಎಸ್. ಪುಟ್ಟಸ್ವಾಮಿ ಹಾಗೂ ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗ್ಡೆ ಅವರಿಗೆ ಡಿ.ಲಿಟ್, 1,387 ವಿದ್ಯಾರ್ಥಿಗಳಿಗೆ ವಿವಿಧ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಪ್ರದಾನ ಮಾಡುವರು. ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ ಘಟಿಕೋತ್ಸವ ಭಾಷಣ ಮಾಡುವರು’ ಎಂದರು.

ವಿಶ್ವವಿದ್ಯಾಲಯದ ಭ್ರಷ್ಟಾಚಾರದ ಆರೋಪ, ಸಿಬ್ಬಂದಿ ಆಡಳಿತದ ನಡುವಿನ ನಿರಂತರ ಸಂಘರ್ಷದ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಕುಲಪತಿ ನಿರಾಕರಿಸಿದರು. ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT