ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಅರಸರ ಕಾಲದ ಅಣೆಕಟ್ಟೆ, ಕಾಲುವೆಗಳ ಆಧುನೀಕರಣ: ಗೋವಿಂದ ಕಾರಜೋಳ

Last Updated 17 ಆಗಸ್ಟ್ 2021, 9:08 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ):‘ವಿಜಯನಗರ ಅರಸರ ಕಾಲದಲ್ಲಿ ನೀರಾವರಿಗಾಗಿ ನಿರ್ಮಿಸಿರುವ ಸುಮಾರು 500 ವರ್ಷಗಳ ಹಿಂದಿನ ಅನ್‍ಲೈನ್ಡ್ 16 ಕಾಲುವೆಗಳು ಮತ್ತು 11 ಅಣೆಕಟ್ಟೆಗಳಿವೆ. ಅವುಗಳಲ್ಲಿ ಸದ್ಯ ಪ್ಯಾಕೇಜ್-1ರಡಿ ಕಾಲುವೆ ಮತ್ತು ಅಣೆಕಟ್ಟೆ ಆಧುನೀಕರಣಗೊಳಿಸಲು ₹371 ಕೋಟಿ ವೆಚ್ಚ ಮಾಡಲಾಗುತ್ತಿದೆ. 8 ಅಣೆಕಟ್ಟೆ, 1 ಕಾಲುವೆ ಆಧುನೀಕರಣ ಕೆಲಸ ಕೈಗೆತ್ತಿಕೊಳ್ಳಲು ₹139 ಕೋಟಿಗೆ ಸದ್ಯದಲ್ಲೇ ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು’ ಎಂದು ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.

ಆ. 21ಕ್ಕೆ ಆಲಮಟ್ಟಿ ಜಲಾಶಯಕ್ಕೆ ಸಿ.ಎಂ. ಬಾಗಿನ
‘ಆ.21ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸುವರು. ಬಳಿಕ ನೀರಾವರಿ ಯೋಜನೆಗಳ ಕುರಿತು ಸಭೆ ತೆಗೆದುಕೊಳ್ಳುವರು. ಈ ವರ್ಷ ಎಲ್ಲ ಜಲಾಶಯಗಳು ಆಗಸ್ಟ್ ತಿಂಗಳಲ್ಲಿ ತುಂಬಿರುವುದು ಇತಿಹಾಸದಲ್ಲಿಯೇ ಮೊದಲು. ಪ್ರತಿವರ್ಷವೂ ಇದೇ ರೀತಿ ಉತ್ತಮವಾಗಿ ಮಳೆಯಾಗಿ, ಸಮೃದ್ಧವಾಗಲಿ’ ಎಂದು ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.

ತೆಲಂಗಾಣ, ಆಂಧ್ರ ಒಪ್ಪಿಗೆಯೊಂದಿಗೆ,ನವಲಿಯಲ್ಲಿ ಸಮಾನಾಂತರ ಅಣೆಕಟ್ಟೆ
‘ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಒಪ್ಪಿಗೆಯೊಂದಿಗೆ, ಪರಸ್ಪರ ಸಹಕಾರದಿಂದ ಕೊಪ್ಪಳದ ಕನಕಗಿರಿ ತಾಲ್ಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.
ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ‘ಸಮಾನಾಂತರ ಜಲಾಶಯಕ್ಕೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸುವ ಕೆಲಸ ಪ್ರಗತಿಯಲ್ಲಿದೆ’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮೂರು ರಾಜ್ಯಗಳ ಸಭೆ ಕರೆದು ಸಮ್ಮತಿ ಪಡೆದುಕೊಳ್ಳಲಾಗುವುದು. ತುಂಗಭದ್ರಾ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 132.47 ಟಿಎಂಸಿ ಅಡಿ ಇದೆ. ಹೂಳು ತುಂಬಿರುವುದರಿಂದ ಅದರ ನೀರಿನ ಸಂಗ್ರಹ ಸಾಮರ್ಥ್ಯ 100.855 ಟಿಎಂಸಿಗೆ ಕುಸಿದಿದೆ. 31.615 ಟಿಎಂಸಿ ಅಡಿ ನೀರಿನ ಕೊರತೆಯಾಗಿದೆ. ಇದನ್ನು ಸರಿದೂಗಿಸಲು ನವಲಿ ಬಳಿ ಸಮತೋಲನ ಜಲಾಶಯ ನಿರ್ಮಿಸಲಾಗುವುದು’ ಎಂದು ಹೇಳಿದರು.

‘ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಐದು ವರ್ಷ ಜಲಸಂಪನ್ಮೂಲ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ನೀರಾವರಿ ಬಗ್ಗೆ ಅವರಿಗೆ ಬಹಳ ಅನುಭವ ಇದೆ. ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಅವರ ಅನುಭವ ಸಹಾಯವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 16 ಟಿಎಂಸಿ ಅಡಿ ನೀರಿನ ಹಂಚಿಕೆಯಾಗಿದೆ. ಯೋಜನೆ ಅಡಿ ಬಲಭಾಗದಲ್ಲಿ ಒಟ್ಟು 35,791 ಎಕರೆಗೆ ಹನಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಈ ಯೋಜನೆಯ ಎಡಭಾಗದಲ್ಲಿ ಒಟ್ಟು 2,16,467 ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ಈ ವಲಯದ ವ್ಯಾಪ್ತಿಯಲ್ಲಿ ಒಟ್ಟು 8 ಏತ ನೀರವಾರಿ ಯೋಜನೆಗಳಿಂದ 122 ಕೆರೆಗಳು ಮತ್ತು 2 ಜಲಾಶಯ ತುಂಬಿಸಲು ₹1,800 ಕೋಟಿ ವೆಚ್ಚ ಮಾಡಲಾಗುತ್ತಿದೆ. 1,72,210 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಕುಡಿಯುವ ನೀರು, ಅಂತರ್ಜಲ ಸಮಸ್ಯೆ ನೀಗಲಿದೆ’ ಎಂದರು.

ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಸಂಸದರಾದ ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಶಾಸಕರಾದ ಬಸವರಾಜ ದಡೇಸೂಗುರ, ಪರಣ್ಣ ಮನಳ್ಳಿ, ವೆಂಕಟರಾವ ನಾಡಗೌಡ, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ, ಬಳ್ಳಾರಿ–ವಿಜಯನಗರ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ.ಗುಂಗೆ, ಮುಖ್ಯ ಎಂಜಿನಿಯರ್‌ ಕೃಷ್ಣಾಜಿ ಚವ್ಹಾಣ್‌, ತುಂಗಭದ್ರಾ ಯೋಜನಾ ವೃತ್ತದ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಎಲ್.ಬಸವರಾಜ್, ತುಂಗಭದ್ರಾ ನಾಲಾ ನಿರ್ಮಾಣ ವೃತ್ತದ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಪಿ.ಬಿ.ಪ್ರಕಾಶ್, ಕಾರ್ಯಪಾಲಕ ಎಂಜಿನಿಯರ್‌ ಕೆ.ಬಿ.ಎಚ್.ಶಿವಶಂಕರ್ ಇದ್ದರು.

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT