ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ ಮೊದಲ ವಾರದಲ್ಲೇ ಹಂಪಿ ಉತ್ಸವ: ಸಚಿವ ಜಮೀರ್ ಅಹ್ಮದ್‌

Published 15 ಆಗಸ್ಟ್ 2023, 8:25 IST
Last Updated 15 ಆಗಸ್ಟ್ 2023, 8:25 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಈ ಬಾರಿ ಹಂಪಿ ಉತ್ಸವವನ್ನು ನವೆಂಬರ್‌ ಮೊದಲ ವಾರದಲ್ಲೇ ನಡೆಸಬೇಕೆಂಬ ತೀರ್ಮಾನ ಮಾಡಲಾಗಿದೆ. ಮುಖ್ಯಮಂತ್ರಿ ಅವರ ಸಮಯ ನೋಡಿಕೊಂಡು ಉತ್ಸವದ ದಿನಾಂಕ ಪ್ರಕಟಿಸಲಾಗುವುದು ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಹೇಳಿದರು.

ಇಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನವೆಂಬರ್‌ನಲ್ಲೇ ನಡೆಯುತ್ತಿದ್ದ ಹಂಪಿ ಉತ್ಸವ ಬಳಿಕ ಜನವರಿಯಲ್ಲಿ ನಡೆಯಲಾರಂಭಿಸಿತ್ತು. ಈ ವರ್ಷದಿಂದ ಮತ್ತೆ ನವೆಂಬರ್‌ನಲ್ಲೇ ಮೂರು ದಿನ ಉತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದರು.

ಹಂಪಿಯಲ್ಲಿ ಕಲಾಗ್ರಾಮ ನಿರ್ಮಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ಪ್ನಶ್ನೆಯೊಂದಕ್ಕೆ ಉತ್ತರಿಸಿದರು.

20 ದಿನದೊಳಗೆ ನಿರ್ಧಾರ: ಹಂಪಿ ಶುಗರ್ಸ್‌ ಕಾರ್ಖಾನೆಯನ್ನು ಹೊಸಪೇಟೆ ನಗರದೊಳಗಿನ ಸರ್ಕಾರಿ ಜಮೀನಿನನಲ್ಲಿ ಸ್ಥಾಪಿಸುವ ಪರ ಮತ್ತು ವಿರೋಧ ಅಭಿಪ್ರಾಯಗಳಿವೆ. ಸಕ್ಕರೆ ಕಾರ್ಖಾನೆಯೊಂದು ಈ ಭಾಗಕ್ಕೆ ಬೇಕೇ ಬೇಕು. 15ರಿಂದ 20 ದಿನಗಳ ಒಳಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವ ಜಮೀರ್ ಹೇಳಿದರು.

‘ತುಂಗಭದ್ರಾ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗುವುದು ಪ್ರತಿ ವರ್ಷವೂ ಆಗುವ ವಿದ್ಯಮಾನ ಎಂದು ಕೇಳಿ ತಿಳಿದುಕೊಂಡಿದ್ದೇನೆ. ನದಿಗೆ ಮಾಲಿನ್ಯ ಹರಿಯಬಿಡುತ್ತಾರೆ ಎಂಬ ಆರೋಪ ಇದ್ದರೆ ಅದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು‘ ಎಂದರು.

ತಾಲ್ಲೂಕು ಕೆಡಿಪಿ ಸಭೆ: ಹೊಸ ಜಿಲ್ಲೆಯಲ್ಲಿ ಸಮಸ್ಯೆಗಳೂ ಅಧಿಕ ಇರುತ್ತದೆ, ಅದನ್ನು ತಿಳಿಯುವ ಸಲುವಾಗಿಯೇ ತಾಲ್ಲೂಕು ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಲಾಗುತ್ತಿದೆ. ಇದಕ್ಕೆ ಎಲ್ಲಾ ಶಾಸಕರೂ ಸಹಕಾರ ನೀಡುತ್ತಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.

ಜಿಲ್ಲೆಯಲ್ಲಿ ಶಾಲೆಗಳ ಸ್ಥಿತಿ ಬಹಳ ಶೋಚನೀಯವಾಗಿದೆ. ಅದನ್ನು ಮೊದಲಾಗಿ ಸರಿಪಡಿಸಬೇಕಾಗಿದೆ. ಶಿಕ್ಷಣ, ಕುಡಿಯುವ ನೀರು, ಆರೋಗ್ಯ ವಿಚಾರಗಳನ್ನು ತಾವು ಆದ್ಯತೆಯ ವಿಷಯವಾಗಿ ಪರಿಗಣಿಸಿರುವುದಾಗಿ ಅವರು ಹೇಳಿದರು.

ಎಲ್ಲಾ ಪಕ್ಷದಲ್ಲೂ ಭಿನ್ನಮತ ಇದ್ದದ್ದೇ: ಭೀಮಾನಾಯ್ಕ್‌ ಅವರು ತಮ್ಮ ಸೋಲಿಗೆ ಇವರೇ ಕಾರಣ ಎಂದು ಬಹಿರಂಗವಾಗಿಯೇ ಹೇಳಿದ್ದರ ಬಗ್ಗೆ ಪಕ್ಷ ಕ್ರಮ ತೆಗೆದುಕೊಂಡಿದೆಯೇ ಎಂದು ಕೇಳಿದಾಗ, ಇದರ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದರು. ‘ಎಲ್ಲಾ ಪಕ್ಷಗಳಲ್ಲೂ ಭಿನ್ನಮತ ಇದೆ. ಯಾವುದೇ ಜಿಲ್ಲೆಗೆ ಹೋದರೂ ಅಂತಹ ಭಿನ್ನಮತ ಇದ್ದೇ ಇದೆ. ಈ ಜಿಲ್ಲೆಯಲ್ಲೂ ಅದು ಇದೆ. ಅದನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ‘ ಎಂದು ಸಚಿವರು ಹೇಳಿದರು.

ಅಂಗನವಾಡಿಯ ಸೂಪರ್‌ವೈಸರ್‌ಗಳು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಹಫ್ತಾ ಕೇಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಸಚಿವರ ಗಮನ ಸೆಳೆದಾಗ, ಈ ಬಗ್ಗೆ ವಿಚಾರಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಖಾಸಗಿ ಆಸ್ಪತ್ರೆಗಳ ಸುಲಿಗೆ ಹೊಸಪೇಟೆಯಲ್ಲೂ ಇದೆ. ಹಣ ಪಡೆದರೂ ಸೂಕ್ತ ಚಿಕಿತ್ಸೆ ನೀಡದೆ ಹೋದರೆ ಅದು ಅತ್ಯಂತ ಅಕ್ಷಮ್ಯ ಅಪರಾಧವಾಗುತ್ತದೆ. ಈಚೆಗೆ 23 ವರ್ಷದ ಯುವಕನ ಸಾವು ಹೊಸಪೇಟೆಯ ಆಸ್ಪತ್ರೆಯಲ್ಲಿ ಸಂಭವಿಸಿದೆ. ಮರಣೋತ್ತರ ಪರೀಕ್ಷೆ ಬರಬೇಕಿದೆ. ಆಸ್ಪತ್ರೆಯದ್ದೇ ತಪ್ಪು ಎಂದಾದರೆ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ, ಆಸ್ಪತ್ರೆಯ ಪರವಾನಗಿ ರದ್ದುಪಡಿಸುವುದು ಸಹ ಸಾಧ್ಯವಿದೆ ಎಂದು ಸಚಿವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌, ಜಿಲ್ಲಾ ಪೊಲೀಸ್‌ ವರಿಷ್ಠ ಶ್ರೀಹರಿಬಾಬು ಬಿ.ಎಲ್‌. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸದಾಶಿವ ಪ್ರಭು ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ಜಿ. ಉಪವಿಭಾಗಾಧಿಕಾರಿ ಅಕ್ರಮ್ ಷಾ ಇದ್ದರು.

ವಿಶೇಷ ಚೇತನ ಕಲಾವಿದೆಗೆ ₹ 50 ಸಾವಿರ

ಕೂಡ್ಲಿಗಿಯ ವಿಶೇಷ ಚೇತನ ಚಿತ್ರ ಕಲಾವಿದೆ ಲಕ್ಷ್ಮೀದೇವಿ ಅವರು ಬುದ್ಧಿಮಾಂದ್ಯರ ಶಾಲೆಯೊಂದನ್ನು ನಡೆಸುತ್ತಿದ್ದು, ಕಟ್ಟಡಕ್ಕೆ ಬಾಡಿಗೆ ಪಾವತಿಸಲೂ ದುಡ್ಡಿಲ್ಲ ಎಂದು ಅವರ ಸಂಬಂಧಿಕರು ಸಚಿವರಲ್ಲಿ ಅಳಲು ತೋಡಿಕೊಂಡರು. ತಕ್ಷಣ ಮನವಿಗೆ ಸ್ಪಂದಿಸಿ ಅವರು ವೈಯಕ್ತಿಕವಾಗಿ ₹ 50 ಸಾವಿರ ನಗದನ್ನು ಸ್ಥಳದಲ್ಲೇ ನೀಡಿದರು. ಮುಂದೆ ಸ್ಥಳಕ್ಕೆ ಭೇಟಿ ನೀಡಿ ಯುವತಿಗೆ ಯಾವ ರೀತಿಯಲ್ಲಿ ನೆರವಾಗಬಹುದು ಎಂಬ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು. ಹುಟ್ಟಿನಿಂದಲೇಎರಡೂ ಕೈಗಳಿಲ್ಲದ ಲಕ್ಷ್ಮೀದೇವಿ ಅವರು ಕಾಲುಗಳಲ್ಲೇ ಸುಂದರ ಚಿತ್ರಗಳನ್ನು ರಚಿಸುತ್ತಾರೆ ಹಾಗೂ ಬಿ.ಇಡಿ ವ್ಯಾಸಂಗ ಮಾಡಿರುವ ಅವರು ತಮ್ಮ ಊರಿನಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಚಿವರು ಇದಕ್ಕೆ ಮೊದಲು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನಡೆಸುತ್ತಿದ್ದ ವೇಳೆ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದ ಕುಶ ನಾಯ್ಕ್‌ ಅವರಿಗೆ ವೈಯಕ್ತಿಕವಾಗಿ ₹ 1 ಲಕ್ಷ ನಗದು ನೀಡಿ ಪ್ರೋತ್ಸಾಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT