ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ತುಂಬಿದ ಹಳ್ಳದಲ್ಲೇ ಶವ ಹೊತ್ತೊಯ್ದ ಗ್ರಾಮಸ್ಥರು

Last Updated 1 ಸೆಪ್ಟೆಂಬರ್ 2022, 14:14 IST
ಅಕ್ಷರ ಗಾತ್ರ

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಶವಸಂಸ್ಕಾರಕ್ಕೆ ವ್ಯಕ್ತಿಯೊಬ್ಬರ ಶವವನ್ನು ತುಂಬಿದ ಹಳ್ಳದಲ್ಲೇ ಗ್ರಾಮಸ್ಥರು ಕಷ್ಟಪಟ್ಟು ಹೊತ್ತುಕೊಂಡು ಹೋದ ಘಟನೆ ತಾಲ್ಲೂಕಿನ ‘ಶೃಂಗಾರ ತೋಟ’ ಗ್ರಾಮದಲ್ಲಿ ಗುರುವಾರ ನಡೆದಿದೆ.

345 ಮನೆಗಳನ್ನು ಹೊಂದಿರುವ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಗ್ರಾಮದಲ್ಲಿನ ಒಂದೇ ರುದ್ರಭೂಮಿಗೆ ಅವರ ಶವ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಬುಧವಾರ ಸಂಜೆ ಗ್ರಾಮದ ಮೂಕವ್ವನವರ ವಿರೂಪಾಕ್ಷಪ್ಪ (56) ಎಂಬುವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಗ್ರಾಮದಿಂದ ಅರ್ಧ ಕಿ.ಮೀ ದೂರದ ಸ್ಮಶಾನಕ್ಕೆ ಶವ ಕೊಂಡೊಯ್ಯುತ್ತಿದ್ದರು. ಆದರೆ, ಮಳೆಯಿಂದಾಗಿ ಮಾರ್ಗ ಮಧ್ಯದ ಹಳ್ಳ ತುಂಬಿ ಹರಿಯುತ್ತಿದೆ. ಸೊಂಟದವರೆಗೆ ನೀರಿರುವ ಹಳ್ಳದಲ್ಲೇ ಮೃತರ ಸಂಬಂಧಿಕರು, ಗ್ರಾಮಸ್ಥರು ಶವವನ್ನು ಹೊತ್ತುಕೊಂಡು ಹರಸಾಹಸ ಪಟ್ಟು ತೆರಳಿ, ಅಂತ್ಯಸಂಸ್ಕಾರ ಮಾಡಿದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ಮಳೆಯಾದಾಗಲೆಲ್ಲಾ ಹಳ್ಳ ತುಂಬಿ ಹರಿಯುತ್ತದೆ. ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ತೀವ್ರ ಪರದಾಟ ನಡೆಸಬೇಕಾಗುತ್ತದೆ. ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ದೂರದಲ್ಲಿದ್ದರೂ ಯಾವುದೇ ಸೌಕರ್ಯಗಳಿಲ್ಲ. ರುದ್ರಭೂಮಿಗೆ ಹೋಗಿ ಬರಲು ಉತ್ತಮ ರಸ್ತೆಯಿಲ್ಲ. ರುದ್ರಭೂಮಿಗೆ ಮತ್ತೊಂದು ಕಡೆ ಜಾಗ ಕೊಟ್ಟರೆ ಈ ಸಮಸ್ಯೆ ತಲೆದೋರುವುದಿಲ್ಲ’ ಎನ್ನುತ್ತಾರೆ ಗ್ರಾಮಸ್ಥರಾದ ಬಸವರಾಜ, ಅಜೀಜ್ ಸಾಬ್, ನಿಂಗರಾಜ್, ತಿಮ್ಮಪ್ಪ.

‘ಶೀಘ್ರ ಶೃಂಗಾರ ತೋಟ ಗ್ರಾಮಕ್ಕೆ ತೆರಳಿ, ಸ್ಥಳ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಹಶೀಲ್ದಾರ್‌ ಶಿವಕುಮಾರ ಬಿರಾದಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT