ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಅಂಬೇಡ್ಕರ್ ಕಂಚಿನೆ ಪ್ರತಿಮೆ ಅನಾವರಣ

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ವೈಯಕ್ತಿಕ ದೇಣಿಗೆ ₹1 ಕೋಟಿ
Last Updated 24 ಮಾರ್ಚ್ 2023, 17:36 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ವೈಯಕ್ತಿಕ ದೇಣಿಗೆ ₹1 ಕೋಟಿ ವೆಚ್ಚದಲ್ಲಿ ನಗರದ ಜೈಭೀಮ್ ವೃತ್ತದಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ನೂತನ ಕಂಚಿನ ಪ್ರತಿಮೆ ಹಾಗೂ ವೃತ್ತದ ಉದ್ಘಾಟನಾ ಸಮಾರಂಭ ಶುಕ್ರವಾರ ರಾತ್ರಿ ಜರುಗಿತು.

ಸಂಸತ್ತಿನ ಮಾದರಿಯಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಅದರ ಮೇಲೆ 12.6 ಅಡಿ ಎತ್ತರದ ಕಂಚಿನ ಪ್ರತಿಮೆ‌ ಪ್ರತಿಷ್ಠಾಪಿಸಲಾಗಿದೆ. ಜೈ ಭೀಮ್‌, ಜೈ ಭೀಮ್‌ ಘೋಷಣೆಗಳ ನಡುವೆ ವರ್ಣರಂಜಿತ ಸಮಾರಂಭದಲ್ಲಿ ಪ್ರತಿಮೆಯನ್ನು ಸಚಿವ ಆನಂದ್‌ ಸಿಂಗ್‌ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಆನಂದ್‌ ಸಿಂಗ್‌, ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಅಡಿ ಈ ದೇಶ ನಡೆಯುತ್ತಿದೆ. ಒಂದುವೇಳೆ ಅವರು ರಚಿಸಿದ ಸಂವಿಧಾನ ಇರದಿದ್ದಲ್ಲಿ ದೇಶದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಹಾಗಾಗಿ ನಾವೆಲ್ಲರೂ ಸದಾ ಅವರನ್ನು ಸ್ಮರಿಸಬೇಕು ಎಂದರು.

ಅಂಬೇಡ್ಕರ್‌ ಅವರು ಶಿಕ್ಷಣ, ಸಂಘಟನೆ ಹಾಗೂ ಹೋರಾಟದಂತಹ ಮೂರು ಪ್ರಮುಖ ಸೂತ್ರಗಳನ್ನು ಕೊಟ್ಟಿದ್ದಾರೆ. ಅವುಗಳ ಮೂಲಕ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಎಚ್‌. ಆಂಜನೇಯ ಮಾತನಾಡಿ, ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣದ ದಿನದಂದೇ ರಾಜ್ಯ ಸರ್ಕಾರ ಮಾದಿಗರಿಗೆ ಒಳಮೀಸಲಾತಿ ಕಲ್ಪಿಸಿರುವುದು ಸಂತಸ ತಂದಿದೆ. ಇದು ಮರೆಯಲಾರದ ಘಟನೆ ಎಂದು ಬಣ್ಣಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ಅವರು ಹಿರಿಯ ಪೌರಕಾರ್ಮಿಕರಾದ ಜೋಗುಳಪ್ಪ ಹಾಗೂ ತಿಮ್ಮಕ್ಕ ಅವರ ಪಾದಪೂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ತಿಮ್ಮಕ್ಕ ಭಾವುಕರಾಗಿ ಕಣ್ಣೀರು ಹಾಕಿದರು.

ಕೋಡಿಹಳ್ಳಿ ದೇಶಿಕೇಂದ್ರ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ, ಹಂಪಿ ಮಾತಂಗ ಭಾರತಿ ಸ್ವಾಮೀಜಿ, ವಿಜಯನಗರ ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಗೌರವ ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ಅಧ್ಯಕ್ಷ ಕೆ.ಪಿ. ಉಮಾಪತಿ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ಸದಸ್ಯರಾದ ಮಂಜುನಾಥ, ತಾರಿಹಳ್ಳಿ ಜಂಬುನಾಥ, ಕಿರಣ್‌, ಮುಖಂಡರಾದ ಎ. ಮಾನಯ್ಯ, ಶ್ರೀನಿವಾಸ್‌ಬಾಬು, ಜಗನ್, ಬಿ. ಮಾರೆಣ್ಣ, ಸಣ್ಣ ವೀರಪ್ಪ, ಸೆಲ್ವಂ, ಶೇಷಾದ್ರಿ, ಕೆ. ಲಕ್ಷ್ಮಣ್, ನಿಂಬಗಲ್‌ ರಾಮಕೃಷ್ಣ, ಓಬಳಾಪತಿ, ಕೃಷ್ಣ, ಬಿ.ಇ.‌ಶೇಕ್ಷಾವಲಿ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT