ಶನಿವಾರ, ಏಪ್ರಿಲ್ 17, 2021
31 °C

18 ರೈಲ್ವೆ ನೌಕರರಿಗೆ ಸೋಂಕು: ಹೊಸಪೇಟೆ ರೈಲು ನಿಲ್ದಾಣ ಕೊರೊನಾ ಹಾಟ್‌ಸ್ಪಾಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯನಗರ (ಹೊಸಪೇಟೆ): ‘ರೈಲ್ವೆ ಇಲಾಖೆಯ 18 ಜನ ನೌಕರರಿಗೆ ಮಂಗಳವಾರ ಕೋವಿಡ್‌–19 ದೃಢಪಟ್ಟಿರುವುದರಿಂದ ನಗರದ ರೈಲ್ವೆ ನಿಲ್ದಾಣವನ್ನು ಕೊರೊನಾ ಹಾಟ್‌ಸ್ಪಾಟ್‌ ಆಗಿ ಘೋಷಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.

‘ನಿತ್ಯ ಒಂದಂಕಿಗೆ ಸೀಮಿತವಾಗಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಮಂಗಳವಾರ ಏಕಾಏಕಿ ಏರಿಕೆಯಾಗಿದೆ.  ಬಿಹಾರ, ಉತ್ತರ ಪ್ರದೇಶದ ನೌಕರರನ್ನು ಮಾ. 2ರಂದು ನೈರುತ್ಯ ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ನಿಯೋಜಿಸಲಾಗಿದ್ದು, ಎಲ್ಲರೂ ನಗರದ ರೈಲು ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಆರಂಭದಲ್ಲಿ ಒಬ್ಬ ನೌಕರನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ 20 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಇತರೆ 18 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ’ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಎಲ್ಲ ನೌಕರರು ನಗರದ ಚಾಪಲಗಡ್ಡೆಯ ಪಿ.ಜಿ.ಯಲ್ಲಿ ವಾಸವಿದ್ದರು. 11 ಜನ ಹೋಂ ಕ್ವಾರಂಟೈನ್‌, ನಾಲ್ವರಿಗೆ ಬಳ್ಳಾರಿಯ ಟ್ರಾಮಾ ಕೇರ್‌ ಸೆಂಟರ್‌, ಇನ್ನುಳಿದ ಮೂವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ. ರೈಲು ನಿಲ್ದಾಣದ 200 ಜನ ಸಿಬ್ಬಂದಿಗೆ ಸುರಕ್ಷತೆ ಮಾರ್ಗಸೂಚಿ ಅನುಸರಿಸಲು ಸೂಚನೆ ಕೊಡಲಾಗಿದೆ’ ಎಂದು ತಿಳಿಸಿದರು.

‘ನೌಕರರು ವಾಸವಿದ್ದ ಚಾಪಲಗಡ್ಡೆಯ ಪಿ.ಜಿ. ಸಹ ಕಂಟೋನ್ಮೆಂಟ್‌ ವಲಯವಾಗಿ ಘೋಷಿಸಲಾಗಿದೆ. ರೈಲು ನಿಲ್ದಾಣ, ಪಿ.ಜಿ. ಪರಿಸರದಲ್ಲಿ ಸ್ಯಾನಿಟೈಜೇಶನ್‌ ಮಾಡಲಾಗಿದೆ. ನಗರಸಭೆ, ಪೊಲೀಸ್‌ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ಇನ್ನೂ ಕೊರೊನಾ ಸಂಪೂರ್ಣವಾಗಿ ತೊಲಗಿಲ್ಲ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು ಓಡಾಡಬೇಕು. ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಲು ಚಿಂತನೆ ನಡೆದಿದೆ. ಸ್ಯಾನಿಟೈಸರ್‌ ಉಪಯೋಗಿಸಿ, ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಯಾರೂ ಕೂಡ ಭೀತಿಗೆ ಒಳಗಾಗಬೇಕಿಲ್ಲ. ಸೋಂಕಿನ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ಎಚ್.ವಿಶ್ವನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಡಾ.ನಾಗೇಂದ್ರ ಇದ್ದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು