ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಉದ್ಯಾನ ಜಾಗದಲ್ಲಿ ನಿರ್ಮಿಸಿದ್ದ ಮನೆ ನೆಲಸಮ‌

Published 27 ಜೂನ್ 2023, 13:04 IST
Last Updated 27 ಜೂನ್ 2023, 13:04 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಬಳ್ಳಾರಿ ರಸ್ತೆಯ 24ನೇ ವಾರ್ಡ್‌ ಸಿರಿಸಿನಕಲ್ಲು ವಿಜಯನಗರ ಕಾಲೋನಿಯ ಸರ್ವೇ ನಂಬರ್ 304/ಬಿ1ರಲ್ಲಿ ಉದ್ಯಾನಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ ಮನೆಯೊಂದನ್ನು ನಗರಸಭೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಧ್ವಂಸಗೊಳಿಸಿದರು.

ಎರಡು ಜೆಸಿಬಿ, ಒಂದು ಟಿಪ್ಪರ್‌ ಸಹಿತ ಪೊಲೀಸ್‌ ಭದ್ರತೆಯಲ್ಲಿ  ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು, ಸಂಪೂರ್ಣವಾಗಿ ನಿರ್ಮಾಣಗೊಂಡಿದ್ದ ಮನೆಯಲ್ಲದೆ, ಇತರ ಎರಡು ನಿವೇಶನಗಳಲ್ಲಿ ನಿರ್ಮಿಸಲಾಗಿದ್ದ ಮನೆಗಳ ಪಂಚಾಂಗವನ್ನೂ ಧ್ವಂಸಗೊಳಿಸಿದರು. ಈ ಮೂಲಕ ಉದ್ಯಾನಕ್ಕೆ ಮೀಸಲಿಟ್ಟಿದ್ದ 4 ಸಾವಿರ ಚದರ ಅಡಿಗಳಷ್ಟು ಜಾಗದಲ್ಲಿ ನಿರ್ಮಿಸಲಾಗಿದ್ದ ಕಟ್ಟಡ ಮತ್ತು ಪಂಚಾಂಗವನ್ನು ತೆರವುಗೊಳಿಸಿದಂತಾಗಿದೆ.

ಉದ್ಯಾನ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದರ ಬಗ್ಗೆ ‘ಪ್ರಜಾವಾಣಿ‘ ಇದೇ 15ರಂದು ವರದಿ ಪ್ರಕಟಿಸಿತ್ತು. ಹತ್ತು ದಿನದಲ್ಲಿ ಕಟ್ಟಡ ಧ್ವಂಸಗೊಳಿಸುವುದಾಗಿ ಆಗ ಪೌರಾಯುಕ್ತ ಮನೋಹರ್‌ ನಾಗರಾಜ್‌ ಅವರು ತಿಳಿಸಿದ್ದರು. ಅದರಂತೆ ಮಂಗಳವಾರ ಬೆಳಿಗ್ಗೆಯೇ ಸ್ಥಳಕ್ಕೆ ಜೆಸಿಬಿಯೊಂದಿಗೆ ಬಂದ ಅಧಿಕಾರಿಗಳು ಒಂದು ಗಂಟೆಯೊಳಗೆ ಮನೆಯನ್ನು ನೆಲಸಮಗೊಳಿಸಿದರು.

ಕಾನೂನನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಅಧಿಕಾರಿಗಳು ಆದೇಶ ಪಾಲಿಸಿದ್ದಾರೆ. ಇದು ಕಳೆದ 4 ವರ್ಷಗಳಿಂದ ಸ್ಥಳೀಯ ನಿವಾಸಿಗಳು ನಡೆಸಿದ ಹೋರಾಟಕ್ಕೆ ಸಿಕ್ಕ.
ಜಯ ಎಂ. ಶಂಕ್ರಪ್ಪ, ಉಪಾಧ್ಯಕ್ಷರು, ವಿಜಯನಗರ ಕಾಲೋನಿ ವೆಲ್‌ಫೇರ್ ಅಸೋಸಿಯೇಶನ್

ಹಿನ್ನೆಲೆ

ಉದ್ಯಾನಕ್ಕೆಂದು ಮೀಸಲಿಟ್ಟ ಸ್ಥಳದಲ್ಲಿ ಕಟ್ಟಡ ನಿರ್ಮಿಸದಂತೆ ಸುಮಾರು ಆರು ವರ್ಷಗಳ ಹಿಂದೆಯೇ ಸ್ಥಳೀಯರು ಬಾಷಾ ಎಂಬುವವರಿಗೆ ಮನವಿ ಮಾಡಿದ್ದರು. ನಕ್ಷೆ ಸಹಿತ ದಾಖಲೆಗಳನ್ನೂ ತೋರಿಸಿದ್ದರು. ಆದರೆ ಕೆಲವರ ಪ್ರಭಾವದ ಶಕ್ತಿಯೊಂದಿಗೆ ಅವರು ಎಲ್ಲಾ ನಿಯಮ ಗಾಳಿಗೆ ತೂರಿ ಮನೆ ನಿರ್ಮಿಸಿದ್ದರು. ವಿಜಯನಗರ ಕಾಲೊನಿ ವೆಲ್‌ಫೇರ್ ಅಸೋಸಿಯೇಷನ್‌ನಿಂದ ತೀವ್ರ ಆಕ್ಷೇಪ ವ್ಯಕ್ತವಾದಾಗ ಈ ಅಸೋಸಿಯೇಷನ್‌ನ ಇಬ್ಬರು ಪದಾಧಿಕಾರಿಗಳಲ್ಲದೆ, ಸ್ವತಃ ಜಿಲ್ಲಾಧಿಕಾರಿ, ತಹಶೀಲ್ದಾರ್‌, ಪೌರಾಯುಕ್ತರು ಸಹಿತ ಒಟ್ಟು ಏಳು ಮಂದಿಯನ್ನು ಪಾರ್ಟಿ ಮಾಡಿ ವಿಚಾರಣಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಮೊದಲ ಹಂತವಾಗಿ ಈ ಕಟ್ಟಡವನ್ನು ತೆರವು ಮಾಡಲಾಗಿದೆ. ಈಗಾಗಲೇ ಗುರುತಿಸಲಾದ ಇತರ ಅಕ್ರಮ ಕಟ್ಟಡಗಳ ತೆರವು ಶೀಘ್ರ ನಡೆಯಲಿದೆ.
ಮನೋಹರ್‌ ನಾಗರಾಜ್‌, ಪೌರಾಯುಕ್ತರು, ಹೊಸಪೇಟೆ ನಗರಸಭೆ

ಉದ್ಯಾನಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಮನೆ ನಿರ್ಮಿಸಿದ್ದು ತಪ್ಪು ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಬಳಿಕ ಜಿಲ್ಲಾ ನ್ಯಾಯಾಲಯ ಹಾಗೂ ಧಾರವಾಡದ ಹೈಕೋರ್ಟ್‌ ಪೀಠ ಸಹ ಈ  ತೀರ್ಪನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್‌ ತೀರ್ಪು ಬಂದು (5–4–2023) ಎರಡು ತಿಂಗಳು ಕಳೆದರೂ ಯಾವುದೇ ಕ್ರಮವನ್ನು ನಗರಸಭೆ ಕೈಗೊಳ್ಳದ ಕಾರಣ ವೆಲ್‌ಫೇರ್‌ ಅಸೋಸಿಯೇಷನ್‌ನವರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದರು. ಜಿಲ್ಲಾಡಳಿತದಿಂದ ಬಂದ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಪೌರಾಯುಕ್ತರು ಇದೇ 13ರಂದು ನೋಟಿಸ್ ನೀಡಿ 3 ದಿನದೊಳಗೆ ಕಟ್ಟಡ ತೆರವು ಮಾಡಬೇಕು, ತಪ್ಪಿದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದ್ದರು.

ನೋಟಿಸ್ ಬಂದ ಎರಡೇ ದಿನದಲ್ಲಿ ಮನೆಯ ಕಿಟಿಕಿ, ಬಾಗಿಲು, ಇತರ ಬೆಲೆಬಾಳುವ ಪರಿಕರಗಳನ್ನು ಕಳಚಿ ಸಾಗಿಸಲಾಗಿತ್ತು. 

ಹೊಸಪೇಟೆಯ ಸಿರಿಸಿನಕಲ್ಲು ವಿಜಯನಗರ ಕಾಲೊನಿಯ ಉದ್ಯಾನ ಜಾಗದಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ಮಂಗಳವಾರ ಧ್ವಂಸಗೊಳಿಸಲಾಯಿತು  –ಪ್ರಜಾವಾಣಿ ಚಿತ್ರ/ಲವ
ಹೊಸಪೇಟೆಯ ಸಿರಿಸಿನಕಲ್ಲು ವಿಜಯನಗರ ಕಾಲೊನಿಯ ಉದ್ಯಾನ ಜಾಗದಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ಮಂಗಳವಾರ ಧ್ವಂಸಗೊಳಿಸಲಾಯಿತು  –ಪ್ರಜಾವಾಣಿ ಚಿತ್ರ/ಲವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT