ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಭವಿಷ್ಯಕ್ಕಾಗಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ ಸಚಿವ ಆನಂದ್‌ ಸಿಂಗ್‌?

Last Updated 5 ಏಪ್ರಿಲ್ 2023, 11:10 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರೂ ಆದ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಮಗ ಸಿದ್ದಾರ್ಥ ಸಿಂಗ್‌ ಅವರ ರಾಜಕೀಯ ಭವಿಷ್ಯಕ್ಕಾಗಿ ಈ ಸಲದ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ?

ಇಂತಹದೊಂದು ಗುಸುಗುಸು ಚರ್ಚೆ ವಿಜಯನಗರ ಕ್ಷೇತ್ರದಾದ್ಯಂತ ನಡೆಯುತ್ತಿದೆ. ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಮಗನನ್ನು ಕಣಕ್ಕಿಳಿಸಲು ಆನಂದ್‌ ಸಿಂಗ್‌ ಅವರು ತೀವ್ರ ಉತ್ಸುಕರಾಗಿದ್ದಾರೆ. ಮಗನಿಗಾಗಿ ಕ್ಷೇತ್ರ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ಗೊತ್ತಾಗಿದೆ.

2008, 2013, 2018 ಹಾಗೂ 2019ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಆನಂದ್‌ ಸಿಂಗ್‌ ಸತತ ನಾಲ್ಕು ಸಲ ಗೆಲುವು ಸಾಧಿಸಿದ್ದಾರೆ. ಇವರ ಅವಿರತ ಶ್ರಮದಿಂದ ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಹೊಸ ಜಿಲ್ಲೆ ಅಸ್ತಿತ್ವಕ್ಕೆ ಬಂದ ಎರಡು ವರ್ಷಗಳಲ್ಲಿ ಜಿಲ್ಲಾ ಕೇಂದ್ರ ಹೊಸಪೇಟೆ ಹಾಗೂ ಅವರು ಪ್ರತಿನಿಧಿಸುವ ವಿಜಯನಗರ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಅನೇಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಟ್ಟಿದ್ದಾರೆ.

ಹಿಂದಿನ ಉಪಚುನಾವಣೆಯಲ್ಲಿ ನೂತನ ವಿಜಯನಗರ ಜಿಲ್ಲೆ ರಚನೆ ಹಾಗೂ ಮಳೆಯಾಶ್ರಿತ ಪ್ರದೇಶಗಳಿಗೆ ಏತ ನೀರಾವರಿ ಯೋಜನೆ ಮೂಲಕ ನೀರುಣಿಸುವ ಕೆಲಸ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಅವುಗಳೆರಡೂ ಭರವಸೆಗಳನ್ನು ಈಡೇರಿಸಿದ್ದಾರೆ. ‘ನಾನು ನುಡಿದಂತೆ ನಡೆದಿದ್ದೇನೆ. ವಿಜಯನಗರ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡುವ ಉತ್ತಮರ ಕೈಗೆ ಈ ಕ್ಷೇತ್ರ ಕೊಡಬೇಕು. ಹೊಸ ಪ್ರಾಡಕ್ಟ್‌ ಸ್ವೀಕರಿಸುತ್ತೀರಾ?, ಏನು ಮಾಡುತ್ತೀರಿ ಎನ್ನುವುದು ನಿಮಗೆ ಬಿಟ್ಟದ್ದು’ ಎಂದು ಕಾರ್ಯಕ್ರಮವೊಂದರಲ್ಲಿ ಆನಂದ್‌ ಸಿಂಗ್‌ ಅವರು ಮಗನ ರಾಜಕೀಯ ಭವಿಷ್ಯ ಪ್ರವೇಶಿಸುವ ಮಾತುಗಳನ್ನು ಸೂಚ್ಯವಾಗಿ ಹೇಳಿದ್ದರು.

ಇದಕ್ಕೆ ಪೂರಕವೆಂಬಂತೆ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ಕಳೆದೊಂದು ವರ್ಷದಿಂದ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ, ಪ್ರಚಾರ ನಡೆಸುತ್ತಿದ್ದಾರೆ. ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕಬಡ್ಡಿ, ಕ್ರಿಕೆಟ್‌, ಕುಸ್ತಿ ಸೇರಿದಂತೆ ಹಲವು ಪಂದ್ಯಾವಳಿಗಳನ್ನು ಆಯೋಜಿಸಿದ್ದಾರೆ. ಗುಡಿ, ಗುಂಡಾರಗಳು, ಸಂಘ ಸಂಸ್ಥೆಗಳಿಗೆ ಅಪಾರ ದೇಣಿಗೆ ನೀಡಿದ್ದಾರೆ. ತಂದೆ ಭಾಗವಹಿಸಿದ ಮತ್ತು ಅವರು ಗೈರು ಹಾಜರಾದ ಕಾರ್ಯಕ್ರಮಗಳೆರಡರಲ್ಲಿ ಪಾಲ್ಗೊಂಡು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಉಪಚುನಾವಣೆ ಸೇರಿದಂತೆ ಒಟ್ಟು ನಾಲ್ಕು ಚುನಾವಣೆಗಳಲ್ಲಿ ಗೆದ್ದಿರುವ ಆನಂದ್‌ ಸಿಂಗ್‌ ಅವರಿಗೆ ಕ್ಷೇತ್ರದ ಮೇಲೆ ಬಿಗಿ ಹಿಡಿತವಿದೆ. ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇವೆರಡೂ ಅಂಶಗಳು ಪೂರಕವಾಗಿದ್ದು, ಇಂತಹ ಉತ್ತಮ ಸನ್ನಿವೇಶದಲ್ಲಿ ಮಗನನ್ನು ಚುನಾವಣೆಯಲ್ಲಿ ಕಣಕ್ಕಿಳಿಸಿದರೆ ಸೂಕ್ತ. ಮಗನ ರಾಜಕೀಯ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿ, ಕ್ಷೇತ್ರದ ಮೇಲೆ ಮುಂದಿನ ದಿನಗಳಲ್ಲೂ ಬಿಗಿ ಹಿಡಿತ ಸಾಧಿಸಬೇಕೆಂಬ ಲೆಕ್ಕಾಚಾರ ಇದೆ ಎನ್ನಲಾಗಿದೆ.

****

ಟಿಕೆಟ್‌ಗಾಗಿ ಸಿಂಗ್‌ ಕುಟುಂಬದ ನಡುವೆ ಸ್ಪರ್ಧೆ

ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆಯಲು ಸಿಂಗ್‌ ಕುಟುಂಬದವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಮೂಲಗಳ ಪ್ರಕಾರ, ಆನಂದ್‌ ಸಿಂಗ್‌ ಅವರು ಟಿಕೆಟ್‌ ಹಂಚಿಕೆಯಲ್ಲಿ ಮಗ ಸಿದ್ದಾರ್ಥ ಸಿಂಗ್‌ ಅವರಿಗೆ ಮೊದಲ ಆದ್ಯತೆಯಾಗಿ ಪರಿಗಣಿಸುವಂತೆ ಕೋರಿದ್ದಾರೆ. ಒಂದು ವೇಳೆ ಯಾವುದಾದರೂ ಕಾರಣ ನೀಡಿ ಮಗನಿಗೆ ಟಿಕೆಟ್‌ ನಿರಾಕರಿಸಿದರೆ ಅವರೇ ಕಣಕ್ಕಿಳಿಯುವ ಯೋಚನೆಯಲ್ಲಿದ್ದಾರೆ.

ಇನ್ನು, ಆನಂದ್‌ ಸಿಂಗ್‌ ಅವರ ಸಹೋದರಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ರಾಣಿ ಸಂಯುಕ್ತಾ ಅವರು ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ. ಒಟ್ಟಿನಲ್ಲಿ ಯಾರಿಗೆ ಟಿಕೆಟ್‌ ಘೋಷಿಸಿದರೂ ಸಿಂಗ್‌ ಮನೆತನದವರು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT