ಗುರುವಾರ , ಜೂನ್ 30, 2022
27 °C

ಕುವೆಂಪು ಅವರನ್ನು ನೀಚ ಎಂಬುವರದ್ದು ನಿಕೃಷ್ಟ ಮನಸ್ಸು: ಉರಿಲಿಂಗ ಪೆದ್ದಿ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ರಾಷ್ಟ್ರಕವಿ ಕುವೆಂಪು ಅವರನ್ನು ನೀಚ ಎಂದು ಕರೆಯುವವರು ನಿಕೃಷ್ಟ ಮನಸ್ಸು ಹೊಂದಿದವರು’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಶಾಖಮಠದ ಜ್ಞಾನಪ್ರಕಾಶ ಸ್ವಾಮೀಜಿ ಟೀಕಿಸಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದಿಂದ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್‌ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುವೆಂಪು ಬಗ್ಗೆ ಹಗುರವಾಗಿ ಮಾತನಾಡಿದವರಿಗೂ ಈ ಭೂಮಿಯಲ್ಲಿ ಜಾಗ ಇದೆಯಲ್ಲವೇ? ಸಮಾಜ ಪ್ರಜ್ಞಾವಸ್ಥೆಯಲ್ಲಿದ್ದರೆ ಈ ಸಂದರ್ಭ ಬಂದೊದಗುತ್ತಿರಲಿಲ್ಲ ಎಂದು ಹೇಳಿದರು.

ಭಾರತೀಯರ ರಕ್ತ, ನಾಗರೀಕತೆ ಹಾಗೂ ಇತಿಹಾಸ ದ್ರಾವಿಡರದ್ದು. ಅದರ ಬಗ್ಗೆ ಯಾರಿಗೂ ಸಂದೇಹವೇ ಬೇಡ. ಅದರಲ್ಲಿ ಅಸಮಾನತೆ ಇಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ದೇಶ ಛಿದ್ರ ಮಾಡುವುದು ಸಲ್ಲದು. ಇತಿಹಾಸ ತಾಯಿಯ ಗರ್ಭವಿದ್ದಂತೆ. ಅದನ್ನು ತಿರುಚುವುದು ತಾಯಿಯ ಗರ್ಭ ತಿರುಚಿ, ವಿರೂಪಗೊಳಿಸಿದಂತೆ ಎಂದರು.

ಮಸೀದಿಗಳ ಜಾಗದಲ್ಲಿ ದೇವಾಲಯಗಳಿದ್ದವು ಎಂದು ಹೇಳಲಾಗುತ್ತಿದೆ. ಆದರೆ, ಈ ದೇಶದಲ್ಲಿ 84 ಸಾವಿರ ಬೌದ್ಧ ವಿಹಾರಗಳನ್ನು ಕೆಡವಿ, ವಿರೂಪಗೊಳಿಸಿ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ನಾವು ಮನಸ್ಸು ಮಾಡಿದರೆ ಅದನ್ನು ಪ್ರಶ್ನಿಸಬಹುದು. ಆದರೆ, ನಾವು ಅಂತಹವರಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿರಿಗೇರಿ ಮೂಲಮಠದ ಭಕ್ತರು. ದ್ರಾವಿಡರು, ಆರ್ಯರು ಯಾರೆಂದು ಕೇಳಿದರೆ ಹೇಗೆ? ದ್ರಾವಿಡರು ಈ ದೇಶ ಕಟ್ಟಿದವರು. ಮೂಲನಿವಾಸಿಗಳು. ಆದರೆ, ಮುಗ್ಧ ಜನರ ತಲೆಯಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬಿ, ಕಷ್ಟಕ್ಕೆ ದೂಡಿದ್ದಾರೆ. ಕೋಮುವಾದ, ಮೂಲಭೂತವಾದ, ಜಾತಿವಾದವು ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ನೀಡಿದೆ. ಈ ದೇಶದ ಮೂಲ ನಿವಾಸಿಗಳು ಸಂವಿಧಾನ ರಕ್ಷಿಸಬೇಕಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು