ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಟಿ.ಬಿ. ಡ್ಯಾಂ ನೀರಿನ ಮಟ್ಟ ನೂರಲ್ಲ, ನೂರೈದು

ಟೋಪೋಗ್ರಫಿ ಸರ್ವೆಯಿಂದ ಹೊರಬಿದ್ದ ಮಾಹಿತಿ; ರಾಜ್ಯದ ವಿರೋಧದ ನಡುವೆ ವರದಿ ಅಂಗೀಕಾರ
Last Updated 23 ಜೂನ್ 2022, 8:15 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕರ್ನಾಟಕದ ವಿರೋಧದ ನಡುವೆಯೂ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಅಡಿಗೆ ಹೆಚ್ಚಾಗಿರುವ ಟೋಪೋಗ್ರಫಿ ಸರ್ವೆ ವರದಿಯನ್ನು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಂಗೀಕರಿಸಿದೆ.

ಸರ್ವೆ ಪ್ರಕಾರ, ಅಣೆಕಟ್ಟೆಯಲ್ಲಿ ಸದ್ಯ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಅಡಿಗೆ ಹೆಚ್ಚಾಗಿದೆ. ಒಟ್ಟು 132.473 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಅಪಾರ ಹೂಳು ಸಂಗ್ರಹಗೊಂಡಿದ್ದರಿಂದ ನೀರು ಸಂಗ್ರಹ ಸಾಮರ್ಥ್ಯ 100.855 ಟಿಎಂಸಿ ಅಡಿಗೆ ಕುಸಿದಿತ್ತು. ಹೊಸ ಸರ್ವೆಯಿಂದ ಸುಮಾರು 5 ಟಿಎಂಸಿ ಅಡಿ ಹೆಚ್ಚಿಗೆ ನೀರು ಜಲಾಶಯದಲ್ಲಿ ಸಂಗ್ರಹವಾಗುತ್ತಿರುವುದು ಗೊತ್ತಾಗಿದೆ. ಇದರಲ್ಲಿ ಕರ್ನಾಟಕಕ್ಕೆ 3.23 ಟಿಎಂಸಿ ಅಡಿ, ಆಂಧ್ರ ಪ್ರದೇಶಕ್ಕೆ 1.55 ಟಿಎಂಸಿ ಅಡಿ ಹಾಗೂ ತೆಲಂಗಾಣಕ್ಕೆ 0.15 ಟಿಎಂಸಿ ಅಡಿ ನೀರು ಹಂಚಿಕೆಯಾಗಲಿದೆ.

ಡ್ಯಾಂ ನಿರ್ಮಾಣವಾದ ಸಂದರ್ಭದಲ್ಲಿ 132.473 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಎಂದು ಘೋಷಿಸಲಾಗಿತ್ತು. ಅದಾದ ನಂತರ 1963ರಲ್ಲಿ ಹೈಡ್ರೋಗ್ರಫಿಕ್‌ ಸರ್ವೆ ನಡೆಸಿದಾಗ 114.660 ಟಿಎಂಸಿ ಅಡಿಗೆ ಕುಸಿದಿರುವುದು ಗೊತ್ತಾಗಿತ್ತು. 2008ರ ವರೆಗೆ ಅನೇಕ ಸಲ ಹೈಡ್ರೋಗ್ರಫಿಕ್‌ ಸರ್ವೆಯನ್ನೇ ನಡೆಸಿಕೊಂಡು ಬರಲಾಗಿತ್ತು.

2008ರ ಸರ್ವೆಯಲ್ಲಿ 100.855 ಟಿಎಂಸಿ ಅಡಿಗೆ ನೀರಿನ ಸಂಗ್ರಹ ಮಟ್ಟ ಕುಸಿದಿರುವುದು ಗುರುತಿಸಲಾಗಿತ್ತು. ಆದರೆ, 2016ರ ಮಾರ್ಚ್‌–ಏಪ್ರಿಲ್‌ನಲ್ಲಿ ಟೋಪೋಗ್ರಫಿ ಸರ್ವೆ ನಡೆಸಲು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ನಿರ್ಧರಿಸಿತ್ತು. ಹೈದರಾಬಾದ್‌ನ ಆರ್‌.ವಿ. ಅಸೋಸಿಯೇಟ್ಸ್‌ 2017ರಲ್ಲಿ ಸರ್ವೆ ಪೂರ್ಣಗೊಳಿಸಿ, ಅದೇ ವರ್ಷ ಮಂಡಳಿಗೆ ವರದಿ ಒಪ್ಪಿಸಿತ್ತು. ವರದಿಯಲ್ಲಿ 100.855 ಟಿಎಂಸಿ ಅಡಿಯಿಂದ 105.788 ಟಿಎಂಸಿ ಅಡಿಗೆ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾಗಿದೆ ಎಂದು ತಿಳಿಸಲಾಗಿತ್ತು.

ವರದಿ ಅಂಗೀಕಾರಕ್ಕೆ ಮಂಡಳಿ ಕರೆದ ಸಭೆಯಲ್ಲಿ ಸತತವಾಗಿ ಕರ್ನಾಟಕದ ಸದಸ್ಯರು ಅದನ್ನು ವಿರೋಧಿಸಿದ್ದರಿಂದ ನನೆಗುದಿಗೆ ಬಿದ್ದಿತ್ತು. ಅಂಗೀಕಾರಗೊಳ್ಳುವವರೆಗೆ ವಿಷಯ ಕೂಡ ಬಹಿರಂಗ ಪಡಿಸದಿರಲು ನಿರ್ಧರಿಸಲಾಗಿತ್ತು.ಆದರೆ, ಇತ್ತೀಚೆಗೆ ನಡೆದ ಸಭೆಯಲ್ಲಿ ರಾಜ್ಯದ ವಿರೋಧದ ನಡುವೆಯೂ ಕೋರಂ ಮೇರೆಗೆ ಮಂಡಳಿಯು ವರದಿ ಅಂಗೀಕರಿಸಿದೆ. 2022ರ ಜೂ. 22ರಿಂದ ಜಾರಿಗೆ ಬರುವಂತೆ ಜಲಾಶಯದ ನೀರಿನ ಸಂಗ್ರಹ ಮಟ್ಟ 105.788 ಟಿಎಂಸಿ ಅಡಿ ಎಂದು ಘೋಷಿಸಿದೆ. ಇಷ್ಟೇ ಅಲ್ಲ, ಇದರ ಅನ್ವಯವೇ ನೀರಿನ ಹಂಚಿಕೆ ಮಾಡಲಾಗುವುದು ಎಂದೂ ಬುಧವಾರ ತಿಳಿಸಿದೆ.

‘2010ರಲ್ಲಿ ಸಿಂಗಟಾಲೂರು ಜಲಾಶಯ ನಿರ್ಮಾಣವಾದಾಗಿನಿಂದ ತುಂಗಭದ್ರಾ ಅಣೆಕಟ್ಟೆಗೆ ಹೂಳು ಬರುವುದು ಬಹಳ ಕಡಿಮೆಯಾಗಿದೆ. ಸತತ ನಾಲ್ಕು ವರ್ಷಗಳಿಂದ ಜಲಾಶಯ ತುಂಬುತ್ತಿದ್ದು, ಅಪಾರ ನೀರು ಹರಿದು ಹೋಗಿರುವುದರಿಂದ ಅದರೊಂದಿಗೆ ಹೂಳು ಕೂಡ ಹೊರ ಹೋಗಿದೆ ಎನ್ನುವುದು ಟೋಪೋಗ್ರಫಿ ಸರ್ವೆಯಿಂದ ಗೊತ್ತಾಗಿದೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

****

ಏನಿದು ಟೋಪೋಗ್ರಫಿ ಸರ್ವೇ?:
ಜಲಾಶಯದಲ್ಲಿ ಮೂರು ಟಿಎಂಸಿ ಅಡಿಗಿಂತ ಕಡಿಮೆ ನೀರಿನ ಸಂಗ್ರಹವಿದ್ದಾಗ ನಡೆಸುವ ಸರ್ವೇಗೆ ಟೋಪೋಗ್ರಫಿ ಸರ್ವೇ ಎಂದು ಕರೆಯಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವುದಕ್ಕೂ ಮುನ್ನ ನಡೆಸುವ ಮಾದರಿಯಲ್ಲಿ ಅನೇಕ ತಂಡಗಳಲ್ಲಿ ನೆಲದ ಮೇಲೆ ನಿಂತು ಹೂಳಿನ ಅಳತೆ ಮಾಡಲಾಗುತ್ತದೆ. ತುಂಗಭದ್ರಾ ಜಲಾಶಯದಲ್ಲಿ ಒಟ್ಟು 25ರಿಂದ 30 ತಂಡಗಳು ಜಲಾಶಯದ ಬೇರೆ ಬೇರೆ ಭಾಗಗಳಲ್ಲಿ ಸರ್ವೇ ನಡೆಸಿದ್ದವು.

ಹೈಡ್ರೋಗ್ರಫಿಕ್‌ ಸರ್ವೇ ಅಂದರೆ...:
ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿದಾಗ ಬೋಟ್‌ ಮೂಲಕ ಸರ್ವೇ ಕೈಗೊಳ್ಳಲಾಗುತ್ತದೆ. ನೀರಿನ ಆಳಕ್ಕೆ ಲೇಸರ್‌ ಕಿರಣಗಳನ್ನು ಬಿಡಲಾಗುತ್ತದೆ. ಕಿರಣಗಳು ನೆಲವನ್ನು ಸ್ಪರ್ಶಿಸಿದಾಗ ಅದರ ಅಳತೆ ಮಾಡಿ, ಹೂಳು ಮತ್ತು ನೀರಿನ ಸಂಗ್ರಹ ಸಾಮರ್ಥ್ಯ ಗುರುತಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT