ಮಾದಿಗ ಸಮಾಜದ ನಿಂದನೆ ಆರೋಪ; ಕ್ಷಮೆಗೆ ಆಗ್ರಹಿಸಿ ರಸ್ತೆತಡೆ

ಹೊಸಪೇಟೆ (ವಿಜಯನಗರ): ಮಾದಿಗ ಸಮಾಜವನ್ನು ನಿಂದಿಸಿದವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಸಮಾಜದವರು ಭಾನುವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆತಡೆ ನಡೆಸಿದರು.
ಶನಿವಾರ ರಾತ್ರಿ ಕೂಡ ನಡುರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರ ಮನವೊಲಿಕೆ ಬಳಿಕ ಮಧ್ಯರಾತ್ರಿ ಪ್ರತಿಭಟನೆ ಕೈಬಿಟ್ಟಿದ್ದರು. ಭಾನುವಾರ ಬೆಳಿಗ್ಗೆ 10.30ಕ್ಕೆ ಪುನಃ ರಸ್ತೆತಡೆ ನಡೆಸಿದರು. ರಸ್ತೆಯ ಮಧ್ಯದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ಬಂದ್ ಮಾಡಿದರು. ನಡುರಸ್ತೆಯಲ್ಲಿ ಕುಳಿತು, ‘ಬೇಕೇ ಬೇಕು ನ್ಯಾಯ ಬೇಕು’ ಎಂದು ಘೋಷಣೆಗಳನ್ನು ಹಾಕಿದರು.
ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಸ್ಥಳಕ್ಕೆ ಬಂದು, ಮನವೊಲಿಕೆಯ ಪ್ರಯತ್ನ ನಡೆಸಿದರು. ಆದರೆ, ಅದು ಫಲಕೊಡಲಿಲ್ಲ. 10.30ಕ್ಕೆ ಆರಂಭಗೊಂಡ ರಸ್ತೆತಡೆ ಈಗಲೂ ಮುಂದುವರೆದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು, ಹೆಚ್ಚಿನ ಸಿಬ್ಬಂದಿ ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದಾರೆ. ಬೆರಳೆಣಿಕೆಯಷ್ಟು ಪೊಲೀಸರು ಸ್ಥಳದಲ್ಲಿ ಇದ್ದಾರೆ. ಮಾರ್ಗದರ್ಶನ ಮಾಡಲು ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಲ್ಲ.
ಘಟನೆಗೆ ಕಾರಣವೇನು?:
ಸಮೀಪದ ಕಾರಿಗನೂರು ಗ್ರಾಮದಲ್ಲಿ ಗುರುವಾರ (ಫೆ.2) ನಡೆದ ಪಾಂಡುರಂಗಸ್ವಾಮಿ ಹಾಗೂ ಓಂಕಾರೇಶ್ವರ ಸ್ವಾಮಿ ಜೋಡಿ ರಥೋತ್ಸವ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜ ಹಾಗೂ ಮಾದಿಗ ಸಮಾಜದ ಯುವಕರ ಗುಂಪುಗಳ ನಡುವೆ ಜಗಳ ನಡೆದಿದೆ. ‘ವಾಲ್ಮೀಕಿ ಸಮಾಜದ ಕೆಲವರು ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ, ಕೊಲೆ ಬೆದರಿಕೆಯೊಡ್ಡಿದ್ದಾರೆ. ಮಾದಿಗ ಸಮಾಜದವರನ್ನು ನಿಂದಿಸಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ’ ಎಂದು ಮಾದಿಗ ಸಮಾಜದವರು ಆರೋಪಿಸಿ ಠಾಣೆಗೆ ದೂರು ಕೊಟ್ಟಿದ್ದರು. ದೂರು ಆಧರಿಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 15 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇಬ್ಬರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದರು. ನ್ಯಾಯಾಲಯವು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಸಮಾಜವನ್ನು ನಿಂದಿಸಿದವರು ಸ್ಥಳಕ್ಕೆ ಬಂದು ಕ್ಷಮೆಯಾಚಿಸಬೇಕೆಂದು ಮಾದಿಗ ಸಮಾಜದವರು ಪಟ್ಟು ಹಿಡಿದಿದ್ದಾರೆ.
‘ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರತಿಭಟನಾ ನಿರತರನ್ನು ಮನವೊಲಿಸುವ ಕೆಲಸ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.
ಮಾದಿಗ ಸಮಾಜವನ್ನು ನಿಂದಿಸಿದವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಭಾನುವಾರ ಹೊಸಪೇಟೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆತಡೆ ನಡೆಸಿದರು. ರಸ್ತೆಯ ಮಧ್ಯದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ಬಂದ್ ಮಾಡಿದರು.#Vijayanagara #Hospet #Protest pic.twitter.com/0cttKMWXoK
— Prajavani (@prajavani) February 5, 2023
ಮಾದಿಗ ಸಮಾಜವನ್ನು ನಿಂದಿಸಿದವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಭಾನುವಾರ ಹೊಸಪೇಟೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆತಡೆ ನಡೆಸಿದರು. ರಸ್ತೆಯ ಮಧ್ಯದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ಬಂದ್ ಮಾಡಿದರು.#Vijayanagara #Hospet #Protest pic.twitter.com/20GJgkeVvr
— Prajavani (@prajavani) February 5, 2023
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.