ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಸೇರುವವರ ಸಂಖ್ಯೆ ದಿನೇ ದಿನೇ ಹೆಚ್ಚಳ: ಮುಕುಂದ್‌ ಗೌಡ

Last Updated 3 ಏಪ್ರಿಲ್ 2022, 10:46 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಆಮ್‌ ಆದ್ಮಿ’ ಪಕ್ಷ (ಎಎಪಿ) ಸೇರುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ವಿಜಯನಗರ–ಬಳ್ಳಾರಿ ಜಿಲ್ಲೆಯಿಂದಲೂ ಅನೇಕರು ಎಎಪಿ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ’ ಎಂದು ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ಮುಕುಂದ್‌ ಗೌಡ ತಿಳಿಸಿದರು.

‘ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಎಎಪಿ ಜವಾಬ್ದಾರಿ ವಹಿಸಿಕೊಂಡು ಪಕ್ಷ ಸಂಘಟಿಸಲು ಅನೇಕರು ಆಸಕ್ತಿ ತೋರಿಸುತ್ತಿದ್ದಾರೆ. ಮುಂದಿನ ಚುನಾವಣೆಗೆ ಸ್ಪರ್ಧಿಸಲು ಹಲವರು ಟಿಕೆಟ್‌ ಕೇಳುತ್ತಿದ್ದಾರೆ. ಪಕ್ಷ ಸಂಘಟನೆಗೆ ಯಾರೇ ಬಂದರೂ ಸ್ವಾಗತವಿದೆ. ಆದರೆ, ಅವರ ಹಿನ್ನೆಲೆ ಅಧ್ಯಯನ ಮಾಡಿಯೇ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಎಎಪಿಯ ಮುಖ್ಯ ಉದ್ದೇಶ. ಪಕ್ಷದೊಳಗೆ ಭ್ರಷ್ಟರು ಸೇರದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಯುವ ಘಟಕದ ಜವಾಬ್ದಾರಿಯೊಂದಿಗೆ ವಿಜಯನಗರ–ಬಳ್ಳಾರಿ ಜಿಲ್ಲೆಯ ವೀಕ್ಷಕನಾಗಿ ನಾನು ಕೆಲಸ ನಿರ್ವಹಿಸುತ್ತಿರುವೆ. ಎರಡು ದಿನ ಎರಡೂ ಜಿಲ್ಲೆಗಳಲ್ಲಿ ಸಂಚರಿಸಲಿದ್ದೇನೆ. ಪಕ್ಷದ ಸಿದ್ಧಾಂತ ಒಪ್ಪಿ ಯಾರಾದರೂ ನಮ್ಮೊಂದಿಗೆ ಕೈಜೋಡಿಸಿ ಕೆಲಸ ನಿರ್ವಹಿಸುವ ಬಯಕೆ ಇದ್ದರೆ 9742459189 ಸಂಖ್ಯೆಗೆ ಸಂಪರ್ಕಿಸಬಹುದು’ ಎಂದು ಮಾಹಿತಿ ಹಂಚಿಕೊಂಡರು.

‘ಎಎಪಿ ನವದೆಹಲಿಗೆ ಸೀಮಿತವಾದ ಪಕ್ಷ ಎಂದು ಕೆಲವರು ಟೀಕಿಸುತ್ತಿದ್ದರು. ಅವರಿಗೆ ಪಂಜಾಬ್ ಹಾಗೂ ಗೋವಾದ ಜನ ಉತ್ತರ ನೀಡಿದ್ದಾರೆ. ಪಂಜಾಬಿನಲ್ಲಿ 92 ಸ್ಥಾನಗಳಲ್ಲಿ ಜಯಿಸಿ ಎಎಪಿ ದಾಖಲೆ ಸೃಷ್ಟಿಸಿದೆ. ಗೋವಾದಲ್ಲಿ 2 ಸ್ಥಾನಗಳಲ್ಲಿ ಗೆದ್ದು ಖಾತೆ ತೆರೆದಿದೆ’ ಎಂದು ಹೇಳಿದರು.

‘ಪಂಜಾಬಿನಲ್ಲಿ 92 ಸೀಟುಗಳಲ್ಲಿ 82 ಜನ ಮೊದಲ ಸಲ ವಿಧಾನಸಭೆ ಪ್ರವೇಶಿಸಿದ್ದಾರೆ. ಮಾಜಿಮುಖ್ಯಮಂತ್ರಿ ಚೆನ್ನಿ ಅವರನ್ನು ಎಎಪಿಯಿಂದ ಸ್ಪರ್ಧಿಸಿದ್ದ ಮೊಬೈಲ್‌ ರಿಪೇರಿ ಮಾಡುವ ವ್ಯಕ್ತಿ ಚುನಾವಣೆಯಲ್ಲಿ ಸೋಲಿಸಿದರೆ, ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರನ್ನು ಸಾಮಾಜಿಕ ಮಹಿಳಾ ಹೋರಾಟಗಾರ್ತಿ ಸೋಲಿನ ರುಚಿ ತೋರಿಸಿದ್ದಾರೆ. ಹೀಗೆ ಹೆಚ್ಚಿನ ಅಭ್ಯರ್ಥಿಗಳಿಗೆ ದೊಡ್ಡ ಹಿನ್ನೆಲೆಯೇ ಇಲ್ಲ. ಆದರೆ, ಎಎಪಿಯಿಂದ ಸ್ಪರ್ಧಿಸಿ ಘಟನುಘಟಿಗಳನ್ನು ಸೋಲಿಸಿದ್ದಾರೆ’ ಎಂದರು.

‘ಎಎಪಿ ಜನಸಾಮಾನ್ಯರ ಪಕ್ಷ. ಜನಸಾಮಾನ್ಯರೇ ಈ ಪಕ್ಷದ ಚುಕ್ಕಾಣಿ ಹಿಡಿಯಬೇಕು. ಅಧಿಕಾರಕ್ಕೆ ಬರಬೇಕು. ಜನರಿಗೆ ಉತ್ತಮ, ಸ್ವಚ್ಛ, ಭ್ರಷ್ಟಾಚಾರಮುಕ್ತ ಆಡಳಿತ ಕೊಡಬೇಕು. ಈ ಉದ್ದೇಶಕ್ಕಾಗಿಯೇ ಸಾಮಾನ್ಯ ಜನರಿಗೆ ಪಕ್ಷದ ಜವಾಬ್ದಾರಿ ವಹಿಸಲಾಗುತ್ತಿದೆ’ ಎಂದು ಹೇಳಿದರು.

ಎಎಪಿ ಮುಖಂಡ ಹರೂನ್‌ ಶೇಕ್‌ ಇದ್ದರು.

‘ಇತ್ತೀಚೆಗೆ ನಡೆದ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಎಎಪಿ ಚಿಹ್ನೆಯಡಿ ಗೆದ್ದಿರುವ ಶೇಕ್‌ ಷಾ ವಲಿ ಅವರು ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆದರೆ, ಅವರು ಈಗಲೂ ಎಎಪಿಯ ಸದಸ್ಯರು. ಅವರು ಜನರ ನಿರೀಕ್ಷೆ ತಕ್ಕಂತೆ ಉತ್ತಮ ಕೆಲಸ ಮಾಡಬೇಕು. ಜನಾಭಿಪ್ರಾಯ ಧಿಕ್ಕರಿಸಿ ಹೋಗಬಾರದು. ಉತ್ತಮ ಕೆಲಸ ಮಾಡಿದರೆ ಸಾಕು. ವಕೀಲ ಜಗದೀಶ ವಿರುದ್ಧ ಕೆಲ ಆರೋಪಗಳು ಬಂದಿರುವುದರಿಂದ ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT