ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪ್ರಶಸ್ತಿ ಪತ್ರದಲ್ಲಿ ಸಚಿವರ ಪುತ್ರನ ಚಿತ್ರ: ಪ್ರಶಸ್ತಿ ಪತ್ರ ವಾಪಸ್‌

ಪ್ರಜಾವಾಣಿ ವರದಿ ಫಲಶ್ರುತಿ: ಕಾರಣ ಕೇಳಿ ನೋಟಿಸ್‌
Last Updated 17 ಆಗಸ್ಟ್ 2022, 12:31 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಪ್ರಶಸ್ತಿ ಪತ್ರದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ಅವರ ಪುತ್ರ ಸಿದ್ದಾರ್ಥ ಸಿಂಗ್‌ ಅವರ ಭಾವಚಿತ್ರ, ಹೆಸರು ಪ್ರಕಟಿಸಿದ ವಿಷಯಕ್ಕೆ ಸಂಬಂಧಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಬುಧವಾರ (ಆ.17) ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ. ಇದರ ಬೆನ್ನಲ್ಲೇ ಪ್ರಶಸ್ತಿ ಪತ್ರಗಳನ್ನೂ ವಾಪಸ್‌ ಪಡೆಯಲಾಗಿದೆ.

‘ಪ್ರಶಸ್ತಿ ಪತ್ರದಲ್ಲಿ ಸಚಿವರ ಪುತ್ರನ ಚಿತ್ರ!’ ಶೀರ್ಷಿಕೆಯಡಿ ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿ ಬೆನ್ನಲೇ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಅವರು ಕ್ರೀಡಾ ಕಾರ್ಯದರ್ಶಿ ಚಿದಾನಂದ ಹಾಗೂ ಸಹ ಕ್ರೀಡಾ ಕಾರ್ಯದರ್ಶಿ ಅಜಿತ್‌ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ.

ಇನ್ನು, ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಚಿದಾನಂದ ಹಾಗೂ ಅಜಿತ್‌, ಕ್ರೀಡಾಕೂಟದ ಸಂದರ್ಭದಲ್ಲಿ ಮಳೆ ಬಂದದ್ದರಿಂದ ಮುಂದೂಡಲಾಗಿತ್ತು. ಶಿಷ್ಟಾಚಾರದ ಪ್ರಶಸ್ತಿ ಪತ್ರಗಳನ್ನು ವಿತರಿಸಿಲ್ಲ. ಎರಡನೇ ದಿನ ಸಂಜೆ ಕ್ರೀಡಾಕೂಟದ ಸಂಘಟನೆಯ ಜವಾಬ್ದಾರಿ ವಹಿಸಿಕೊಂಡ ಪಿ.ಕೆ.ಹಳ್ಳಿ ಎ.ಕೆ.ಸಿ.ಪಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷ ತಾಯಣ್ಣ ದೊಡ್ಡಮನಿ ಅವರೇ ಪ್ರಶಸ್ತಿ ಪತ್ರ ಮುದ್ರಿಸಿಕೊಂಡು ನಮ್ಮ ಗಮನಕ್ಕೆ ತರದೇ ಕ್ರೀಡಾಕೂಟ ಮುಗಿದ ನಂತರ ವಿತರಿಸಿದ್ದಾರೆ. ಮೂರನೇ ದಿನ ಕ್ರೀಡಾಕೂಟ ಮುಗಿದ ನಂತರ ಶಿಷ್ಟಾಚಾರವಿರುವ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗಿದೆ. ನಮ್ಮಿಂದ ಯಾವುದೇ ಲೋಪವಾಗಿಲ್ಲ. ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳಲಾಗುವುದು. ದೋಷಪೂರಿತ ಪ್ರಶಸ್ತಿ ಪತ್ರಗಳನ್ನು ವಾಪಸ್‌ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯನಗರ ಜಿಲ್ಲಾ ಪಂಚಾಯಿತಿ, ಹೊಸಪೇಟೆ ತಾಲ್ಲೂಕು ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಆ. 5 ಮತ್ತು 6ರಂದು ತಾಲ್ಲೂಕಿನ ಪಾಪಿನಾಯಕನಹಳ್ಳಿಯಲ್ಲಿ 48ನೇ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಲಾಗಿದ್ದು, ಅದರಲ್ಲಿ ಸಿದ್ದಾರ್ಥ ಸಿಂಗ್‌ ಅವರ ಕೈಮುಗಿದಿರುವ ಚಿತ್ರ ಮುದ್ರಿಸಲಾಗಿದೆ. ಅದರ ಅಡಿಯಲ್ಲಿ, ಕೊಡುಗೆ: ಶ್ರೀ ಸಿದ್ದಾರ್ಥ ಸಿಂಗ್‌, ಯುವ ಮುಖಂಡರು ಹಾಗೂ ಸಮಾಜ ಸೇವಕರು, ವಿಜಯನಗರ ಕ್ಷೇತ್ರ, ಹೊಸಪೇಟೆ ಎಂದು ಬರೆಯಲಾಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT