ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ಕಾಯ್ದೆ: ಸಚಿವರಿಂದ ಅಧಿಕಾರಿಗಳಿಗೆ ‘ಕ್ಲಾಸ್‌’

ಪಶು ಸಂಗೋಪನಾ ಸಚಿವರಿಂದ ಪ್ರಶ್ನೆ ಮೇಲೆ ಪ್ರಶ್ನೆ
Last Updated 31 ಆಗಸ್ಟ್ 2021, 10:40 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಗೋಹತ್ಯೆ ನಿಷೇಧ ಕಾಯ್ದೆ ಏನು ಹೇಳುತ್ತದೆ? ಈ ಹಿಂದಿನ ಕಾಯ್ದೆ ಹಾಗೂ ಹಾಲಿ ಕಾಯ್ದೆ ನಡುವೆ ಇರುವ ವ್ಯತ್ಯಾಸವೇನು? ಜಾನುವಾರುಗಳ ರಕ್ಷಣೆಗೆ ಏನು ಮಾಡಬೇಕು? ಪಶು ಸಂಜೀವಿನಿ ಯೋಜನೆಯ ಪ್ರಯೋಜನಗಳೇನು?’

ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳುತ್ತಲೇ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರು ಮಂಗಳವಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಚಿವರ ಪ್ರಶ್ನೆಗೆ ಕೆಲವು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಉತ್ತರಿಸಿದರೆ, ಕೆಲವರು ತಡಬಡಾಯಿಸಿದರು. ‘ಗೋಹತ್ಯೆ ಕಾಯ್ದೆ ಹೇಗೆ ಜಾರಿಗೆ ತರುತ್ತೀರಿ?’ ಎಂದು ಸಚಿವರು ಕೇಳಿದ ಪ್ರಶ್ನೆಗೆ, ಕೂಡ್ಲಿಗಿ ಸಹಾಯಕ ನಿರ್ದೇಶಕ ವಿನೋದಕುಮಾರ್‌ ಅವರು ಸಮರ್ಪಕವಾಗಿ ಉತ್ತರಿಸಲಿಲ್ಲ. ಅದಕ್ಕೆ ಸಚಿವರು ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಉಪನಿರ್ದೇಶಕ ಬಿ.ಎಲ್‌. ಪರಮೇಶ್ವರ ನಾಯಕ ಅವರನ್ನು ತಡೆದು, ‘ಸುಮ್ಮನೆ ಕೂರಬೇಕು’ ಎಂದು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು.

‘ಎಲ್ಲ ಅಧಿಕಾರಿಗಳು ಇಲಾಖೆಯ ಪ್ರತಿಯೊಂದು ಕೆಲಸದ ಬಗ್ಗೆ ತಿಳಿದುಕೊಳ್ಳಬೇಕು. ಯಾರಿಗೆ ಕೆಲಸ ಮಾಡಲು ಇಷ್ಟವಿಲ್ಲವೋ ಅಂತಹವರು ಬಿಟ್ಟು ಹೋಗಬಹುದು’ ಎಂದು ಖಡಕ್‌ ಆಗಿ ಹೇಳಿದರು. ಕಾಯ್ದೆ ಬಗ್ಗೆ ಸಮರ್ಪಕವಾಗಿ ಉತ್ತರಿಸಿದ ಸಂಡೂರು ಪಶು ವೈದ್ಯಕೀಯ ಅಧಿಕಾರಿ ವಲಿ ಬಾಷಾ, ಸಹಾಯಕ ನಿರ್ದೇಶಕ ರಂಗಪ್ಪ ಅವರ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಶಹಬ್ಬಾಸ್‌ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಇವರಿಗೆ ಚಪ್ಪಾಳೆ ಹೊಡೆಯಿರಿ’ ಎಂದರು.

‘ಬಳ್ಳಾರಿ–ವಿಜಯನಗರ ಜಿಲ್ಲೆಯಲ್ಲಿ ಗೋಶಾಲೆಗೆ ಸ್ಥಾಪನೆಗೆ ಎರಡೂ ಜಿಲ್ಲೆಯಲ್ಲಿ ತಲಾ 55ರಿಂದ 100 ಎಕರೆ ಜಾಗ ಗುರುತಿಸಬೇಕು. ಅ. 2ರೊಳಗೆ ಆರಂಭಿಸಬೇಕು. ಜಿಲ್ಲಾಧಿಕಾರಿಯವರು ಬೇಗ ಜಾಗ ಹುಡುಕಿ ಅಂತಿಮಗೊಳಿಸಬೇಕು. ಈಗಲೂ ಕಾನೂನುಬಾಹಿರವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ. ಅದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು’ ಎಂದು ಸೂಚಿಸಿದರು.

‘ಬಕ್ರೀದ್‌ ಸಂದರ್ಭದಲ್ಲಿ ರಾಜ್ಯದಲ್ಲಿ 7,000 ಜಾನುವಾರುಗಳನ್ನು ರಕ್ಷಿಸಲಾಗಿದೆ. ರೈತರು, ಸಾರ್ವಜನಿಕರು ಗೋವುಗಳ ಸಾಗಣೆ ಬಗ್ಗೆ ಮಾಹಿತಿ ನೀಡಿದಾಗ ತಕ್ಷಣವೇ ಸ್ಪಂದಿಸಿ ರಕ್ಷಿಸಬೇಕು. ಹೊಸ ಕಾನೂನಿನಲ್ಲಿ ಕಠಿಣ ಶಿಕ್ಷೆಗೆ ಅವಕಾಶ ಇದೆ. ಒಂದುವೇಳೆ ಸಿಕ್ಕಿಕೊಂಡರೆ ಮತ್ತೊಮ್ಮೆ ಕೃತ್ಯ ಎಸಗಲು ಯಾರು ಧೈರ್ಯ ತೋರುವುದಿಲ್ಲ’ ಎಂದರು.

‘ಅಧಿಕಾರಿಗಳು ಗ್ರಾಮ ಸಭೆ ನಡೆಸಿ, ಗೋಹತ್ಯೆ ಕಾಯ್ದೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಬೇಕು. ಜಿಲ್ಲಾಧಿಕಾರಿ ಎರಡು ತಿಂಗಳಿಗೊಮ್ಮೆ ಜಿಲ್ಲಾಮಟ್ಟದ ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕು. ಜಾನುವಾರುಗಳಿಗೆ ಅಗತ್ಯ ಲಸಿಕೆ, ಔಷಧಿ ದಾಸ್ತಾನಿನ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಸುಳ್ಳು ಮಾಹಿತಿ ಕೊಟ್ಟು ದಿಕ್ಕು ತಪ್ಪಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ಕೊಡಬೇಕು. ಯಾವುದೇ ಕಾರಣಕ್ಕೂ ಮೊಬೈಲ್‌ ಸ್ವಿಚ್‌ ಆಫ್‌ ಮಾಡಬಾರದು. ನಿಮ್ಮ ನಿತ್ಯದ ಕೆಲಸದ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ನನಗೆ ಮಾಹಿತಿ ಕೊಡಬೇಕು. ಗೋವುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಪೂರೈಸಬೇಕು. ನನಗೂ ಪಗಾರ ಕೊಡುತ್ತಾರೆ. ನಿಮಗೂ ಪಗಾರ ಇದೆ. ಯಾರೂ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು’ ಎಂದು ತಾಕೀತು ಮಾಡಿದರು.

ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಬಿ.ಎಲ್‌. ಪರಮೇಶ್ವರ ನಾಯಕ, ಡಾ. ಬಸವೇಶ ಹೂಗಾರ, ದತ್ತಾತ್ರೇಯ ಶೆಟ್ಟಿ, ಸಹಾಯಕ ನಿರ್ದೇಶಕ ಬಸವರಾಜ ಬೆಣ್ಣೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT