ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ: ಟಿಕೆಟ್‌ ಘೋಷಣೆಗೂ ಮುನ್ನವೇ ಪ್ರಚಾರ!

Last Updated 17 ನವೆಂಬರ್ 2021, 8:18 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಇನ್ನಷ್ಟೇ ಕಾಂಗ್ರೆಸ್‌ ಅಭ್ಯರ್ಥಿಯ ಹೆಸರು ಘೋಷಣೆ ಆಗಬೇಕಿದೆ. ಆದರೆ, ಅದಕ್ಕೂ ಮುನ್ನವೇ ಆ ಪಕ್ಷದ ಮುಖಂಡ ಕೆ.ಸಿ. ಕೊಂಡಯ್ಯ ಅವರು ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.

ಈ ಹಿಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕೊಂಡಯ್ಯ ಅವರಿಗೆ ಎರಡನೇ ಅವಧಿಗೂ ತಮ್ಮನ್ನೇ ಕಣಕ್ಕಿಳಿಸುವ ಭರವಸೆ ಇದೆ. ಅವರೇ ಹೇಳಿಕೊಂಡಂತೆ ಈಗಾಗಲೇ ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದಾರೆ.

ಚುನಾವಣಾ ಆಯೋಗವು ಚುನಾವಣೆಗೆ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನವೇ ಅವರು ಪ್ರಚಾರ ಕಾರ್ಯ ಆರಂಭಿಸಿದ್ದರು. ಅವಳಿ ಜಿಲ್ಲೆಗಳ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿರುವ ಅವರು, ಪಂಚಾಯಿತಿ ಸದಸ್ಯರ ಮನಗೆಲ್ಲುವ ಕಸರತ್ತು ನಡೆಸಿದ್ದಾರೆ. ಅದೇ ರೀತಿ ನಗರಸಭೆ, ಪುರಸಭೆ ಸದಸ್ಯರನ್ನೂ ಭೇಟಿಯಾಗಿ ಬೆಂಬಲ ಯಾಚಿಸಿದ್ದಾರೆ.

ಬಿಜೆಪಿ ಸಚಿವರೊಂದಿಗೆ ಉತ್ತಮ ಸ್ನೇಹ:

ಕೊಂಡಯ್ಯನವರು ಕಾಂಗ್ರೆಸ್‌ನಲ್ಲಿದ್ದರೂ ಪ್ರವಾಸೋದ್ಯಮ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯ ಹಲವು ಮುಖಂಡರೊಂದಿಗೆ ಸ್ನೇಹವಿದೆ.

ಈ ಹಿಂದಿನ ಚುನಾವಣೆಯಲ್ಲಿ ಕೊಂಡಯ್ಯನವರ ಗೆಲುವಿಗೆ ಇದು ಸಹಾಯವಾಗಿತ್ತು. ಈ ವಿಷಯ ಅರಿತೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹಲವು ಮುಖಂಡರು ಹಿಂಜರಿಯುತ್ತಿದ್ದಾರೆ.

ಚುನಾವಣೆಗೂ ಮುನ್ನ ಬಿಜೆಪಿಯಿಂದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವೆಂದೇ ಹೇಳಲಾಗಿತ್ತು. ಆದರೆ, ಮತ್ತೊಮ್ಮೆ ಕೊಂಡಯ್ಯನವರೇ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎಂಬ ವಿಷಯ ತಿಳಿದು ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ಪಾಟೀಲ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಈ ಕುರಿತು ನಾನೇನೂ ಪ್ರತಿಕ್ರಿಯಿಸುವುದಿಲ್ಲ’ ಎಂದಷ್ಟೇ ಹೇಳಿದ್ದಾರೆ. ಪಾಟೀಲ ಅವರು ಸ್ಪರ್ಧೆಗೆ ಒಲವು ತೋರಿಸದ ಕಾರಣಕ್ಕಾಗಿಯೇ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT