ಹೂವಿನಹಡಗಲಿ: ‘ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯ ₹22,31,350 ನಕಲಿ ಸಹಿ ಮೂಲಕ ಬ್ಯಾಂಕ್ ನಿಂದ ಬಿಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು’ ಎಂದು ಹಿಂದೆ ಈ ಪಂಚಾಯಿತಿಯ ಪಿಡಿಒ ಆಗಿದ್ದ ಜ್ಯೋತಿ ದೊಡ್ಡಮನಿ ಪೊಲೀಸರಿಗೆ ದೂರು ನೀಡಿದ್ದಾರೆ.
‘2023ರ ಮಾ. 24 ರಿಂದ ಜು. 13ರವರೆಗೆ ನಂದಿಹಳ್ಳಿ ಗ್ರಾ.ಪಂ. ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದ್ದು, ನನಗೆ ಅಧಿಕಾರ ಹಸ್ತಾಂತರಿಸುವಾಗ 14-15ನೇ ಹಣಕಾಸು ಯೋಜನೆಯ ಚೆಕ್ ಪುಸ್ತಕ ನೀಡಿರಲಿಲ್ಲ. ಹೊಸದಾಗಿಯೂ ಯಾವುದೇ ಚೆಕ್ ಪುಸ್ತಕ ಪಡೆದಿಲ್ಲ. ಸೋಗಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಯಲ್ಲಿದ್ದ ಪಂಚಾಯಿತಿಯ 15ನೇ ಹಣಕಾಸು ಯೋಜನೆಯ ಹಣವನ್ನು ‘ದೈವಿಕ ಎಂಟರ್ ಪ್ರೈಸಸ್ ಆಂಡ್ ಕಂಪೆನಿ’ ಹೆಸರಿಗೆ ವಿವಿಧ ಮೊತ್ತದ ಎಂಟು ಚೆಕ್ ಗಳ ಮೂಲಕ ನನ್ನ ಸಹಿ ನಕಲು ಮಾಡಿ ₹22.31 ಲಕ್ಷ ಬಿಡಿಸಿಕೊಳ್ಳಲಾಗಿದೆ. ಮೇಲಧಿಕಾರಿಗಳ ನಿರ್ದೇಶನದಂತೆ ದೂರು ನೀಡುತ್ತಿದ್ದು, ನಕಲಿ ಸಹಿ ಮೂಲಕ ಮೋಸಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಗ್ರಾಮ ವಿಕಾಸ ಯೋಜನೆಯ ₹3.26 ಲಕ್ಷ ಮತ್ತು 15ನೇ ಹಣಕಾಸು ಯೋಜನೆಯ ₹22.31 ಲಕ್ಷಗಳನ್ನು ನಕಲಿ ಸಹಿ ಮೂಲಕ ಬಿಡಿಸಿಕೊಳ್ಳಲಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯವರು ತಾಲ್ಲೂಕು ಪಂಚಾಯ್ತಿ ಇಒ ಅವರಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.