ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಸಮುದಾಯ ಅಧ್ಯಯನಕ್ಕೆ ಇನ್ನೂ ಇದೆ ಹೆಚ್ಚಿನ ಸಾಧ್ಯತೆ’

Last Updated 30 ಆಗಸ್ಟ್ 2021, 13:36 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೆಲಸದಿಂದ ನಿವೃತ್ತಿ ಹೊಂದಿರುವ ಹಿರಿಯ ಪ್ರಾಧ್ಯಾಪಕ ರಹಮತ್‌ ತರೀಕೆರೆ ಅವರಿಗೆ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಸೋಮವಾರ ಸತ್ಕರಿಸಿ, ಬೀಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಹಮತ್‌ ತರೀಕೆರೆ, ‘ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದ ಈ ಮೂವತ್ತು ವರ್ಷಗಳ ಪ್ರಯಾಣದಲ್ಲಿ ನಾನು ಕರ್ನಾಟಕದ ವಿವಿಧ ಬಗೆಯ ಪಂಥಗಳ ಕುರಿತು ಅಧ್ಯಯನ ಕೈಕೊಂಡಾಗ ಅನೇಕ ಜನಸಮುದಾಯಗಳು ತಮ್ಮದೇ ಸಂಪ್ರದಾಯ ಆಚರಣೆಗಳ ಮೂಲಕ ಬದುಕು ನಡೆಸುತ್ತಿರುವುದನ್ನು ಕಂಡಿದ್ದೇನೆ. ಅದರ ಬಗ್ಗೆ ಅಧ್ಯಯನ ಮಾಡಲು ಇನ್ನೂ ಸಾಕಷ್ಟು ಸಾಧ್ಯತೆಗಳಿವೆ’ ಎಂದು ಹೇಳಿದರು.

‘ನಮ್ಮ ಹಿರಿಯರು ಹಾಕಿಕೊಟ್ಟ ಮಾದರಿಯ ಜೊತೆಗೆ ನನ್ನದೇ ಮಾರ್ಗದಲ್ಲಿ ಕರ್ನಾಟಕದ ಸೂಫಿ ಪಂಥ, ಶಾಕ್ತ ಪಂಥ, ನಾಥ ಪಂಥ, ಗುರುಪಂಥಗಳ ಬಗ್ಗೆ ಅಧ್ಯಯನ ಮಾಡಲು ಸಾಧ್ಯವಾಯಿತು. ಕಾಳಾಮುಖ-ಕಾಪಾಲಿಕ, ಅವಧೂತ ಮೊದಲಾದ ಇಂತಹುದೇ ಪಂಥಗಳ ಬಗ್ಗೆ ಯುವ ಸಂಶೋಧಕರು ಅಧ್ಯಯನ ಮಾಡಿ ಬೆಳಕು ಚೆಲ್ಲಬೇಕಾಗಿದೆ’ ಎಂದರು.

ಪ್ರಾಧ್ಯಾಪಕ ವೀರೇಶ ಬಡಿಗೇರ, ‘ತರೀಕೆರೆ ಅವರು ಪ್ರಭುತ್ವ, ಧರ್ಮ, ಭಾಷೆ, ಸಂಸ್ಕೃತಿಗಳಿಗೆ ಮುಖಾಮುಖಿಯಾಗಿರುವುದನ್ನು ಅವರ ಕೃತಿಗಳಲ್ಲಿ ನಾವು ಕಾಣಬಹುದು. ಕರ್ನಾಟಕದ ಅನೇಕ ಪಂಥಗಳ ಮೇಲೆ ಮೊದಲ ಬಾರಿಗೆ ಬೆಳಕು ಚೆಲ್ಲಿದವರು. ಅನೇಕ ಹಳ್ಳಿಗಳನ್ನು ರಹಮತ್ ಅವರು ಸುತ್ತಿದ್ದಾರೆ. ಆ ಮೂಲಕ ಅನೇಕ ಉಪಸಂಸ್ಕೃತಿಯ ಚಹರೆಗಳನ್ನು ಗುರುತಿಸಿದ್ದಾರೆ. ನಿವೃತ್ತಿಯಾದ ನಂತರವೂ ರಹಮತ್ ಅವರ ಉಪಸಂಸ್ಕೃತಿಯ ಹುಡುಕಾಟ ನಿರಂತರವಾಗಿರಲಿ’ ಎಂದು ಆಶಿಸಿದರು.

ಪ್ರಾಧ್ಯಾಪಕ ಎಫ್.ಟಿ.ಹಳ್ಳಿಕೇರಿ. ‘ತರೀಕೆರೆ ಅವರು ಸಾವಿರಾರು ಕೀ.ಮೀ. ಪ್ರವಾಸ ಮಾಡಿ ಸಂಶೋಧನೆ ಮಾಡಿದ್ದಾರೆ. ಕೃತಿ ರಚಿಸಿದ್ದಾರೆ. ಉಪಯುಕ್ತ ಕೊಡುಗೆ ಕೊಟ್ಟಿದ್ದಾರೆ’ ಎಂದರು.

ಪ್ರಾಧ್ಯಾಪಕ ಕೆ. ರವೀಂದ್ರನಾಥ, ಸಂಶೋಧನಾ ವಿದ್ಯಾರ್ಥಿಗಳಾದ ರೇಷ್ಮಾ, ಸಂಗಮೇಶ, ಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT