ಶುಕ್ರವಾರ, ಮೇ 14, 2021
31 °C
ಕರ್ನಾಟಕ ಪ್ರಾಂತ ರೈತ ಸಂಘದ ಪ್ರಥಮ ತಾಲ್ಲೂಕು ಸಮ್ಮೇಳನದಲ್ಲಿ ಶಿವಶಂಕರ

ರೈತರಿಗಾಗಿ ಹೋರಾಡಿ ಜೈಲುಸೇರಿದ ಒಬ್ಬ ರಾಜಕಾರಣಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಜಿಲ್ಲೆಯಲ್ಲಿ ಅಕ್ರಮ ಗಣಿ ಲೂಟಿ ಹೊಡೆದು ಜೈಲಿಗೆ ಹೋದ ಶಾಸಕರಿದ್ದಾರೆ ವಿನಃ ರೈತರ ಪರವಾಗಿ ಹೋರಾಟ ಮಾಡಿ ಜೈಲಿಗೆ ಹೋದ ಒಬ್ಬ ರಾಜಕಾರಣಿಯೂ ಇಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಸ್.ಶಿವಶಂಕರ ಹೇಳಿದರು.

ನಗರದ ಸರ್ಕಾರಿ ನೌಕರರ ಭವನ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಥಮ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಸಚಿವ ಆನಂದ್ ಸಿಂಗ್ ಅವರು ರೈತರ ಪರವಾದ ವಿಷಯಗಳನ್ನು, ಅವರಿಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರದ ಗಮನಕ್ಕೆ ತಂದಿಲ್ಲ. ಕೈಗಾರಿಕೆಗೆ ಒತ್ತು ಕೊಟ್ಟು ಎಷ್ಟು ಕೆಲಸ ಮಾಡಿದ್ದಾರೆ, ಉದ್ಯೋಗ, ಶಿಕ್ಷಣದ ಬಗ್ಗೆ ಎಂದೂ ಮಾತಾಡಿಲ್ಲ, ಬರೀ ಜಿಲ್ಲೆಯ ಬಗ್ಗೆ ಮಾತಾಡಿದ್ದಾರೆ’ ಎಂದು ಆರೋಪಿಸಿದರು.

‘ಅರಣ್ಯ ಭೂಮಿ ಹೊಂದಿರುವ ರೈತರಿಗೆ ಪಟ್ಟಾ ಕೊಡುವ ಕುರಿತು ಭರವಸೆ ನೀಡಿದ್ದರೂ ಸಿಕ್ಕಿಲ್ಲ. ಸಂಡೂರು ಭಾಗದಲ್ಲಿ ಶೇ. 80ರಷ್ಟು ಪರಿಶಿಷ್ಟ ವರ್ಗದವರ ಅರಣ್ಯ ಭೂಮಿ ಇದೆ. ಅದರ ಬಗ್ಗೆ ಸಚಿವ ಶ್ರೀರಾಮುಲು ಇದುವರೆಗೂ ಮಾತಾಡಿಲ್ಲ, ಸಂಡೂರಿನಲ್ಲಿ 4,300 ಅರ್ಜಿಗಳು ಪಟ್ಟಾಕ್ಕಾಗಿ ಅರ್ಜಿ ಸಲ್ಲಿಕೆಯಾಗಿವೆ. ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರು ಗಮನಹರಿಸಬೇಕು’ ಎಂದು ಆಗ್ರಹಿಸಿದರು.

‘ಐಎಸ್‌ಆರ್‌ ಕಾರ್ಖಾನೆಯನ್ನು ರೈತರಷ್ಟೇ ಅವಲಂಬಿಸಿಲ್ಲ. ನೂರಾರು ಕಾರ್ಮಿಕರು ಮತ್ತು ಈ ಭಾಗದ ವ್ಯಾಪಾರಸ್ಥರು ಕಾರ್ಖಾನೆಯನ್ನೇ ನಂಬಿದ್ದಾರೆ. ಕೂಡಲೇ ಸಕ್ಕರೆ ಕಾರ್ಖಾನೆ ಮರುಬಳಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಮುಖಂಡ ಭಾಸ್ಕರ್ ರೆಡ್ಡಿ, ‘ಧರ್ಮಗುಣ ಇರುವ ಕಾರಣ ರೈತರನ್ನು ಧರ್ಮರಾಜ ಎನ್ನುತ್ತಾರೆ. ರೈತ ಎಂದಿಗೂ ತನ್ನ ಬೆಳೆಗೆ ಇಷ್ಟೇ ಬೆಲೆ ಕೊಡಿ ಅಂತ ಕೇಳಿಲ್ಲ. ಕೊಡುವ ಬೆಲೆಯಲ್ಲಿಯೇ ಮೂಕಪ್ರಾಣಿಯಂತೆ ಬದುಕು ಸಾಗಿಸುತ್ತ ಕೃಷಿ ಮಾಡುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ನೂರಾರು ಎಕರೆ ಭೂಮಿ ಉಳ್ಳವರೇ ರೈತ ಸಂಘದ ನಾಯಕರಾಗುತ್ತಿದ್ದಾರೆ, ರೈತರಿಗೆ ಯಾರೂ ನ್ಯಾಯ ಕೊಡಿಸುತ್ತಿಲ್ಲ. ರೈತನೇ ಇದನ್ನು ಅರಿತುಕೊಂಡು ಹೋರಾಟ ಮಾಡಬೇಕಿದೆ’ ಎಂದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ಮಾತನಾಡಿ, ‘ಲಕ್ಷ, ಕೋಟಿಗಳಲ್ಲಿ ಸಾಲ ಮಾಡುವ ಸಂಸ್ಥೆಗಳು ಆರಾಮವಾಗಿವೆ. ಆದರೆ, ರೈತರು ಬ್ಯಾಂಕ್ ಕಚೇರಿಯಿಂದ ಬರುವ ನೋಟಿಸ್ ನೋಡಿಯೇ ಮಾನಕ್ಕಂಜಿ ನೇಣು ಹಾಕಿಕೊಳ್ಳುತ್ತಾರೆ. ರೈತರ ಬೆಳೆಗಳಿಗೆ ಬೆಲೆ ನೀಡದೇ ಸತಾಯಿಸುವ ಜೊತೆಗೆ ರೈತರ ಭೂಮಿಗಳನ್ನು ಕಸಿದುಕೊಂಡು ಕಾರ್ಖಾನೆಗಳಿಗೆ ನೀಡುತ್ತಿದ್ದಾರೆ’ ಎಂದರು.

ರೈತ ಸಂಘದ ಜಿಲ್ಲಾ ಮುಖಂಡ ಗಾಳಿ ಬಸವರಾಜ, ಸಂಚಾಲಕ ಎನ್.ಯಲ್ಲಾಲಿಂಗ, ಸಿಐಟಿಯು ತಾಲ್ಲೂಕು ಅಧ್ಯಕ್ಷೆ ಕೆ.ನಾಗರತ್ನ, ಸಮುದಾಯ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಮುನಿರಾಜು, ಕೆ.ಮಲ್ಲಿಕಾರ್ಜುನ, ಎಂ.ಗೋಪಾಲ, ಕರಿಹನುಮಂತ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು