ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸ್ಥಿತಿ ಅವಲೋಕಿಸಿ ಲಾಕ್‌ಡೌನ್ ನಿರ್ಧಾರ: ಸಚಿವ ಆನಂದ್‌ ಸಿಂಗ್‌

ಸಚಿವರಿಂದ ಆರೋಗ್ಯ ಸೇವೆ, ಕೋವಿಡ್‌ ಸ್ಥಿತಿಗತಿ ಪರಿಶೀಲನೆ
Last Updated 2 ಜೂನ್ 2021, 14:28 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ‘ಲಾಕ್‌ಡೌನ್ ಮುಂದುವರಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಐದು ದಿನಗಳ ನಂತರ ಪರಿಸ್ಥಿತಿ ನೋಡಿಕೊಂಡು ಜಿಲ್ಲೆಯಲ್ಲಿ ಲಾಕ್‌‌ಡೌನ್ ಮುಂದುವರಿಸಬೇಕೋ ಅಥವಾ ಬೇಡವೋ ಎನ್ನುವುದರ ಕುರಿತು ತೀರ್ಮಾನಕ್ಕೆ ಬರಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಬುಧವಾರ ನಗರದಲ್ಲಿ ಕೋವಿಡ್‌ ಆಸ್ಪತ್ರೆ, ನಗರ ಹೊರವಲಯದ ಜಂಬುನಾಥ ರಸ್ತೆಯಲ್ಲಿನ ಕೋವಿಡ್‌ ಆರೈಕೆ ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಿಸಿಟಿವಿ ಮೂಲಕ ಕೋವಿಡ್‌ ರೋಗಿಗಳ ಮೇಲೆ ನಿಗಾ ಇಡುವುದು, ವಿಡಿಯೊದಲ್ಲಿ ಮಾತನಾಡುವುದರ ಬದಲು ಸುರಕ್ಷತಾ ಕ್ರಮಗಳೊಂದಿಗೆ ನೇರವಾಗಿ ತೆರಳಿ ಅವರ ಆರೋಗ್ಯ ವಿಚಾರಿಸಬೇಕು’ ಎಂದು ನಗರದ 60 ಹಾಸಿಗೆ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕೋವಿಡ್‌ ಆರೈಕೆ ಕೇಂದ್ರದಲ್ಲಿನ ವೈದ್ಯಕೀಯ ಸೇವೆ, ಉಪಹಾರ, ಊಟದ ಮಾಹಿತಿ ಪಡೆದರು.

‘ಆರೋಗ್ಯ ವ್ಯವಸ್ಥೆಯ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿರುವೆ. ಸ್ವತಃ ನಾನೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿರುವೆ. ಹಂಪಿ ಪೊಲೀಸ್‌ ಠಾಣೆ ಸ್ಥಳಾಂತರಿಸಿ, ಅದನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಸರ್ಕಾರದಿಂದ ₹1.5 ಕೊಟಿ ಅನುದಾನ ಬಿಡುಗಡೆಯಾಗಿದೆ’ ಎಂದು ತಿಳಿಸಿದರು.

‘ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಮತ್ತು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜನ್ನು ಒಟ್ಟುಗೂಡಿಸಿ ನೂತನವಾಗಿ ಶೈಕ್ಷಣಿಕ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ಉದ್ದೇಶಿತ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗಿದ್ದು, ಇನ್ನಷ್ಟೇ ಅಂತಿಮವಾಗಬೇಕಿದೆ. ಉತ್ತಮ ಶಾಲಾ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಆಡಿಟೋರಿಯಂ ಒಳಗೊಂಡ ಶೈಕ್ಷಣಿಕ ಹಬ್ ನಿರ್ಮಿಸುವ ಯೋಜನೆ ಇದೆ. ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

‘ಜಿಂದಾಲ್ ಕೋವಿಡ್ ಕೇಂದ್ರದಲ್ಲಿ 66 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಮೂರನೇ ಅಲೆ ಎದುರಿಸಲು ಸಿದ್ಧತೆ ನಡೆಸುತ್ತಿದೆ. ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ಮಕ್ಕಳ ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಜಿಂದಾಲ್ ಕೋವಿಡ್ ಕೇಂದ್ರದಲ್ಲಿ 250 ಹಾಸಿಗೆಯ ಒಂದು ಬ್ಲಾಕ್ ಅನ್ನು ಮಕ್ಕಳ ಚಿಕಿತ್ಸೆಗೆ ಮೀಸಲಿಡಲಾಗಿದೆ’ ಎಂದರು.

‘ಹರಪನಹಳ್ಳಿ ಭಾಗದ ಜನರಿಗೆ ಜಿಲ್ಲಾ ಕೇಂದ್ರ ದೂರವಾಗುವ ಕಾರಣ ತಾಲ್ಲೂಕು ಕೇಂದ್ರದಲ್ಲೇ 50 ಹಾಸಿಗೆಗೆ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ. ಪ್ರತಿ ತಾಲ್ಲೂಕಿನಲ್ಲಿ 6 ಕೆ.ಎಲ್‌. ಸಾಮರ್ಥ್ಯದ ಆಮ್ಲಜನಕ ಟ್ಯಾಂಕರ್ ಆಳವಡಿಸಲು ಯೋಚಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಉಪವಿಭಾಗಧಿಕಾರಿ ಸಿದ್ದರಾಮೇಶ್ವರ, ಡಿವೈಎಸ್ಪಿ ವಿ. ರಘುಕುಮಾರ್, ಗ್ರಾಮೀಣ ಠಾಣೆಯ ಪಿಐ ಶ್ರೀನಿವಾಸ ಮೇಟಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಕಂದಾಯ ಇಲಾಖೆಯ ಮಲ್ಲಿಕಾರ್ಜುನ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT