ಹೊಸಪೇಟೆ (ವಿಜಯನಗರ): ಹೈದರಾಬಾದ್‌ನ ಕ್ರಾಂತಿ ವೆಂಗಲ ಮತ್ತು ಸಹ ಚಾಲಕ ಧನರಾಜ್ ರೆಡ್ಡಿ ಅವರು ವಿಜಯನಗರ ಮೋಟಾರ್‌ಸ್ಫೋರ್ಟ್ಸ್ ಅಕಾಡೆಮಿ ವತಿಯಿಂದ ನಡೆದ ‘ಉತ್ಸವ್ ದಿ ಹಂಪಿ’ ಆಫ್‌ರೋಡ್ ರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್‌ನ ಪ್ರೊ ಮಾಡಿಫೈಡ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಎರಡು ದಿನ ನಡೆದ ಈ ಸಾಹಸ ಕ್ರೀಡೆಯ ಅಂತಿಮ ಸುತ್ತಿನ ಸ್ಪರ್ಧೆಗಳು ಭಾನುವಾರ ಸಂಜೆ ನಡೆದವು. ಕಡಿದಾದ ಬೆಟ್ಟ, ಕಣಿವೆಗಳಲ್ಲಿ ಸಾಹಸ ಪ್ರದರ್ಶಿಸುವ ಪ್ರೊ ಮಾಡಿಫೈಡ್ ವಿಭಾಗದಲ್ಲಿ ಕೊನೆಯದಾಗಿ ತಮ್ಮ ವಾಹನವನ್ನು ರಾಜಾಪುರ ಬೆಟ್ಟದ ಕಂದಕಕ್ಕೆ ಇಳಿಸಿ ಯಶಸ್ವಿಯಾಗಿ ಮೇಲೆ ತಂದ ಕ್ರಾಂತಿ ವೆಂಗಲ ಅವರು ಒಟ್ಟು 536 ಪಾಯಿಂಟ್‌ಗಳೊಂದಿಗೆ ಮೊದಲಿಗರಾಗಿ ಗೆಲುವಿನ ನಗೆ ಬೀರಿದರು. ಧನರಾಜ್ ರೆಡ್ಡಿ ಪೂರಕ ನೆರವು ನೀಡಿದರು.
‘ನಾನು ಸತತ ನಾಲ್ಕನೇ ಬಾರಿ ಹೊಸಪೇಟೆಯಲ್ಲಿ ರಾಷ್ಟ್ರೀಯ ಆಫ್‌ರೋಡ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇನೆ. ಇಲ್ಲಿನ ಆಫ್‌ರೋಡ್ ಟ್ರ್ಯಾಕ್‌ಗಳು ಸವಾಲಿನದ್ದಾಗಿದ್ದು, ಇಲ್ಲಿ ಯಶಸ್ವಿಯಾಗಿ ಸ್ಪರ್ಧೆ ಪೂರೈಸಿದ್ದಕ್ಕೆ ಖುಷಿ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಇತರ ಫಲಿತಾಂಶ: ಮಹಿಳಾ ವಿಭಾಗ–ಮೀನಾ ಶ್ರೀಕಾಂತ್ ಮತ್ತು ಅಭಿನಂದಾ, ಮಂಗಳೂರು (585), ಮಾಡಿಫೈಡ್ ಪೆಟ್ರೋಲ್–ಪೆಂಟಾ ರೆಡ್ಡಿ ಮತ್ತು ಗೋವರ್ಧನ್ ರೆಡ್ಡಿ, ಹೈದರಾಬಾದ್ (410), ಮಾಡಿಫೈಡ್ ಡೀಸೆಲ್–ಸುಭಾಷ್ ಮತ್ತು ಅನಿರುದ್ಧ (505), ಸ್ಟಾಕ್ ಪೆಟ್ರೋಲ್– ಪ್ರತಾಪ್ ರಾಜೇಂದ್ರ ಕರಾಡಕರ್ ಮತ್ತು ಕಾಳಿದಾಸ್ ಡೋಂಗ್ರೆ, ಮಹಾರಾಷ್ಟ್ರ (548), ಸ್ಟಾಕ್ ಡೀಸೆಲ್–ಅಪ್ಪಣ್ಣ ಮತ್ತು ಶಮಂತ್, ಮಡಿಕೇರಿ (547), ಥಾರ್ 2020–ಆದರ್ಶ್ ಮತ್ತು ಚಂದ್ರಮೌಳಿ, ಬೆಂಗಳೂರು (565), ಜಿಮ್ಮಿ– ಸಾಬು ಮತ್ತು ರಾಜೀವ್ ಲಾಲ್, ಬೆಂಗಳೂರು (572)
ನಗರದಲ್ಲಿ ಭಾನುವಾರ ರಾತ್ರಿ ಪ್ರಶಸ್ತಿ ಪ್ರದಾನ ನಡೆಯಿತು. ಮುಂದಿನ ದಿನಗಳಲ್ಲಿ ಇಲ್ಲಿ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್ ಸಹಿತ ಐದರಿಂದ ಆರು ರಾಷ್ಟ್ರ ಮಟ್ಟದ ಮೋಟಾರ್ ಸ್ಫೋರ್ಟ್ಸ್ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಸಂಘಟಕರಲ್ಲಿ ಒಬ್ಬರಾದ ಬೆಂಗಳೂರಿನ ರೋಹಿತ್ ಗೌಡ ತಿಳಿಸಿದರು. ಇತರ ಸಂಘಟಕರಾದ ಸಂತೋಷ್ ಎಚ್.ಎಂ., ದರ್ಪಣ್ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.