ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪಶು ಲೋಕ'ದಿಂದ ಆದಾಯದ ದಾರಿ: ಸಚಿವ ಪ್ರಭು ಚವ್ಹಾಣ್‌

Last Updated 31 ಆಗಸ್ಟ್ 2021, 8:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ರಾಜ್ಯದ ಎಲ್ಲ ಕಡೆಗಳಲ್ಲಿ ‘ಪಶು ಲೋಕ’ ಕಾರ್ಯಕ್ರಮ ಆಯೋಜಿಸಿ ಆದಾಯದ ದಾರಿ ಕಂಡುಕೊಳ್ಳಲಾಗುವುದು’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದರು.

ಮಂಗಳವಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪಶು ಸಂಗೋಪನಾ ಇಲಾಖೆಗೆ ಯಾವುದೇ ರೀತಿಯ ನಿರ್ದಿಷ್ಟ ಆದಾಯ ಇಲ್ಲ. ರಾಜ್ಯದ ವಿವಿಧ ಕಡೆಗಳಲ್ಲಿ 100 ಎಕರೆ ಪ್ರದೇಶದಲ್ಲಿ ‘ಪಶು ಲೋಕ’ ಕಾರ್ಯಕ್ರಮ ಆಯೋಜಿಸಿ, ಎಲ್ಲ ತಳಿಗಳ ಜಾನುವಾರುಗಳನ್ನು ಪ್ರದರ್ಶಿಸಿ, ಮಾರಾಟ ಮಾಡಲಾಗುವುದು. ಪಶು ಮೇಳಗಳ ಮಾದರಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ‘ಪಶು ಲೋಕ’ ಕಾರ್ಯಕ್ರಮವನ್ನು ಎರಡು ವರ್ಷದೊಳಗೆ ಆರಂಭಿಸಲಾಗುವುದು. ಇದರಿಂದ ಇಲಾಖೆಗೆ ಆದಾಯ ಬರಲಿದೆ. ರೈತರಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ನೇರ ನೇಮಕಾತಿ ಮೂಲಕ ಪಶು ಸಹಾಯಕರು, ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು. ಈಗಾಗಲೇ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭಗೊಂಡಿವೆ. 13 ಕಡೆಗಳಲ್ಲಿ ಖಾಸಗಿ ಗೋಶಾಲೆ ಆರಂಭಿಸುವ ಚಿಂತನೆಯೂ ನಡೆದಿದೆ’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳ ಚಾಣಾಕ್ಷ, ಅನುಭವಿ ರಾಜಕಾರಣಿ. ಅವರ ನೇತೃತ್ವದ ಸರ್ಕಾರ ಈಗಾಗಲೇ ಟೇಕಾಫ್‌ ಆಗಿದೆ. ಎಲ್ಲ ಮಂತ್ರಿಗಳು ಅವರವರ ಜಿಲ್ಲೆಗೆ ಹೋಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ಅವರ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT