ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮನ ಘೋಷಣೆ, ಹಿಂದುತ್ವದ ಗುಣಗಾನ ತಪ್ಪಲ್ಲ: ಶ್ರೀರಾಮ ಸೇನೆ

Last Updated 7 ಅಕ್ಟೋಬರ್ 2021, 8:56 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ಸಮಾರೋಪದಲ್ಲಿ ಗಾಯಕಿ ಲಕ್ಷ್ಮಿ ದುಬೆ ಅವರ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌, ಅವರಿಗೆ ಅವಮಾನ ಮಾಡಿದ್ದಾರೆ’ ಎಂದು ಶ್ರೀರಾಮ ಸೇನೆ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಆರೋಪಿಸಿದರು.

‘ಲಕ್ಷ್ಮಿ ದುಬೆ ಅವರು ಪಾಕಿಸ್ತಾನದಲ್ಲಿ ನಿಂತು ಕಾರ್ಯಕ್ರಮ ಕೊಟ್ಟಿಲ್ಲ. ಶ್ರೀರಾಮನ ಘೋಷಣೆ, ಹಿಂದುತ್ವದ ಗುಣಗಾನ ಮಾಡಿದ್ದು ತಪ್ಪಿಲ್ಲ. ಅವರು ಅನ್ಯ ಧರ್ಮೀಯರನ್ನು ನಿಂದಿಸಿಲ್ಲ. ದುಬೆ ಅವರಿಗೆ ಅವಮಾನ ಮಾಡಿರುವ ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಇಷ್ಟೇ ಅಲ್ಲ, ಇಷ್ಟರಲ್ಲೇ ಶ್ರೀರಾಮ ಸೇನೆಯು ದುಬೆ ಅವರನ್ನು ವಿಜಯನಗರ ಜಿಲ್ಲೆಗೆ ಕರೆಸಿ, ಹಿಂದುತ್ವಕ್ಕೆ ಸಂಬಂಧಿಸಿದ ಕಾರ್ಯಕ್ರಮ ಸಂಘಟಿಸಲಾಗುವುದು. ಅವರಿಗೆ ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ್‌ ಮುತಾಲಿಕ್‌ ಸನ್ಮಾನ ಮಾಡುವರು’ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವಿಜಯನಗರ ಹಿಂದೂ ಸಾಮ್ರಾಜ್ಯದ ತವರೂರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿಯೇ ವಿಜಯನಗರದ ಹೆಸರಿನಲ್ಲಿ ಜಿಲ್ಲೆ ರಚಿಸಲಾಗಿದೆ. ಆದರೆ, ಕೆಲವರು ತಮ್ಮ ಬೆಳೆ ಬೇಯಿಸಿಕೊಳ್ಳಲು ಈ ತರಹದ ಆಟ ಆಡುತ್ತಿದ್ದಾರೆ. ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾದವರು (ಪಿಎಫ್‌ಐ) ದುಬೆ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದಾರೆ. ಹೋರಾಟಗಾರರ ವಿರುದ್ಧ ದೂರು ಕೊಡುವುದು ಅವರ ಚಾಳಿ. ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ ಆರು ಜನ ಸತ್ತಿದ್ದಾರೆ. ಇಂತಹ ವಿಷಯದ ಬಗ್ಗೆ ಪಿಎಫ್‌ಐನವರು ಒಂದು ದಿನವಾದರೂ ಮಾತನಾಡಿದ್ದಾರ?’ ಎಂದು ಪ್ರಶ್ನಿಸಿದರು.

‘ಹಿಂದೂ ಸಾಮ್ರಾಜ್ಯದ ಹೆಸರಿನಲ್ಲಿ ವಿಜಯನಗರ ಅಸ್ತಿತ್ವಕ್ಕೆ ಬಂದಿದೆ. ಎಲ್ಲರೂ ಅದರ ಬೆಳವಣಿಗೆಗೆ ಶ್ರಮಿಸಬೇಕು. ಹಿಂದೂಗಳು ಇರುವ ಏಕೈಕ ದೇಶವಿದು. ಭಾರತ, ಹಿಂದೂ ಸಮಾಜ ವಿರೋಧಿಗಳು ಈ ದೇಶ ಬಿಟ್ಟು ಬೇರೆ ಕಡೆ ಹೋಗಬಹುದು’ ಎಂದರು.

‘ಜಿಲ್ಲೆ ಉದ್ಘಾಟನಾ ಸಮಾರಂಭಕ್ಕೆ ಸ್ವಾಮೀಜಿಗಳನ್ನಷ್ಟೇ ಕರೆಯಲಾಗಿತ್ತು ಎಂದು ಕೆಲವರು ಆರೋಪಿಸಿದ್ದಾರೆ. ಆದರೆ, ಸಚಿವ ಆನಂದ್‌ ಸಿಂಗ್‌ ಅವರು ವಿಡಿಯೊ ಸಂದೇಶದ ಮೂಲಕ ಎಲ್ಲರಿಗೂ ಆಹ್ವಾನಿಸಿದ್ದಾರೆ. ಸ್ವಾಮೀಜಿಗಳು ಜಿಲ್ಲೆ ಹೋರಾಟದ ಭಾಗ ಕೂಡ ಆಗಿದ್ದರು. ಸಹಜವಾಗಿಯೇ ಅವರು ಬಂದಿದ್ದಾರೆ. ಅದಕ್ಕೆ ಆಕ್ಷೇಪ ಎತ್ತುವುದು ಎಷ್ಟರಮಟ್ಟಿಗೆ ಸರಿ?’ ಎಂದು ಕೇಳಿದರು.

‘ಆಸ್ಪತ್ರೆ, ನ್ಯಾಯಾಲಯ, ಸರ್ಕಾರಿ ಕಚೇರಿ, ಶಿಕ್ಷಣ ಕೇಂದ್ರ, ದೇವಸ್ಥಾನ, ಮಸೀದಿ, ಚರ್ಚ್‌ ಇರುವ ಪ್ರದೇಶಗಳನ್ನು ನಿಶಬ್ದ ವಲಯಗಳಾಗಿ ಘೋಷಿಸಬೇಕು. ಅತಿಯಾದ ಶಬ್ದ ಮಾಲಿನ್ಯದಿಂದ ಹಿರಿಯ ನಾಗರಿಕರು, ಮಕ್ಕಳು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ತೊಂದರೆಯಾಗುತ್ತಿದೆ’ ಎಂದು ಹೇಳಿದರು.
ಶ್ರೀರಾಮ ಸೇನೆಯ ತಾಲ್ಲೂಕು ಅಧ್ಯಕ್ಷ ಜಗದೀಶ ಕಾಮಟಿಗಿ, ಮುಖಂಡರಾದ ಮಧುಕುಮಾರ್‌, ಮಹಾಂತೇಶ್‌, ಮದನ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT