ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಫಲ ನೀಡದ ‘ಭಗೀರಥ’ ಪ್ರಯತ್ನ, ಅನುದಾನ ಇಲ್ಲದೆ ಅರ್ಧಕ್ಕೆ ನಿಂತ ಕಾಮಗಾರಿ

Published 8 ಡಿಸೆಂಬರ್ 2023, 6:32 IST
Last Updated 8 ಡಿಸೆಂಬರ್ 2023, 6:32 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಸಾವಿರಾರು ವಿಶ್ವವಿದ್ಯಾಲಯಗಳಿವೆ. ಆದರೆ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯ ಹಂಪಿಯ ಕನ್ನಡ ವಿಶ್ವವಿದ್ಯಾಲಯ. ಇದು ಕನ್ನಡಿಗರ ಹೆಮ್ಮೆ. ಈ ಜ್ಞಾನದೇಗುಲದ 686 ಎಕರೆ ಕ್ಯಾಂಪಸ್‌ನಲ್ಲಿ ಅನುದಾನದ ಕೊರತೆಯಿಂದ ಹಲವು ಕಾಮಗಾರಿಗಳು ಅಪೂರ್ಣಗೊಂಡಿವೆ. ಇದು ಪರೋಕ್ಷವಾಗಿ ವಿಶ್ವವಿದ್ಯಾಲಯ ಪರಮ ಧ್ಯೇಯವಾದ ಸಂಶೋಧನೆ, ವ್ಯಾಸಂಗ, ಉನ್ನತ ಅಧ್ಯಯನಗಳಿಗೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸರಣಿ ಇಲ್ಲಿದೆ.

***

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಸುಮಾರು 686 ಎಕರೆ ವಿಸ್ತೀರ್ಣದ ಕ್ಯಾಂಪಸ್‌ಗೆ ಅಗತ್ಯವಿರುವ ನೀರು ಹರಿಸಲು ಭಗೀರಥ ಪ್ರಯತ್ನವೇ ನಡೆದಿದ್ದರೂ, ಅನುದಾನದ ಕೊರತೆಯಿಂದ ಅದು ಇನ್ನೂ ಫಲಿಸಲಿಲ್ಲ.

ಕ್ಯಾಂಪಸ್‌ ಪಕ್ಕದಲ್ಲಿ ಬೃಹತ್ ಕೆರೆ ಇದೆ. ಅದರ ನೀರನ್ನು ಬಳಸುವುದಕ್ಕೆ ರೈತರ ಆಕ್ಷೇಪ ಇದೆ. ಪಕ್ಕದಲ್ಲೇ ತುಂಗಭದ್ರಾ ನದಿಯ ಎಚ್‌ಎಲ್‌ಸಿ ಕಾಲುವೆ ಇದೆ. ವರ್ಷದ 10 ತಿಂಗಳೂ ಅದರಲ್ಲಿ ನೀರು ಹರಿಯುತ್ತದೆ. ಈ ಕಾಲುವೆಯಿಂದ ವರ್ಷಕ್ಕೆ 2 ಕ್ಯುಸೆಕ್‌ನಷ್ಟು ನೀರನ್ನು ಬಳಸಿಕೊಳ್ಳುವುದಕ್ಕೆ ವಿಶ್ವವಿದ್ಯಾಲಯಕ್ಕೆ ಅನುಮತಿ ಇದೆ. ಇಷ್ಟೆಲ್ಲ ಇದ್ದರೂ ಕ್ಯಾಂಪಸ್‌ನಲ್ಲಿ ಮಾತ್ರ ಬೇಸಿಗೆಯಲ್ಲಿ ಎರಡರಿಂದ ಮೂರು ತಿಂಗಳು ನೀರಿನ ತೀವ್ರ ಕೊರತೆ ಎದುರಾಗುತ್ತದೆ.

ಅನುದಾನ ಕೊರತೆಯಿಂದ ಎರಡು ಬೃಹತ್‌ ಟ್ಯಾಂಕ್‌ಗಳು ನಿರ್ಮಾಣಗೊಳ್ಳದೆ ಇರುವುದು ಇದಕ್ಕೆ ಮುಖ್ಯ ಕಾರಣ. ಮುಖ್ಯಮಂತ್ರಿ ಅವರ ವಿವೇಚನಾ ನಿಧಿಯಡಿ ಕೆಕೆಆರ್‌ಡಿಬಿ ನೀಡಿದ ಅನುದಾನದಲ್ಲಿ 2 ಕೋಟಿ ಲೀಟರ್ ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್ ನಿರ್ಮಾಣ ಕಾರ್ಯ ಆರಂಭಿಕ ಹಂತದಲ್ಲೇ ಸ್ಥಗಿತಗೊಂಡಿದ್ದು, 8 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್‌ನ ನಿರ್ಮಾಣ ಶೇ 80ರಷ್ಟು ಪೂರ್ಣಗೊಂಡಿದೆ. 9 ಇಂಚಿನ ನೀರಿನ ಪೈಪ್‌ ಸಹಿತ, ಇತರ ಪೂರೈಕೆ ಪೈಪ್‌ಗಳ ಖರ್ಚು ಸೇರಿದಂತೆ ಒಟ್ಟು ₹6.50 ಕೋಟಿ ವೆಚ್ಚದ ಯೋಜನೆ ಇದು. ಸದ್ಯ ಶೇ 40ರಷ್ಟು ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದ್ದು, ಅನುದಾನ ಬಾರದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ.

‘ವಸತಿನಿಲಯ, ಅತಿಥಿಗೃಹ ಸಹಿತ ಕ್ಯಾಂಪಸ್‌ನಲ್ಲಿನ ಪೈಪ್‌ಗಳೆಲ್ಲ 30 ವರ್ಷದಷ್ಟು ಹಳೆಯವು. ಅವುಗಳನ್ನೆಲ್ಲ ಬದಲಿಸಿ ಹೊಸ ಪೈಪ್‌ ಅಳವಡಿಸಬೇಕಾಗಿದೆ. ಈ ಎರಡು ಟ್ಯಾಂಕ್‌ಗಳು ನಿರ್ಮಾಣಗೊಂಡರೆ ನೀರಿನ ಮಿತವ್ಯಯವೂ ಸಾಧ್ಯವಾಗಲಿದೆ. ಕಾಲುವೆಯಿಂದ ನೀರು ಪಡೆಯುವ ಪ್ರಮಾಣವನ್ನೂ ತಗ್ಗಿಸಬಹುದು. ಸರ್ಕಾರಕ್ಕೆ ಮನವರಿಕೆ ಮಾಡಿ ಕೆಕೆಆರ್‌ಡಿಬಿಯಿಂದ ಬಾಕಿ ಹಣ ಪಡೆಯಲು ಪ್ರಯತ್ನ ನಡೆದಿದೆ’ ಎಂದು ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಯಾಂಪಸ್‌ನಲ್ಲಿ ಸುಸಜ್ಜಿತ ಫಿಲ್ಟರ್ ವ್ಯವಸ್ಥೆ ಇದ್ದು, ಬೇಸಿಗೆ ಕಾಲದಲ್ಲಿ 2–3 ತಿಂಗಳ ನೀರು ಪೂರೈಕೆಯೇ ಎದುರಾಗಿರುವ ದೊಡ್ಡ ಸಮಸ್ಯೆ. ಈ ಎರಡೂ ಟ್ಯಾಂಕ್‌ಗಳು ನಿರ್ಮಾಣಗೊಂಡರೆ ನೀರಿನ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ’ ಎಂದರು.

2 ಕೋಟಿ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್‌ ನಿರ್ಮಾಣ ಕಾರ್ಯ ಆರಂಭಿಕ ಹಂತದಲ್ಲೇ ಸ್ಥಗಿತಗೊಂಡಿದೆ
2 ಕೋಟಿ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್‌ ನಿರ್ಮಾಣ ಕಾರ್ಯ ಆರಂಭಿಕ ಹಂತದಲ್ಲೇ ಸ್ಥಗಿತಗೊಂಡಿದೆ
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ

ಕೋರ್ಸ್‌ ವರ್ಕ್ ವೇಳೆ ದಟ್ಟಣೆ

ವಿಶ್ವವಿದ್ಯಾಲಯದಲ್ಲಿ ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿ ಕೋರ್ಸ್‌ ವರ್ಕ್ ನಡೆಯುತ್ತದೆ. ಇದು ಪಿಎಚ್‌.ಡಿ. ವ್ಯಾಸಂಗಕ್ಕೆ ಇರುವ ಒಂದು ರೀತಿಯ ಪ್ರವೇಶ ಪರೀಕ್ಷೆ. ಒಂದು ಕೋರ್ಸ್‌ ವರ್ಕ್‌ 4ರಿಂದ 5 ದಿನ ನಡೆಯುತ್ತದೆ. ಆ ಸಮಯದಲ್ಲಿ ಕ್ಯಾಂಪಸ್‌ನಲ್ಲಿ ತಂಗುವ ಜನರ ಸಂಖ್ಯೆ 2 ಸಾವಿರ ಮಿಕ್ಕಿ ಇರುತ್ತದೆ. ಇವರಿಗೆಲ್ಲ ನೀರು ಪೂರೈಸುವ ಹೊಣೆಗಾರಿಕೆ ವಿಶ್ವವಿದ್ಯಾಲಯಕ್ಕೆ ಇದೆ.

ಸದ್ಯ ನೀರು ಎಷ್ಟು ಪ್ರಮಾಣದಲ್ಲಿ ಖರ್ಚಾಗುತ್ತಿದೆ ಎಂದು ಲೆಕ್ಕ ಇಡಲು ಸಾಧ್ಯವಾಗುತ್ತಿಲ್ಲ. ಟ್ಯಾಂಕ್‌ ನಿರ್ಮಾಣವಾದರೆ ನಿಖರ ಲೆಕ್ಕ ಸಿಗುತ್ತದೆ ನೀರಿನ ಉಳಿತಾಯವೂ ಆಗಲಿದೆ
- ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT